ಧೋನಿ ಕೋಪಕ್ಕೆ ಕುಲದೀಪ್ ಕಕ್ಕಾಬಿಕ್ಕಿ

ನವದೆಹಲಿ, ಜು ೧೨- ಇತ್ತೀಚೆಗೆ ಟೀಂ ಇಂಡಿಯಾದಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ಸ್ಪಿನ್ ಸೆನ್ಸೇಷನ್ ಕುಲದೀಪ್ ಯಾದವ್ ಅವರು ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರ ಕೋಪಕ್ಕೆ ತುತ್ತಾಗಿ ಕಕ್ಕಾಬಿಕ್ಕಿಯಾಗಿದ್ದ ಬಗ್ಗೆ ಹೇಳಿಕೊಂಡಿದ್ದಾರೆ.

ಖಾಸಗಿ ವಾಹಿನಿಯ ಕ್ರೀಡಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕುಲದೀಪ್ ಯಾದವ್ ಅವರಿಗೆ ನಿರೂಪಕನೊಬ್ಬ ಇಂದೋರ್‌ನಲ್ಲಿ ಶ್ರೀಲಂಕಾ ವಿರುದ್ಧದ ೨ನೇ ಟಿ೨೦ ಪಂದ್ಯದ ಬಗ್ಗೆ ಕೇಳಿದ ಪ್ರಶ್ನೆಗೆ ಅಂದು ಧೋನಿ ಅವರ ಕೋಪ ಎಂತಹದು ಎಂದು ಗೊತ್ತಾಯಿತು  ಎಂದು ವಿವರಿಸಿದಲ್ಲದೇ  ನಿಜಕ್ಕೂ ಧೋನಿ ಅವರ ಕೋಪದಿಂದ ನಾನು ಅಂದು ಪತರ ಗುಟ್ಟಿ ಹೋಗಿದ್ದೆ ಎಂದು ಹೇಳಿಕೊಂಡಿದ್ದಾರೆ.

ಆದರೆ ಅಂದು ಧೋನಿ ಕೋಪಗೊಂಡಿದ್ದರಿಂದ ಫೀಲ್ಡಿಂಗ್ ಸೆಟಪ್ ಚೇಂಜ್ ಮಾಡಿದ ಪರಿಣಾಮ ನಾನು ವಿಕೆಟ್ ಪಡೆಯುವಂತಾಗಿತ್ತು ಎಂದು ಯಾದವ್ ತಮ್ಮ ಅನುಭವ ಹೇಳಿಕೊಂಡಿದ್ದಾರೆ. ಅಂದು  ಕುಲದೀಪ್ ರೊಂದಿಗೆ ಯಜುವೇಂದ್ರ ಚಾಹಲ್ ಕೂಡ ಜೊತೆಗಿದ್ದರು.

ಕ್ಯಾಪ್ಟನ್ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಅಂದು ಉಪನಾಯಕ ರೋಹಿತ್ ಶರ್ಮಾ ತಂಡದ ಸಾರಥ್ಯವಹಿಸಿದ್ದರು.ಇಂದೋರ್ ೨ನೇ ಟಿ೨೦ ಪಂದ್ಯದಲ್ಲಿ ಶ್ರೀಲಂಕಾ ತಂಡ ಅಂದು ಉತ್ತಮ ಸ್ಥಿತಿಯಲ್ಲಿತ್ತು. ನನ್ನ ಬೌಲಿಂಗ್ ವೇಳೆ ಪದೇ ಪದೇ ಎದುರಾಳಿ ಬ್ಯಾಟ್ಸಮನ್ ಗಳು ಸಿಕ್ಸರ್ ಹೊಡೆಯುತ್ತಿದ್ದರು. ಮೈದಾನ ಕೂಡ ಚಿಕ್ಕದಾಗಿತ್ತು. ಈ ವೇಳೆ ನನ್ನ ಬಳಿ ಬಂದ ಧೋನಿ ಫೀಲ್ಡಿಂಗ್ ನಲ್ಲಿ ಬದಲಾವಣೆ ಮಾಡಲು ಹೇಳಿದರು. ಆದರೆ ಆಗ ಇದ್ದ ಫೀಲ್ಡಿಂಗ್ ಸೆಟಪ್ ಸರಿಯಾಗಿದೆ ಎಂದು ನನಗನ್ನಿಸಿತ್ತು, ಇದನ್ನೇ ನಾನು ಧೋನಿ ಬಳಿ ಹೇಳಿದೆ. ಆಗ ಧೋನಿ ಕವರ್ ಫೀಲ್ಡರ್ ತೆಗೆದು ಡೀಪ್ ಗೆ ಹಾಕುವಂತೆಯೂ ಪಾಯಿಂಟ್ ನಲ್ಲಿ ಫೀಲ್ಜರ್ ನಿಲ್ಲಿಸುವಂತೆ ಸೂಚಿಸಿದರು. ಆದರೆ ಅದು ಸರಿಯಲ್ಲ. ಈಗಿರುವ ಫೀಲ್ಡಿಂಗ್ ಸರಿ ಇದೆ ಎಂದು ನಾನು ಹೇಳಿದೆ. ಆಗ ಧೋನಿ ನನ್ನನ್ನು ಗದರಿಸಿದರು.

ನನ್ನನ್ನೇನು ಹುಚ್ಚಾ ಎಂದು ಕೊಂಡೆಯಾ? ೩೦೦ ಏಕದಿನ ಪಂದ್ಯಗಳನ್ನು ಆಡಿದ್ದೇನೆ.. ಎಂದು ಹೇಳಿದರು. ಅವರ ಒಂದು ಮಾತಿಗೇ ನಾನು ಪತರಗುಟ್ಟಿ ಹೋಗಿದ್ದೆ. ಬಳಿಕ ಫೀಲ್ಡಿಂಗ್ ಸೆಟಪ್ ಬದಲಾವಣೆ ಮಾಡಿ ಧೋನಿ  ಹೇಳಿದಂತೆ ಫೀಲ್ಡರ್ ಗಳನ್ನು ಬದಲಾಯಿಸಿದೆ. ಅಚ್ಚರಿ ಎಂದರೆ ಫೀಲ್ಡಿಂಗ್ ಬದಲಾವಣೆ ಮಾಡಿದ ಬಳಿಕ ನನಗೆ ವಿಕೆಟ್ ಬಿತ್ತು.. ಅಂದಿನ ಪಂದ್ಯದಲ್ಲಿ ನಾನು ೩ ವಿಕೆಟ್ ಪಡೆದು ೫೨ ರನ್ ಗಳನ್ನು ನೀಡಿದ್ದೆ ಎಂದು ಕುಲದೀಪ್ ಯಾದವ್ ಹೇಳಿದ್ದಾರೆ.

Leave a Comment