ಧರ್ಮ ದುರ್ಬಳಕೆ ಕೇರಳ ಶಾಸಕನ ಸದಸ್ಯತ್ವ ಅನರ್ಹ

ಕೊಚ್ಚಿ, ನ. ೯- ಕೇರಳ ವಿಧಾನಸಭಾ ಚುನಾವಣೆಯಲ್ಲಿ ಜಯ ಸಾಧಿಸಲು `ಧರ್ಮ’ವನ್ನು ಬಳಸಿಕೊಂಡರು ಎಂಬ ಆರೋಪದ ಹಿನ್ನೆಲೆಯಲ್ಲಿ ಇಂಡಿಯನ್ ಯುನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಶಾಸಕ ಕೆ.ಎಂ. ಶಾಜಿ ಅವರನ್ನು ಹೈಕೋರ್ಟ್ ಅನರ್ಹಗೊಳಿಸಿದೆ. 2016ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅಳಿಕೋಡ್ ವಿಧಾನಸಭಾ ಕ್ಷೇತ್ರದಿಂದ ಶಾಜಿ ಆಯ್ಕೆಯಾಗಿದ್ದರು. ಈ ಸಂದರ್ಭದಲ್ಲಿ ಅವರು ಧರ್ಮದ ಹೆಸರೇಳಿ ಮತ ಯಾಚಿಸಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿದೆ.

ಈ ಕುರಿತು ಮಹತ್ವದ ತೀರ್ಪು ನೀಡಿರುವ ನ್ಯಾಯಮೂರ್ತಿ ಪಿ.ಡಿ. ರಾಜನ್, ಶಾಜಿ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಕೇರಳ ವಿಧಾನಸಭಾಧ್ಯಕ್ಷ ಹಾಗೂ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದ್ದಾರೆ.

ಶಾಜಿ ವಿರುದ್ಧ ಸ್ಪರ್ಧಿಸಿದ್ದ ಎಲ್.ಡಿ.ಎಫ್ ಅಭ್ಯರ್ಥಿ ಎಂ.ವಿ ನಿಖೇಶ್ ಕುಮಾರ್ ಸಲ್ಲಿಸಿದ್ದ ಅರ್ಜಿ ಕುರಿತು ಹೈಕೋರ್ಟ್ ಈ ತೀರ್ಪು ನೀಡಿದೆ. ರಾಜ್ಯದಲ್ಲಿ ಐಯುಎಂಎಲ್, ಕಾಂಗ್ರೆಸ್ ನೇತೃತ್ವದ ಯುಡಿಎಫ್‌ನ ಪಾಲುದಾರ ಪಕ್ಷವಾಗಿದೆ.

ಭ್ರಷ್ಟಾಚಾರ ಮತ್ತಿತರ ಅಕ್ರಮ ಚಟುವಟಿಕೆಗಳ ಲಾಭ ಪಡೆದು ಶಾಜಿ 2287 ಮತಗಳ ಅಂತರದಿಂದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು ಎಂದು ನಿಖೇಶ್ ಕುಮಾರ್ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದರು.

ಜನಪ್ರತಿನಿಧಿ ಕಾಯ್ದೆಯ ವಿವಿಧ ನಿಯಮಗಳನ್ನು ಉಲ್ಲಂಘಿಸಿ ಚುನಾವಣೆಯಲ್ಲಿ ಶಾಜಿ ಗೆಲುವು ಸಾಧಿಸಿದ್ದರು ಎಂಬ ಆರೋಪ ಮಾಡಲಾಗಿತ್ತು.

ಮುಸ್ಲಿಂ ಸಮುದಾಯಕ್ಕೆ ಸೇರಿದ ಶಾಜಿಗೆ ಮತ ನೀಡುವಂತೆ ಅವರ ಏಜೆಂಟರು ಮತ್ತು ಇತರರು ಮತದಾರರಿಗೆ ಮನವಿ ಮಾಡಿದ್ದರು ಎಂದು ನಿಖೇಶ್ ಆರೋಪಿಸಿದರು.

ಇದೇ ವಿಷಯಕ್ಕೆ ಸಂಬಂಧಿಸಿದ ಕರಪತ್ರಗಳನ್ನು ಕ್ಷೇತ್ರದಾದ್ಯಂತ ಹಂಚಿಕೆ ಮಾಡಲಾಗಿತ್ತು ಎಂದು ಅವರು ಅರ್ಜಿಯಲ್ಲಿ ಆರೋಪಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಐಯುಎಂಎಲ್ ನ್ಯಾಯಾಲಯದ ತೀರ್ಪಿನ ಪ್ರತಿ ಕೈ ತಲುಪಿದ ನಂತರ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದೆ.

Leave a Comment