ಧೋನಿ ಟೀಕಕಾರರಿಗೆ ಶಾಸ್ತ್ರಿ ಪ್ರತ್ಯುತ್ತರ

ಕೋಲ್ಕತ್ತಾ, ನ ೧೦- ಟೀಂ ಇಂಡಿಯಾದ ದಿಗ್ಗಜ ಹಾಗೂ ಅತ್ಯುತ್ತಮ ಆಟಗಾರ ಎನಿಸಿಕೊಂಡಿರುವ ಮಹೇಂದ್ರ ಸಿಂಗ್ ಧೋನಿ ಅವರ ಮೇಲೆ ಅಸೂಯೆ ಹೊಂದಿರುವ ಕೆಲವು ಮಂದಿ ಮಾತ್ರ ಅವರ ಕ್ರಿಕೆಟ್ ಕ್ಷೇತ್ರದಲ್ಲಿ ಅಂತ್ಯವನ್ನು ಎದುರು ನೋಡುತ್ತಿದ್ದಾರೆ ಎಂದು ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಟೀಕಕಾರರಿಗೆ ಉತ್ತರ ನೀಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ರವಿಶಾಸ್ತ್ರಿ, ಧೋನಿ ಓರ್ವ ಅತ್ಯುತ್ತಮ ಆಟಗಾರನಾಗಿದ್ದಾರೆ. ಅಸೂಯೆ ಹೊಂದಿರುವ ಕೆಲವು ಜನ ಧೋನಿ ಅವರಿಗೆ ಕೆಟ್ಟ ದಿನಗಳನ್ನು ತರಬೇಕೆಂದು ಬಯಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ತಂಡದಲ್ಲಿ ಮಹೇಂದ್ರ ಸಿಂಗ್ ಧೋನಿಯ ಸ್ಥಾನ ಏನೆಂಬುದು ನಮಗೆಲ್ಲ ಸ್ಪಷ್ಟವಾಗಿ ಗೊತ್ತಿದೆ. ಈ ರೀತಿಯ ಟೀಕೆಗಳಿಂದ ಯಾವುದೇ ವ್ಯತ್ಯಾಸ ಉಂಟಾಗುವುದಿಲ್ಲ. ಧೋನಿ ಓರ್ವ ಅತ್ಯುತ್ತಮ ಮುಂದಾಳು, ಜೊತೆಗೆ ಅತ್ಯುತ್ತಮ ಮುಖಂಡ ಎಂದೂ ಶಾಸ್ತ್ರಿ ಹೊಗಳಿದ್ದಾರೆ.

ಹೊಟ್ಟೆಕಿಚ್ಚು ಇರುವ ಕೆಲವು ಮಂದಿ ಧೋನಿಯ ಅಂತಾರಾಷ್ಟ್ರೀಯ ಕ್ರಿಕೆಟ್ ಯುಗದ ಅಂತ್ಯವನ್ನು ಎದುರು ನೋಡುತ್ತಿದ್ದಾರೆ ಎಂದು ಟೀಕಿಸುತ್ತಿರುವವರ ವಿರುದ್ಧ ಹರಿಹಾಯ್ದಿದ್ದಾರೆ. ಟಿ-೨೦ ಕ್ರಿಕೆಟ್ ಧೋನಿ ನಿವೃತ್ತಿ ಘೋಷಿಸುವುದು ಉತ್ತಮ ಎಂದು ಕೆಲವು ಮಾಜಿ ಕ್ರಿಕೆಟಿಗರು ಮತ್ತು ತಜ್ಞರು ಹೇಳಿರುವ ಕುರಿತು ಪ್ರತಿಕ್ರಿಯಿಸಿದ್ದಾರೆ.

ಪಿಚ್ ವೀಕ್ಷಣೆ ಮಾಡಿದ ಧೋನಿ
ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಆದರೂ ಭಾರತ-ಶ್ರೀಲಂಕಾ ಟೆಸ್ಟ್ ಪಂದ್ಯಕ್ಕೆ ಯಾವ ರೀತಿ ತಯಾರಿ ನಡೆಯುತ್ತಿದೆ ಎಂಬುದನ್ನು ವೀಕ್ಷಿಸಲು ಕೋಲ್ಕತ್ತಾಗೆ ಹೋಗಿದ್ದರು. ನವೆಂಬರ್ ೧೬-೨೦ ರವರೆಗೆ ಈಡನ್ ಗಾರ್ಡನ್ ನಲ್ಲಿ ಶ್ರೀಲಂಕಾ ವಿರುದ್ಧ ಟೀಮ್ ಇಂಡಿಯಾ ಮೊದಲ ಟೆಸ್ಟ್ ಪಂದ್ಯವನ್ನಾಡಲಿದೆ. ನಿನ್ನೆ ಬೆಳಿಗ್ಗೆ ಈಡನ್ ಗಾರ್ಡನ್ ಗೆ ತೆರಳಿದ ಎಂ.ಎಸ್. ಧೋನಿ ಟೆಸ್ಟ್ ಗೆ ನಡೆಯುತ್ತಿರುವ ತಯಾರಿಯನ್ನು ವೀಕ್ಷಿಸಿದರು. ಜೊತೆಗೆ ಟೀಂ ಇಂಡಿಯಾಕ್ಕೆ ಶುಭಕೋರಿದರು.
ವಾಸ್ತವವಾಗಿ ಮಹೇಂದ್ರ ಸಿಂಗ್ ಧೋನಿ ಜಾಹೀರಾತಿಗಾಗಿ ಈಡನ್ ಗಾರ್ಡನ್ ಗೆ ಬಂದಿದ್ದರು. ಮಾಜಿ ಆಟಗಾರ ಕಪಿಲ್ ದೇವ್ ಕೂಡ ಧೋನಿ ಜೊತೆ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜಾಹೀರಾತಿನ ಚಿತ್ರೀಕರಣದ ಹಿನ್ನೆಲೆಯಲ್ಲಿ ಇಡೀ ದಿನ ಧೋನಿ ಹಾಗೂ ಕಪಿಲ್ ಬ್ಯಾಟಿಂಗ್ ಹಾಗೂ ಬೌಲಿಂಗ್ ಮಾಡಿದ್ದರು. ಕೆಲ ಮಕ್ಕಳು ಕೂಡ ಧೋನಿ, ಕಪಿಲ್ ಜೊತೆ ಆಟವಾಡಿದರು.

Leave a Comment