ಧೋನಿ ನಾಯಕತ್ವದಲ್ಲಿ ಇಂದು ಕಡೇ ಆಟ

ಮುಂಬೈ(ಜ.10):ಭಾರತ ಕ್ರಿಕೆಟ್‌ ಕಂಡ ಯಶಸ್ವಿ ನಾಯಕ ಎಂ.ಎಸ್‌. ಧೋನಿಯ ಸಾರಥ್ಯದ ಕಡೇ ಆಟಕ್ಕೆ ವೇದಿಕೆ ಸಜ್ಜಾಗಿದ್ದು, ಇಂದು ನಡೆಯಲಿರುವ ಪ್ರವಾಸಿ ಇಂಗ್ಲೆಂಡ್‌ ವಿರುದ್ಧದ ಮೊದಲ ಅಭ್ಯಾಸ ಪಂದ್ಯದಲ್ಲಿ ರಾಂಚಿ ಕ್ರಿಕೆಟಿಗ ಭಾರತ ‘ಎ’ ತಂಡವನ್ನು ಮುನ್ನಡೆಸಲಿದ್ದಾರೆ.

ಸೀಮಿತ ಓವರ್‌ಗಳ ಟೀಂ ಇಂಡಿಯಾ ನಾಯಕನ ಸ್ಥಾನದಿಂದ ಕೆಳಗಿಳಿಯುವ ನಿರ್ಧಾರವನ್ನು ಕಳೆದ ಬುಧವಾರ ಪ್ರಕಟಿಸಿ ಇಡೀ ಕ್ರಿಕೆಟ್‌ ವಲಯವನ್ನೇ ಚಕಿತಗೊಳಿಸಿದ್ದ ಧೋನಿ, ಮೂರೂ ಪ್ರಕಾರದ ಕ್ರಿಕೆಟ್‌’ನಲ್ಲಿ ವಿರಾಟ್‌ ಕೊಹ್ಲಿಗೆ ಸಾರಥ್ಯ ಕಟ್ಟಲು ನೆರವಾಗಿದ್ದರು. ಇಲ್ಲಿನ ಬ್ರೆಬೋರ್ನ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಧೋನಿಯ ಕಡೆಯ ನಾಯಕತ್ವದ ಆಟವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್‌ ಪ್ರೇಮಿಗಳು ಕಾತರದಲ್ಲಿದ್ದಾರೆ. ಅಂದಹಾಗೆ ಈ ಪಂದ್ಯದಲ್ಲಿ ಕೊಹ್ಲಿ ಆಡುತ್ತಿಲ್ಲ ಎಂಬುದು ಗಮನೀಯ. ನಾಯಕತ್ವ ತ್ಯಜಿಸಿದ ಮೊದಲ ಪಂದ್ಯಕ್ಕೆ ಅಣಿಯಾಗಿರುವ ಧೋನಿ, ತಂಡವನ್ನು ಗೆಲುವಿನತ್ತ ಮುನ್ನಡೆಸುವ ಗುರಿ ಹೊತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕ್ರಿಕೆಟ್‌ ಪ್ರೇಮಿಗಳು ಆಗಮಿಸುವ ನಿರೀಕ್ಷೆಯಿಂದಾಗಿ ವ್ಯಾಪಕ ಪೊಲೀಸ್‌ ಭದ್ರತೆ ಕಲ್ಪಿಸಲಾಗಿದೆ. ಅಂದಹಾಗೆ 12ರಂದು ನಡೆಯಲಿರುವ ಎರಡನೇ ಹಾಗೂ ಕೊನೆಯ ಅಭ್ಯಾಸ ಪಂದ್ಯದಲ್ಲಿ ಅಜಿಂಕ್ಯ ರಹಾನೆ ತಂಡವನ್ನು ಮುನ್ನಡೆಸಲಿದ್ದಾರೆ.

Leave a Comment