ಧೋನಿ ಅನುಪಸ್ಥಿತಿ ಕಾಡುತ್ತಿದೆ- ಚಹಾಲ್

ನವದೆಹಲಿ, ಜ ೨೮- ಕಪಿಲ್ ದೇವ್ ನಂತರ ಟೀಂ ಇಂಡಿಯಾಗೆ ಎರಡು ಬಾರಿ ವಿಶ್ವಕಪ್ ತಂದುಕೊಟ್ಟ ಮಾಜಿ ನಾಯಕ ಎಂ.ಎಸ್.ಧೋನಿ ಅವರನ್ನು ಪದೇ ಪದೇ ಆಟಗಾರರು ನೆನಸಿಕೊಂಡು ಅವರ ಬರುವಿಕೆಗಾಗಿ ಎದುರು ನೋಡುತ್ತಿದ್ದಾರೆ ಎಂಬ ಅಚ್ಚರಿ ಸಂಗತಿಯೊಂದನ್ನು ಬೌಲರ್ ಯಜುವೇಂದ್ರ ಚಹಾಲ್ ಬಹಿರಂಗ ಪಡಿಸಿದ್ದಾರೆ.
ಬಿಸಿಸಿಐನ ಪರವಾಗಿ ಭಾರತ ತಂಡದ ಲೆಗ್ ಸ್ಪಿನ್ನರ್ ಯಜವೇಂದ್ರ ಚಾಹಲ್ ನಡೆಸಿಕೊಡುವ ಚಹಾಲ್ ಟಿವಿ ಕಾರ್ಯಕ್ರಮದಲ್ಲಿ ಈ ಸಂಗತಿ ಬಹಿರಂಗವಾಗಿದೆ. ಭಾರತ ತಂಡ ಪ್ರಸ್ತುತ ನ್ಯೂಜಿಲೆಂಡ್ ಪ್ರವಾಸದಲ್ಲಿದೆ. ಚಹಾಲ್ ತಮ್ಮ ಕಾರ್ಯಕ್ರಮದ ಮೂಲಕ ಭಾರತ ತಂಡದ ಬಸ್‌ನ ಒಳಗಿನ ನೋಟವನ್ನು ಅಭಿಮಾನಿಗಳಿಗೆ ತೋರಿಸಿಕೊಟ್ಟಿದ್ದಾರೆ. ಆ ವೇಳೆ ಬಸ್‌ನ ಹಿಂಬದಿಯಲ್ಲಿರುವ ಸೀಟ್‌ವೊಂದನ್ನು ಧೋನಿಗಾಗಿ ಸದಾ ಮೀಸಲಿಟ್ಟಿರುವ ಬಗ್ಗೆ ಚಹಾಲ್ ಹೇಳಿದ್ದಾರೆ.
ಭಾರತ ತಂಡ ಎಲ್ಲೇ ಹೋದರೂ ತಂಡದ ಬಸ್‌ನ ಹಿಂಬದಿಯಲ್ಲಿರುವ ಬಲ ಭಾಗದ ಕಾರ್ನರ್ ಸೀಟ್ ಮಾಜಿ ನಾಯಕ ಎಂಎಸ್ ಧೋನಿ ಅವರಿಗೆ ಮೀಸಲಿಟ್ಟಿರುವ ಸಂಗತಿ ಬಹಿರಂಗವಾಗಿದೆ. ಈಗಲೂ ತಂಡದ ಆಟಗಾರರು ಧೋನಿ ಬರುವಿಕೆಯನ್ನು ಎದುರು ನೋಡುತ್ತಿದ್ದು, ಅವರಿಗೆ ಮೀಸಲಿಟ್ಟಿರುವ ಸೀಟ್‌ನಲ್ಲಿ ಯಾರೊಬ್ಬರೂ ಕುಳಿತುಕೊಳ್ಳುವುದಿಲ್ಲ ಅದು ಖಾಲಿ ಉಳಿದಿರುತ್ತದೆ ಎಂದು ಚಹಾಲ್ ಮಹತ್ವದ ವಿಷಯವನ್ನು ಬಹಿರಂಗ ಪಡಿಸಿದ್ದಾರೆ.
ಭಾರತ ತಂಡ ನ್ಯೂಜಿಲೆಂಡ್ ವಿರುದ್ಧದ ಟಿ೨೦ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಜಯ ದಾಖಲಿಸಿದ್ದು, ೩ನೇ ಪಂದ್ಯ ಸಲುವಾಗಿ ಆಕ್ಲೆಂಡ್ನಿಂದ ಹ್ಯಾಮಿಲ್ಟನ್‌ಗೆ ಬಸ್ ಮಾರ್ಗವಾಗಿ ಪ್ರಯಾಣಿಸುವ ವೇಳೆ ಚಹಾಲ್ ಈ ಒಂದು ವೀಡಿಯೋ ಮಾಡಿದ್ದಾರೆ.
ಚಹಾಲ್ ಟಿವಿಯಲ್ಲಿ ಈವರೆಗೆ ಒಬ್ಬ ಆಟಗಾರ ಮಾತ್ರ ಕಾಣಿಸಿಕೊಂಡಿಲ್ಲ. ಒಂದೆರಡು ಬಾರಿ ಅವರು ಬರಲು ಮನಸ್ಸು ಮಾಡಿ ನನಗೆ ಮನವಿ ಮಾಡಿದ್ದರು ಕೂಡ. ಆದರೆ ನಾನೇ ಈಗ ಬೇಡವೆಂದಿದ್ದೆ. ಆ ದಿಗ್ಗಜ ಆಟಗಾರ ಬೇರಾರು ಅಲ್ಲ ಅವರು ಧೋನಿ. ಅವರು ಸದಾ ಇದೇ ಸೀಟ್‌ನಲ್ಲಿ ಕುಳಿತುಕೊಳ್ಳುತ್ತಿದ್ದರು. ಈಗ ಈ ಸೀಟ್‌ನಲ್ಲಿ ಬೇರೆ ಯಾರೂ ಕುಳಿತುಕೊಳ್ಳುವುದಿಲ್ಲ. ನಾವೆಲ್ಲರೂ ಅವರನ್ನು ಬಹಳ ಮಿಸ್ ಮಾಡ್ಕೊತೀವಿ ಎಂದು ಚಹಾಲ್ ಹೇಳಿದ್ದಾರೆ.

Leave a Comment