ಧರ್ಮ ವಿವಾದ ಸಿದ್ದು ಮೌನಕ್ಕೆ ಶರಣು

(ನಮ್ಮ ಪ್ರತಿನಿಧಿಯಿಂದ)
ಬೆಂಗಳೂರು, ಮಾ. ೧೪- ವೀರಶೈವ- ಲಿಂಗಾಯತ ಪ್ರತ್ಯೇಕ ಧರ್ಮ ವಿವಾದ ಮುಖ್ಯಮಂತ್ರಿ ಸಿದ್ಧರಾಮಯ್ಯ ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ. ಪ್ರತ್ಯೇಕ ಧರ್ಮ ವಿಚಾರದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವ ಬಗ್ಗೆ ಸರ್ಕಾರ ಸಂದಿಗ್ದತೆಗೆ ಸಿಲುಕಿದೆ.

ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಸಂಬಂಧಿಸಿದಂತೆ ನ್ಯಾ. ನಾಗಮೋಹನ್‌ದಾಸ್ ಅವರ ವರದಿಯನ್ನು ಸರ್ಕಾರ ತಿರಸ್ಕರಿಸಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ನಡೆಸುವುದಾಗಿ ನಿನ್ನೆ ಬಾಗಲಕೋಟೆಯ ಶಿವಯೋಗಿ ಮಂದಿರದಲ್ಲಿ ಕಾಶಿಪೀಠದ ಡಾ. ಚಂದ್ರಶೇಖರ ಶಿವಾಚಾರ್ಯ ಶ್ರೀಗಳ ನೇತೃತ್ವದಲ್ಲಿ ನಡೆದ ಗುರು-ವಿರಕ್ತ ಮಠಾಧೀಶರ ಸಭೆ ಎಚ್ಚರಿಕೆ ನೀಡಿರುವುದು ಸರ್ಕಾರಕ್ಕೆ ನುಂಗಲಾರದ ಬಿಸಿತುಪ್ಪವಾಗಿದೆ.

ಧರ್ಮ ವಿವಾದ ದಿನೇ ದಿನೇ ನಾನಾ ರೀತಿಯ ತಿರುವುಗಳನ್ನು ತೆಗೆದುಕೊಂಡು ಲಿಂಗಾಯತ ಮಠಾಧೀಶರಲ್ಲೇ ಪರ-ವಿರೋಧ ನಿಲುವುಗಳು ವ್ಯಕ್ತವಾಗಿ ದಿನೇ ದಿನೇ ಹೊಸ ವಿವಾದಗಳು ಸೃಷ್ಠಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕಾದ ಅನಿವಾರ್ಯ ಪರಿಸ್ಥಿತಿ ಉಂಟಾಗಿದೆ.

ದಿನದಿಂದ ದಿನಕ್ಕೆ ವಿವಾದಗಳ ಸುಳಿಗೆ ಸಿಲುಕಿ ಹೊಸ ಸ್ವರೂಪಗಳು ಪಡೆಯುತ್ತಿರುವ ಧರ್ಮವಿಚಾರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯದೂರ ಉಳಿಯಲು ಮುಂದಾಗಿದ್ದಾರೆ. ಹಾಗಾಗಿ ಅವರು ಈ ವಿಚಾರದಲ್ಲಿ ಯಾವುದೇ ತೀರ್ಮಾನ ಕೈಗೊಳ್ಳದೆ ಮೊಗ್ಗುಂ ಆಗಿ ಉಳಿಯುವ ಸಾಧ್ಯತೆ ಹೆಚ್ಚಿದೆ.

ಈ ನಡುವೆ ಉರಿಯುವ ಗಾಯಕ್ಕೆ ಉಪ್ಪು ಸವರಿದಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಧರ್ಮವಿವಾದದ ಬಗ್ಗೆ ಕಿಡಿಕಾರಿ ನ್ಯಾ. ನಾಗಮೋಹನ್ ದಾಸ್ ವರದಿ 2 ತಿಂಗಳಲ್ಲೇ ಶಿಫಾರಸ್ಸು ಮಾಡಿರುವುದನ್ನು ನೋಡಿದರೆ ವರದಿಯಲ್ಲಿ ಏನಿದೆ ಎಂದು ಅರ್ಥೈಸಬಹುದು ಎಂದು ಹೇಳಿಕೆ ನೀಡಿರುವುದು ಸರ್ಕಾರಕ್ಕೆ ಇಕ್ಕಟ್ಟುತರಿಸಿದೆ.

ಹಾಗಾಗಿಯೇ, ಈ ವಿಚಾರದಲ್ಲಿ ಯಾವುದೇ ತೀರ್ಮಾನ ಬೇಡ ಎಂಬ ನಿಲುವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಂದಿದ್ದಾರೆ ಎನ್ನಲಾಗಿದೆ.  ಶತಾಯ ಗತಾಯ ಲಿಂಗಾಯತ ಸ್ವತಂತ್ರ ಧರ್ಮ ಶಿಫಾರಸ್ಸಿಗೆ ಸಚಿವರುಗಳಾದ ಎಂ.ಬಿ. ಪಾಟೀಲ್, ವಿನಯ್ ಕುಲಕರ್ಣಿ, ಬಸವರಾಜರಾಯರೆಡ್ಡಿ, ಡಾ. ಶರಣಪ್ರಕಾಶ್ ಪಾಟೀಲ್ ಪಟ್ಟು ಹಿಡಿದಿದ್ದು, ಈ ಸಚಿವ ಸಂಪುಟದಲ್ಲಿ ಶಿಫಾರಸ್ಸಿನ ಬಗ್ಗೆ ಒಂದು ತೀರ್ಮಾನ ಕೈಗೊಳ್ಳಬೇಕು ಎಂದು ಒತ್ತಡ ಹೇರಿದ್ದಾರೆ.

ಇದಕ್ಕೆ ಪ್ರತಿಯಾಗಿ ಸಚಿವರಾದ ಈಶ್ವರಖಂಡ್ರೆ, ಎಸ್. ಎಸ್. ಮಲ್ಲಿಕಾರ್ಜುನ್, ವೀರಶೈವ ಲಿಂಗಾಯತ ಎರಡೂ ಒಂದೇ. ಹಾಗಾಗಿ ವೀರಶೈವ ಲಿಂಗಾಯತ ಎಂದೇ ಪ್ರತ್ಯೇಕ ಧರ್ಮಕ್ಕೆ ಶಿಫಾರಸ್ಸು ಮಾಡುವುದಿದ್ದರೆ ವೀರಶೈವ ಲಿಂಗಾಯತ ಎಂದೇ ಶಿಫಾರಸ್ಸು ಮಾಡಿ ಎಂದು ಪಟ್ಟು ಹಿಡಿದಿದ್ದಾರೆ.  ಹೀಗಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಕಳೆದ ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರದಲ್ಲಿ ಯಾವುದೇ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ.

ಮುಂದಿನ ಸಚಿವ ಸಂಪುಟದಲ್ಲಿ ಒಂದು ತೀರ್ಮಾನ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಹೇಳಿದ್ದರಾದರೂ ವೀರಶೈವ ಲಿಂಗಾಯತ ಮಠಾಧೀಶರು ಸಭೆ ನಡೆಸಿ ವ್ಯಕ್ತಪಡಿಸಿರುವ ಆಕ್ರೋಶ, ಒಂದು ವೇಳೆ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಲು ತೀರ್ಮಾನಿಸಿದರೆ ಅದರ ವಿರುದ್ಧ ಹೋರಾಟ ನಡೆಸುವುದಾಗಿ ನೀಡಿರುವ ಎಚ್ಚರಿಕೆ ಸಿದ್ಧು ಸರ್ಕಾರಕ್ಕೆ ಕಂಟಕವಾಗುವ ಸಾಧ್ಯತೆಗಳಿವೆ.

ಹಾಗಾಗಿಯೇ ಅನಗತ್ಯವಾಗಿ ಚುನಾವಣಾ ಸಂದರ್ಭದಲ್ಲಿ ಧರ್ಮ ವಿವಾದಕ್ಕೆ ಕೈ ಹಾಕಿ ತೊಂದರೆಗೆ ಸಿಲುಕುವುದು ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲಿಂಗಾಯತ ಸ್ವತಂತ್ರ ಧರ್ಮದ ಬಗ್ಗೆ ಯಾವುದೇ ತೀರ್ಮಾನ ಕೈಗೊಳ್ಳದೆ ಮೌನ ವಹಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ನ್ಯಾ. ನಾಗಮೋಹನ್‌ದಾಸ್ ಸಮಿತಿ ವರದಿ ಸಲ್ಲಿಕೆಗೆ ಆರು ತಿಂಗಳ ಸಮಯ ಕೇಳಿದ್ದರೂ ಕೇವಲ ಎರಡು ತಿಂಗಳಲ್ಲೇ ತರಾತುರಿಯಲ್ಲಿ ವರದಿ ಪಡೆದಿರುವುದು ಮಠಾಧೀಶರ ಸಿಟ್ಟಿಗೆ ಕಾರಣವಾಗಿದೆ.  ಯಾವುದೇ ತೀರ್ಮಾನವಾದರೂ ಮುಂದಿನ ದಿನಗಳಲ್ಲಿ ದೂರಗಾಮಿ ಪರಿಣಾಮ ಬೀರುತ್ತದೆ ಎಂಬುದನ್ನು ಅರಿತಿರುವ ಕೆಲ ಕಾಂಗ್ರೆಸ್ ಮುಖಂಡರು ಧರ್ಮ ವಿವಾದದ ಬಗ್ಗೆ ಸದ್ಯ ಯಾವುದೇ ತೀರ್ಮಾನ ಬೇಡ ಎಂಬ ಸಲಹೆಯನ್ನು ಮುಖ್ಯಮಂತ್ರಿಗಳಿಗೆ ನೀಡಿದ್ದಾರೆ ಎನ್ನಲಾಗಿದೆ.

ಧರ್ಮ ವಿವಾದ ರಾಜಕೀಯ ಸ್ವರೂಪ ಪಡೆಯುತ್ತಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ತೀರ್ಮಾನ ಕೈಗೊಳ್ಳದಿರುವ ಸಾಧ್ಯತೆಯೇ ಹೆಚ್ಚು ಎಂದು ಹೇಳಲಾಗುತ್ತದೆ.

ಅಲ್ಪಸಂಖ್ಯಾತರ ಸಚಿವರ ಅಸಮಾಧಾನ

ಲಿಂಗಾಯತರಿಗೆ ಅಲ್ಪಸಂಖ್ಯಾತ ಧರ್ಮದ ಸ್ಥಾನಮಾನ ನೀಡುವುದರಿಂದ ಮುಸ್ಲಿಂ ಹಾಗೂ ಕ್ರೈಸ್ತ ಸಮುದಾಯಗಳಿಗೆ ಅನ್ಯಾಯವಾಗುವ ಸಾಧ್ಯತೆಗಳಿವೆ. ಹಾಗಾಗಿ ಈ ವಿಚಾರದಲ್ಲಿ ಎಚ್ಚರ ವಹಿಸಿ ಎಂದು ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಸಚಿವರುಗಳು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಒತ್ತಾಯಿಸಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಧರ್ಮ ವಿವಾದ ಬಗೆಹರಿಯುವ ಸಾಧ್ಯತೆಗಳು ಕ್ಷೀಣ. ಯಥಾಸ್ಥಿತಿಯೇ ಮುಂದುವರೆಯುವುದು ಬಹುತೇಕ ನಿಶ್ಚಿತ.

ವೀರಶೈವ ಲಿಂಗಾಯತ ಧರ್ಮದ ಬಗ್ಗೆ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗಳು ನಡೆಯುತ್ತವೆಯೇ ಎಂಬ ಮಾತುಗಳು ಕೇಳಿ ಬರುತ್ತಿರುವಾಗಲೇ ದಿಢೀರ್ ಎಂದು ಇಂದು ಸಚಿವ ಸಂಪುಟ ಸಭೆಯನ್ನು ಮುಂದೂಡಲಾಗಿದೆ.

ಸಚಿವ ಸಂಪುಟ ಸಭೆಯನ್ನು ದಿಢೀರ್ ಎಂದು ಮುಂದೂಡಿರುವುದು ನಾನಾ ವ್ಯಾಖ್ಯಾನಗಳಿಗೆ ಕಾರಣವಾಗಿದ್ದು, ಧರ್ಮ ವಿಚಾರದಲ್ಲಿ ಸಂಪುಟ ಸಭೆಯಲ್ಲಿ ಅನಗತ್ಯ ಗೊಂದಲ ಸೃಷ್ಠಿಯಾಗುತ್ತದೆ ಎಂಬ ಆತಂಕದಿಂದ ಸಂಪುಟ ಸಭೆಯನ್ನು ಮುಂದೂಡಲಾಗಿದೆ ಎನ್ನಲಾಗಿದೆ.

ವೀರಶೈವ ಲಿಂಗಾಯತ ಧರ್ಮ ವಿಚಾರದಲ್ಲಿ ಇಂದು ನಡೆಯುವ ಸಚಿವಸಂಪುಟ ಸಭೆಯಲ್ಲೂ ಪರ ವಿರೋದ ಚರ್ಚೆಗಳು ನಡೆದರೆ ಅದರಿಂದ ತಪ್ಪು ಸಂದಶ ರವಾನೆಯಾಗಿ ವೀರಶೈವ ಲಿಂಗಾಯತ ಸಮುದಾಯದ ಅಸಮಾಧಾನ ಮತ್ತಷ್ಟು ಹೆಚ್ಚಾಗಬಹುದು ಎಂಬ ಹಿನ್ನೆಲೆಯಲ್ಲಿ ಯಾವುದೇ ಗೊಡವೆ ಬೇಡ ಮುಂದೆ ಎಲ್ಲರ ಜೊತೆ ಮಾತನಾಡಿ ಒಮ್ಮತಕ್ಕೆ ಬಂದ ನಂತರ ಈ ಬಗ್ಗೆ ನೋಡೋಣ ಎಂಬ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆಯನ್ನು ಮುಂದೂಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಮೂಲಗಳು ಹೇಳಿವೆ.

Leave a Comment