ಧೋನಿಯನ್ನ ಹಿಂದಿಕ್ಕಿದ ನಾಯಕ ಕೊಹ್ಲಿ

ಸೌತಾಂಪ್ಟನ್, ಸೆ ೩- ಇಂಗ್ಲೆಂಡ್ ವಿರುದ್ಧದ ೪ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ೬೦ ರನ್‌ಗಳ ಸೋಲು ಅನುಭವಿಸಿ ಸರಣಿ ಕೈಚೆಲ್ಲಿದೆ. ಆದರೆ ಟೂರ್ನಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಎಂ ಎಸ್ ಧೋನಿ ಅವರನ್ನು ಹಿಂದಿಕ್ಕಿ ಹೊಸ ದಾಖಲೆ ನಿರ್ಮಿಸಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ನಾಯಕನಾಗಿ ೪೦೦೦ ರನ್ ಪೂರೈಸಿದ ಮೊದಲ ಭಾರತೀಯ ನಾಯಕ ಎನ್ನುವ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ನಾಯಕನಾಗಿ ಎಂ ಎಸ್ ಧೋನಿ ೬೦ ಟೆಸ್ಟ್ ಪಂದ್ಯದಿಂದ ೩೪೫೪ ರನ್ ಸಿಡಿಸಿ ೨ನೇ ಸ್ಥಾನದಲ್ಲಿದ್ದಾರೆ.

ಭಾರತ ಮಾಜಿ ನಾಯಕ ಸುನಿಲ್ ಗವಾಸ್ಕರ್ ಟೆಸ್ಟ್ ನಾಯಕನಾಗಿ ೩೪೪೯ ರನ್ ಸಿಡಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಇದೀಗ ವಿರಾಟ್ ಕೊಹ್ಲಿ ಕೇವಲ ೩೯ ಟೆಸ್ಟ್ ಪಂದ್ಯದಿಂದ ೪೦೦೦ ರನ್ ಸಿಡಿಸಿದ್ದಾರೆ.
ಅತೀ ವೇಗದಲ್ಲಿ ೪೦೦೦ ರನ್ ಪೂರೈಸಿದ ಟೆಸ್ಟ್ ನಾಯಕರ ಪಟ್ಟಿಯಲ್ಲೂ ವಿರಾಟ್ ಕೊಹ್ಲಿ ಮೊದಲ ಸ್ಥಾನ ಅಲಂಕರಿಸಿದ್ದಾರೆ.

ನಾಯಕ ಕೊಹ್ಲಿ ೩೯ ಟೆಸ್ಟ್ ಪಂದ್ಯದ ೬೫ ಇನ್ನಿಂಗ್ಸ್ಗಳಲ್ಲಿ ೪೦೦೦ ರನ್ ಪೂರೈಸಿದ್ದರೆ, ವೆಸ್ಟ್‌ಇಂಡೀಸ್ ಮಾಜಿ ನಾಯಕ ಬ್ರಿಯಾನ್ ಲಾರ ೪೦ ಟೆಸ್ಟ್ ಪಂದ್ಯದ ೭೧ ಇನ್ನಿಂಗ್ಸ್ಗಳಲ್ಲಿ ೪೦೦೦ ರನ್ ಪೂರೈಸಿದ್ದಾರೆ. ಇನ್ನು ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ೪೨ ಟೆಸ್ಟ್ ಪಂದ್ಯದ ೭೫ ಇನ್ನಿಂಗ್ಸ್‌ಗಳಲ್ಲಿ ೪೦೦೦ ರನ್ ಪೂರೈಸಿದ್ದಾರೆ.

Leave a Comment