ಧಾರ್ಮಿಕ ಗ್ರಂಥ ಅಪಚಾರಕ್ಕೆ ಜೀವಾವಧಿ ಶಿಕ್ಷೆ- ಸಿಂಗ್

 

ಚಂಡೀಗಡ, ಆ. ೨೨: ಯಾವುದೇ ಧಾರ್ಮಿಕ ಗ್ರಂಥಗಳಿಗೆ ಅಪಚಾರವೆಸಗುವ ಅಥವಾ ಅಪವಿತ್ರಗೊಳಿಸುವ ಅಪರಾಧಕ್ಕೆ ಜೀವಾವಧಿ ಶಿಕ್ಷೆ ವಿಧಿಸುವ ನಿಟ್ಟಿನಲ್ಲಿ ಭಾರತೀಯ ದಂಡ ಸಂಹಿತಾ ಪ್ರಕ್ರಿಯೆ (ಐಪಿಸಿ)ಗೆ ತಿದ್ದುಪಡಿ ತರಲು ಪಂಜಾಬ್ ಸಚಿವ ಸಂಪುಟ ನಿರ್ಧರಿಸಿದೆ.
ಈ ಕುರಿತು ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಟ್ವೀಟ್ ಮಾಡಿದ್ದು, ‘ಅಂತಹ ಅಪರಾಧಕ್ಕೆ ಜೀವಾವಧಿ ಶಿಕ್ಷೆ ವಿಧಿಸುವ ನಿಟ್ಟಿನಲ್ಲಿ ಭಾರತೀಯ ದಂಡ ಸಂಹಿತಾ ಪ್ರಕ್ರಿಯೆ (ಐಪಿಸಿ)ಗೆ ತಿದ್ದುಪಡಿ ತರಲು ಸಂಪುಟ ತೀರ್ಮಾನಿಸಿದೆ. ಸದ್ಯದಲ್ಲೇ ಈ ಮಸೂದೆಯನ್ನು ಅನುಮೋದನೆಗಾಗಿ ವಿಧಾನಸಭೆಯಲ್ಲಿ ಮಂಡಿಸಲಾಗುವುದು. ರಾಜ್ಯದಲ್ಲಿ ಕೋಮು ಸೌಹಾರ್ದತೆ ಕಾಪಾಡಲು ನಾನು ದೃಢ ನಿಶ್ಚಯ ಮಾಡಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.
ಪಂಜಾಬ್‌ನಲ್ಲಿ ಧಾರ್ಮಿಕ ಗ್ರಂಥಗಳಿಗೆ ಅಪಚಾರವೆಸಗುವ ಅಥವಾ ಅಪವಿತ್ರಗೊಳಿಸುವ ಸಂಬಂಧ ರಚಿಸಲ್ಪಟ್ಟಿದ್ದ ನಿವೃತ್ತ ನ್ಯಾಯಮೂರ್ತಿ ರಂಜಿನ್ ಸಿಂಗ್ ಆಯೋಗವು ನೀಡಿರುವ ವರದಿಯನ್ನು ವಿಧಾನಸಭೆಯ ಮುಂದಿನ ಅಧಿವೇಶನದಲ್ಲಿ ಮಂಡಿಸಲಾಗುವುದು ಮತ್ತು ಅಂತಹ ಕೃತ್ಯ ಎಸಗಿದ ಅಪರಾಧಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜು. ೨೫ ರಂದೇ ಪಂಜಾಬ್ ಮುಖ್ಯಮಂತ್ರಿಗಳು ಹೇಳಿಕೆ ನೀಡಿದ್ದರು.
ಪರಿಶಿಷ್ಟ ಜಾತಿ ನೌಕರರಿಗೆ ಮುಂಬಡ್ತಿಯಲ್ಲಿ ಮೀಸಲಾತಿ ಕಾಯ್ದುಕೊಳ್ಳುವುದೂ ಸೇರಿದಂತೆ ಹಲವು ಪ್ರಮುಖ ಮಸೂದೆಗಳಿಗೆ ಪಂಜಾಬ್ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಫೋಟೋ ಇದೆ:

Leave a Comment