ಧಾರ್ಮಿಕ, ಶೈಕ್ಷಣಿಕ, ವ್ಯಾಪಾರಿ ಕ್ಷೇತ್ರದಲ್ಲಿ ಹೆಸರು ಮಾಡಿರುವ ಕೊಟ್ಟೂರು

ಬಳ್ಳಾರಿ, ಮಾ.20:ಧಾರ್ಮಿಕ, ಶೈಕ್ಷಣಿಕ, ವ್ಯಾಪಾರಿ ಕ್ಷೇತ್ರದಲ್ಲಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಕೊಟ್ಟೂರು ಪಟ್ಟಣ ಉತ್ತಮ ಹೆಸರು ಮಾಡಿದೆ ಎಂದು ನಿವೃತ್ತ ಉಪನ್ಯಾಸಕರಾದ ದೇವರಮನಿ ಜಿತೇಂದ್ರ ನಾಥ ಅಭಿಪ್ರಾಯಪಟ್ಟರು.

ನಗರದ ಎಸ್.ಪಿ.ಸರ್ಕಲ್ ಹತ್ತಿರವಿರುವ ಜಾನಪದ ಹೋಟೆಲ್ ನಲ್ಲಿ ಆಯೋಜಿಸಿದ್ದ ಕೊಟ್ಟೂರಿನ ಗೆಳೆಯರ ಬಳಗ ಸಂಘಟನೆಯ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು, ಕೊಟ್ಟೂರಿನ ಗೆಳೆಯರ ಬಳಗ ಸಂಘಟಿಸಿದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕೊಟ್ಟೂರಿನಲ್ಲಿ ಹುಟ್ಟಿ, ಬೆಳೆದು ವೃತ್ತಿ, ವ್ಯಾಪಾರ, ವಿದ್ಯಾಭ್ಯಾಸ ಮುಂತಾದ ಕಾರಣಗಳಿಂದಾಗಿ ಬಳ್ಳಾರಿಯಲ್ಲಿ ವಾಸಿಸುತ್ತಿರುವ ಎಲ್ಲರನ್ನೂ ಒಂದೇ ಸಂಘಟನೆಯ ವ್ಯಾಪ್ತಿಯೊಳಗೆ ತಂದಿರುವುದು, ತನ್ಮೂಲಕ ಸಂಘಟಿತರಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಕೊಟ್ಟೂರು ಪಟ್ಟಣದ ಮತ್ತು ಪಕ್ಕದ ಗ್ರಾಮಗಳ ಐದುನೂರಕ್ಕೂ ಹೆಚ್ಚು ಕುಟುಂಬಗಳು ಬಳ್ಳಾರಿಯಲ್ಲಿ ವಾಸಿಸುತ್ತಿರುವ ಬಗ್ಗೆ ಒಂದು ಅಂದಾಜು ಇದ್ದು, ಈ ಸಭೆಯಲ್ಲಿ ಹಾಜರಿರುವ ಸಂಖ್ಯೆಯನ್ನು ನೋಡಿದರೆ, ಇದು ಇನ್ನೂ ಹೆಚ್ಚು ಇರುವ ಸಾಧ್ಯತೆ ಇದೆ ಎಂದರು. ಬಳ್ಳಾರಿಯ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ ಕೊಟ್ಟೂರಿನವರು ಕೆಲಸ ಮಾಡುತ್ತಿರುವುದು ಕಂಡು ಬರುತ್ತಿದೆ. ಇನ್ನೂ ಕೆಲವರು ವ್ಯಾಪಾರದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಉದ್ಯೋಗ ನೀಡಿರುವ ಬಳ್ಳಾರಿಯ ಬಗ್ಗೆ ಇರುವ ಪ್ರೀತಿಯ ಜೊತೆಗೆ ತಾವು ಹುಟ್ಟಿ ಬೆಳೆದು ಬಂದ ಕೊಟ್ಟೂರಿನ ಮೇಲಿನ ಪ್ರೀತಿಯನ್ನು ಹಾಗೆಯೇ ಉಳಿಸಿಕೊಂಡಿರುವುದು ಇಂದಿಗೂ ಕೊಟ್ಟೂರಿನ ಬಗ್ಗೆ ಅಭಿಮಾನವಿರುವುದು ಇಲ್ಲಿ ಭಾಗವಹಿಸುವ ಎಲ್ಲರಲ್ಲೂ ಕಂಡು ಬರುತ್ತಿದೆ ಎಂದರು.

ಶಿಕ್ಷಣ ನಿಧಿ
ಕೊಟ್ಟೂರು ಭಾಗದ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗಲೆಂದು ಕೊಟ್ಟೂರಿನ ಗೆಳೆಯರ ಬಳಗದ ವತಿಯಿಂದ ಶಿಕ್ಷಣ ನಿಧಿಯನ್ನು ಸ್ಥಾಪಿಸಲು ನಿರ್ಧರಿಸಲಾಯಿತು. ಇಂಜಿನೀಯರ್ ಕೆ.ಬಿ.ಸಂಜೀವ್ ಪ್ರಸಾದ್ ರವರು, ಶಿಕ್ಷಣ ನಿಧಿಗೆ ತಮ್ಮ ವಯಕ್ತಿಕ ಐದು ಸಾವಿರ ರೂಪಾಯಿ ದೇಣಿಗೆಯನ್ನು ಪ್ರಕಟಿಸುವ ಮೂಲಕ ನಿಧಿಯ ಸ್ಥಾಪನೆಗೆ ಚಾಲನೆ ನೀಡಿದರು.

ಮೂರು ತಿಂಗಳಿಗೊಮ್ಮೆ
ಪ್ರತಿ ಮೂರು ತಿಂಗಳಿಗೊಮ್ಮೆ ಈ ರೀತಿಯ ಸಭೆಯನ್ನು ಸೇರಿ ನಮ್ಮ ನಡುವಿನ ಒಡನಾಟವನ್ನು ಹೆಚ್ಚಿಸಿಕೊಳ್ಳೋಣ, ಆತ್ಮೀಯತೆಯನ್ನು ಬೆಳೆಸಿಕೊಳ್ಳೋಣ ಎಂದು ಸಭೆಯಲ್ಲಿ ಭಾಗವಹಿಸಿದ್ದವರೆಲ್ಲರೂ ಅಭಿಪ್ರಾಯಪಟ್ಟರು.

ನಿವೃತ್ತ ಬ್ಯಾಂಕ್ ಅಧಿಕಾರಿಗಳಾದ ಗಂಗಾಧರ, ಎಂ.ಜಿ.ಜಯಪ್ರಕಾಶ್, ಕಾರ್ಯನಿರ್ವಾಹಕ ಇಂಜಿನೀಯರ್ ಎಸ್.ರಾಜಶೇಖರ್, ಎಂ.ಪ್ರಶಾಂತ್ ಕುಮಾರ್, ಶಶಿಧರ, ಧನುಂಜಯ, ಹೆಚ್.ಎನ್.ಕೊಟ್ರೇಶ್, ಪ್ರಮೋದ್, ಗುರುಬಸವರಾಜ, ಆರ್.ಎಂ.ಶಿವಕುಮಾರ್, ಕೆ.ಎಂ.ಶಂಭುನಾಥ್, ಕೆ.ಅಶೋಕ್, ವೀರಣ್ಣ, ಪುಲಿಕೇಶಿ, ತೀರ್ಥರಾಜ, ಆರ್.ಎಂ.ಶ್ರೀಧರ್, ದರ್ಶನ್, ಪತ್ರಿಬಸಪ್ಪ ಹೆಚ್.ಕೊಟ್ರಬಸಪ್ಪ, ಹೆಚ್.ಎಂ.ಕೊಟ್ರಯ್ಯ, ಬಿ.ಎಂ.ಸುರೇಶ, ಶಿವಪ್ರಕಾಶ್, ಎ.ರವೀಂದ್ರನಾಥ್, ಪಿ.ರವೀಂದ್ರ ನಾಥ್, ಹೆಚ್.ಎನ್.ನಟರಾಜ್, ಸಿ.ಕೆ.ರಮೇಶ, ಡಾ||ಡಿ.ನಾಗೇಶ ಶಾಸ್ತ್ರಿ, ಮಾಲತೇಶ ಜಿ.ಮೂಲಿಮನಿ ಮತ್ತಿತರರು ಕುಟುಂಬ ಸಮೇತ ಹಾಜರಿದ್ದರು.

ವಿಮ್ಸ್ ನಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳು ಸಭೆಗೆ ಆಗಮಿಸಿದ್ದರು.

Leave a Comment