ಧೂಮಪಾನ ಸಮಸ್ಯೆಗಳ ಬಗ್ಗೆ ಇರಲಿ ಎಚ್ಚರ

ಧೂಮಪಾನದಿಂದ ಮನಸ್ಸು ನಿರಾಳವಾಗುತ್ತದೆ, ಈ ಒಂದು ಕನಿಷ್ಠ ನಂಬಿಕೆಯಿಂದ ಅಥವಾ ನಂಬಿಸುವ ಉದ್ದೇಶದಿಂದ ಬಹುತೇಕ ಧೂಮಪಾನಿಗಳು ವ್ಯಸನಕ್ಕೆ ದಾಸರಾಗುತ್ತಾರೆ.  ತಂಬಾಕು ತನ್ನಲ್ಲಿ ೭೦೦೦ಕ್ಕೂ ಅಧಿಕ ವಿಷ ಮತ್ತು ೭೦ಕ್ಕೂ ಅಧಿಕ ಕಾರ್ಸಿನೊಜೆನ್‌ಗಳನ್ನು ಒಳಗೊಂಡಿರುತ್ತದೆ. ಅಲ್ಲದೇ ಇದು ಶರೀರದ ವಿವಿಧ ಅಂಗಗಳಿಗೂ ಹಾನಿಉಂಟುಮಾಡುತ್ತದೆ.

ವಿಶ್ರಾಂತಿಗೆ ಇದು ಸಹಾಯಮಾಡುತ್ತದೆ ಎನ್ನುವುದು ಧೂಮಪಾನಿಗಳು ತಮ್ಮ ಚಟದ ಬಗ್ಗೆ ಪ್ರಾಥಮಿಕವಾಗಿ ನೀಡುವ ಮಾಹಿತಿ ಅಥವಾ ಸಮರ್ಥನೆ. ಅಲ್ಪಾವಧಿಗೆ ಹೋಲಿಸಿದರೆ ಇದು ನಿಜ. ಧೂಮಪಾನ ನಿರಾಳರಾಗಲು ಸಹಕರಿಸುತ್ತದೆ. ಆದರೆ, ಆದರೆ ಇದಕ್ಕೆ ನಂತರ ದೊಡ್ಡ ಬೆಲೆ ತೆರಬೇಕಾಗುತ್ತದೆ. ಧೂಮಪಾನದ ಕೆಟ್ಟ ಪರಿಣಾಮವೆಂದರೆ, ವ್ಯಸನಿಗಳನ್ನಾಗಿಸುತ್ತದೆ ಜತೆಗೆ ಉದ್ವೇಗಕ್ಕೆ, ಆತಂಕಕ್ಕೆ ಒಳಗಾಗುವಂತ ಸ್ಥಿತಿ ತರುತ್ತದೆ. ಮೆದುಳಿನ ಪರಿಚಲನೆಯನ್ನೇ ಬದಲಿಸುತ್ತದೆ ಮತ್ತು ಮೆದುಳು ಪಾರ್ಶ್ವವಾಯುವಿಗೂ ಕಾರಣವಾಗಬಹುದು.

ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳು ಕೂಡ ಅತಿಯಾದ ಧೂಮಪಾನದಿಂದ ಬರುತ್ತದೆ. ಕಣ್ಣಿನಲ್ಲಿ ಚುಚ್ಚಿದಂತೆ ಅನುಭವವಾಗುವುದು, ಕಣ್ಣಲ್ಲಿ ಅತಿಯಾಗಿ ನೀರು ಸೋರುವುದು, ಗ್ಲುಕೊಮಾ ಅಥವಾ ಕಣ್ಣಿನ ಪೊರೆ ಸಮಸ್ಯೆ ಕಾಡಬಹುದು. ಸರಿಯಾದ ಚಿಕಿತ್ಸೆ ಪಡೆಯದಿದ್ದರೆ ಅಥವಾ ಸಕಾಲಕ್ಕೆ ಚಿಕಿತ್ಸೆ ಸಿಗದಿದ್ದರೆ ಭಾಗಶಃ ಅಥವಾ ಸಂಪೂರ್ಣ ಅಂಧತ್ವ ಸಮಸ್ಯೆ ಕಾಡಬಹುದು.

ಧೂಮಪಾನಿಗಳು ಸಾಮಾನ್ಯವಾಗಿ ಬಾಯಿ ಹಾಗೂ ಗಂಟಲಿನ ಕ್ಯಾನ್ಸರ್‌ಗೆ ತುತ್ತಾಗುತ್ತಾರೆ. ಈ ಚಟದಿಂದಾಗಿ, ಅಂಟು ರೋಗಗಳು, ಅಕಾಲಿಕ ಹಲ್ಲು ನಷ್ಟ, ಹಲ್ಲುಗಳು ಬಣ್ಣ ಕಳೆದುಕೊಳ್ಳುವುದು ಇತ್ಯಾದಿ ಸಮಸ್ಯೆ ಕೂಡ ಎದುರಾಗುತ್ತದೆ.

ಧೂಮಪಾನಿಗಳ ಸಾವಿಗೆ ವಿಶ್ವದಲ್ಲಿಯೇ ಶ್ವಾಸಕೋಶ ಕ್ಯಾನ್ಸರ್ ಅತಿದೊಡ್ಡ ಕಾರಣವಾಗಿದೆ. ಅಲ್ಲದೇ ಇದು ಪ್ರಸ್ತುತ ಸಮಸ್ಯೆ ನಿವಾರಣೆಯಾಗಿಸಲು ಸಾಧ್ಯವಾಗದ ಸವಾಲಾಗಿ ಕಾಡುತ್ತಿದೆ. ದೀರ್ಘಕಾಲಿಕ ಅಬ್‌ಸ್ಟ್ರಕ್ಟಿವ್ ಪಲ್ಮನರಿ ಕಾಯಿಲೆ ಈ ಸಮಸ್ಯೆ ಕಾಡಿದರೆ ಉಸಿರಾಡುವುದು ತುಂಬಾ ಕಷ್ಟವಾಗುತ್ತದೆ. ಧೂಮಪಾನಿಗಳಲ್ಲಿ ಕ್ಯಾನ್ಸರ್ ಬಂದು ಸಾವನ್ನಪ್ಪುವ ವಿಚಾರದಲ್ಲಿ ಇದರ ಪಾತ್ರ ಕೂಡ ದೊಡ್ಡದಿದೆ. ದೀರ್ಘಕಾಲದ ಬ್ರಾಂಕೈಟಿಸ್ ನಿಂದಾಗಿ ಶ್ವಾಸಕೋಶದ ನಾಳಗಳಲ್ಲಿ ಉರಿಯೂತ, ಕಂಡುಬಂದು, ಉಸಿರಾಡುವುದು ಕಷ್ಟವಾಗಬಹುದು, ಅತಿಮುಖ್ಯವಾಗಿ ಇದು ಧೂಮಪಾನದಿಂದ ಕಾಡುವ ದೊಡ್ಡ ಸಮಸ್ಯೆ. ಧೂಮಪಾನವು ನ್ಯುಮೋನಿಯಾ, ಕ್ಷಯ ಮುಂತಾದ ಸಮಸ್ಯೆಗಳು ಕಾಡಲು ಕಾರಣವಾಗುತ್ತದೆ ಎಂದು ಸಕ್ರ ಆಸ್ಪತ್ರೆ ತಜ್ಞ ಡಾ. ಸಚಿನ್‌ಕುಮಾರ್ ತಿಳಿಸಿದ್ದಾರೆ.

ಹೃದಯ ಸಂಬಂಧಿ ಸಮಸ್ಯೆಗಳು ಕಾಡಲು ಧೂಮಪಾನ ಪ್ರಮುಖ ಕಾರಣವಾಗಿದೆ. ನಿರಂತರ ಧೂಮಪಾನಿಗಳು ಹಾಗೂ ಎರಡನೇ ಧೂಮಪಾನಿಗಳು (ಸೇವಿಸಿದವರು ಬಿಟ್ಟ ಹೊಗೆ ಸೇವಿಸುವವರು) ಹೃದಯ ಸಂಬಂಧಿ ಕಾಯಿಲೆ ಎದುರಿಸುವ ದೊಡ್ಡ ಅಪಾಯವನ್ನು ಹೊಂದಿರುತ್ತಾರೆ. ತಂಬಾಕು ಸೇವನೆ ಕೂಡ ಹೃದಯದಲ್ಲಿರುವ ಒಳ್ಳೆಯ ಕೊಬ್ಬಿನಂಶವನ್ನು (ಎಚ್‌ಡಿಎಲ್) ಕರಗಿಸಿ ಅಪಾಯ ತಂದಿಡುತ್ತದೆ. ಇದಕ್ಕೆ ಬದಲಾಗಿ ಕೆಟ್ಟ ಕೊಬ್ಬಿನಂಶವನ್ನು ಶರೀರದಲ್ಲಿ ಕಡಿಮೆ ಮಾಡುತ್ತದೆ.

ಧೂಮಪಾನ ಹಸಿವನ್ನು ಕಡಿಮೆ ಮಾಡುತ್ತದೆ. ಈ ಚಟದ ದಾಸರಾಗುವುದರಿಂದ ಶರೀರದಲ್ಲಿ ನ್ಯೂಟ್ರಿಶಿಯನ್ ಅಂಶ ಕಡಿಮೆ ಆಗಿ ದೇಹ ದುರ್ಭಲವಾಗುತ್ತದೆ. ಶರೀರದಲ್ಲಿ ಇನ್ಸುಲಿನ್ ಪೋಷಣೆಯನ್ನು ತಡೆಯುತ್ತದೆ. ಇದರಿಂದ ಟೈಪ್ ೨ ಮಧುಮೇಹ ಕಾಡುವ ಸಾಧ್ಯತೆ ಹೆಚ್ಚಿರುತ್ತದೆ. ಇದು ಯಕೃತ್ತಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಕಾರ್ಯ ಕೂಡ ಮಾಡುತ್ತದೆ. ಹಾಗೂ ಹೊಟ್ಟೆ ಮತ್ತು ಕರುಳಿನಲ್ಲಿ ಹುಣ್ಣುಗಳು ಉತ್ಪತ್ತಿಯಾಗಲು ಸಹಕಾರಿಯಾಗುತ್ತದೆ.

ಪುರುಷರಲ್ಲಿ ಧೂಮಪಾನದ ಅಡ್ಡ ಪರಿಣಾಮ ದೊಡ್ಡದಾಗಿ ಆಗುತ್ತದೆ. ಇದರ ಪರಿಣಾಮ ವೀರ್ಯದ ಅಸಹಜತೆ, ದುರ್ಭಲತೆ, ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ ಹಾಗೂ ಪ್ರಾಸ್ಪೇಟ್ ಕ್ಯಾನ್ಸರ್ ಕಾಡುವ ಭೀತಿ ಇದೆ. ಇನ್ನು ಮಹಿಳೆಯರಲ್ಲಿ ಧೂಮಪಾನದ ಅಡ್ಡ ಪರಿಣಾಮ ನೋಡುವುದಾದರೆ, ಗರ್ಭಪಾತ, ಆರಂಭಿಕ ಋತುಬಂಧ, ಗರ್ಭಕಂಠದ ಹಾಗೂ ಅಂಡಾಶಯದ ಕ್ಯಾನ್ಸರ್ ಕಾಡುವ ಸಾಧ್ಯತೆ ಇರುತ್ತದೆ. ಧೂಮಪಾನವು ಭವಿಷ್ಯದ ಜನಾಂಗದ ಮೇಲೆ ಕೂಡ ಪರಿಣಾಮ ಬೀರುತ್ತದೆ. ದೈಹಿಕ ವಿರೂಪತೆ ಹಾಗೂ ಹಠಾತ್ ಶಿಶು ಮರಣಕ್ಕೂ ಕಾರಣವಾಗುತ್ತಿದೆ.

ಶರೀರದ ಕಲ್ಮಶಗಳನ್ನು ಹೊರಹಾಕುವ ದೇಹದ ಪ್ರಮುಖ ಅಂಗ ಮೂತ್ರಪಿಂಡ. ಅತಿಯಾದ ಧೂಮಪಾನ ಈ ಮೂತ್ರಪಿಂಡದ ವೈಫಲ್ಯಕ್ಕೂ ಕಾರಣವಾಗಬಹುದು. ಮೂತ್ರಕೋಶದ ಕ್ಯಾನ್ಸರ್ ಹಾಗೂ ಇತರೆ ಮೂತ್ರ ಸಂಬಂಧಿ ಸಮಸ್ಯೆಗೆ ಕಾರಣವಾಗಬಹುದು.

Leave a Comment