ಧರಣಿ ಕೈಬಿಟ್ಟ ಬಿಜೆಪಿ : ಕಾಂಗ್ರೆಸ್ – ಬಿಜೆಪಿ ಸದಸ್ಯರ ಮಧ್ಯೆ ಮಾತಿನ ಚಕಮಕಿ

ಬೆಂಗಳೂರು, ಮಾ. ೨೦- ಕಾಂಗ್ರೆಸ್ ಹೈಕಮಾಂಡ್‌ಗೆ ಕಪ್ಪ ನೀ‌ಡಿರುವ ಕುರಿತು ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಅವರ ನಿವಾಸದಲ್ಲಿ ದೊರೆತ ಡೈರಿ ಕುರಿತಂತೆ ಚರ್ಚೆಗೆ ಅವಕಾಶ ನೀಡಬೇಕೆಂದು ಬಿಜೆಪಿ ಸದಸ್ಯರು ಕಳೆದ ಗುರುವಾರದಿಂದ ವಿಧಾನಸಭೆಯಲ್ಲಿ ನಡೆಸುತ್ತಿದ್ದ ಧರಣಿಯನ್ನು ಇಂದು ಕೈಬಿಟ್ಟು ಸುಗಮ ಕಲಾಪಗಳಿಗೆ ಅನುವು ಮಾ‌ಡಿಕೊಟ್ಟರು.

ಇಂದು ಬೆಳಿಗ್ಗೆ ಸದನ ಸಮಾವೇಶಗೊಳ್ಳುತ್ತಿದ್ದಂತೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ಸಭಾಧ್ಯಕ್ಷ ಕೆ.ಬಿ. ಕೋಳಿವಾಡ್ ಅವರ ಪೀಠದ ಮುಂದಿನ ಬಾವಿಗಿಳಿದು ಧರಣಿ ಮುಂದುವರೆಸಿದರು.

ಈ ಹಂತದಲ್ಲಿ ಜಗದೀಶ್ ಶೆಟ್ಟರ್, ವಿವಾದಾತ್ಮಕ ಡೈರಿ ಕುರಿತು ಚರ್ಚೆಗೆ ಅವಕಾಶ ನೀ‌ಡಬೇಕೆಂದು ಪಟ್ಟು ಹಿಡಿದು ನಾವು ಧರಣಿ ನಡೆಸಿದೆವು, ಈ ವಿಚಾರ ಚರ್ಚೆಯಾಗಬೇಕು. ಸರ್ಕಾರದಿಂದ ಉತ್ತರ ಬರಬೇಕು. ಜನರಲ್ಲಿ ಉಂಟಾಗಿರುವ ಗೊಂದಲ ನಿವಾರಣೆಯಾಗಬೇಕು ಎಂಬ ಉದ್ದೇಶದಿಂದ ನಾವು ಪ್ರತಿಭ‌ಟನೆಗೆ ಇಳಿದ್ದಿದ್ದೆವು. ಆದರೆ ಸರ್ಕಾರ ಮೊಂಡುತನ ಪ್ರದರ್ಶಿಸುತ್ತಿರುವುದರಿಂದ ಇತರೆ ಕಲಾಪಗಳಿಗೆ ಅಡ್ಡಿಯಾಗಬಾರದೆಂಬ ಕಾರಣದಿಂದ ಧರಣಿ ಕೈಬಿಡುತಿದ್ದೇವೆ ಎಂದರು.

ರಾಜ್ಯವನ್ನು ಆವರಿಸಿರುವ ಭೀಕರ ಬರಗಾಲ ಹಾಗೂ ಬಜೆಟ್ ಕುರಿತು ಚರ್ಚೆಗಳು ನ‌ಡೆಯಬೇಕಾಗಿದೆ. ನಾವೆಂದೂ ಚರ್ಚೆಯ ಪರವಾಗಿದ್ದು, ಕಲಾಪಗಳಿಗೆ ಎಂದೂ ಅ‌‌‌ಡ್ಡಿಪಡಿಸಿಲ್ಲ. ಈಗಲೂ ಅಡ್ಡಿಪಡಿಸಬಾರದು ಎಂಬ ಸದುದ್ದೇಶದಿಂದ ಧರಣಿ ಕೈಬಿಡಲು ನಿರ್ಧರಿಸಿದ್ದೇವೆ ಎಂದರು.

ಈ ವಿಚಾರವನ್ನು ಜನರ ಬಳಿಗೆ ಕೊಂ‌ಡೊಯ್ಯುತ್ತೇವೆ. ಜನ ಈ ಕುರಿತು ತೀರ್ಮಾನಿಸುತ್ತಾರೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.

ಸಭಾಧ್ಯಕ್ಷ ಕೆ.ಬಿ. ಕೋಳಿವಾಡ್, ಧರಣಿ ಕೈಬಿಟ್ಟು ಸುಗಮ ಕಲಾಪಗಳಿಗೆ ಅವಕಾಶ ಮಾಡಿಕೊಡಬೇಕು. ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದ್ದು, ಆ ಕುರಿತಂತೆ ಚರ್ಚೆಯಾಗಬೇಕಾಗಿದೆ. ಬಜೆಟ್ ಕುರಿತಂತೆಯೂ ಚರ್ಚೆ ನಡೆಯಬೇಕಾಗಿದೆ. ಇದಕ್ಕೆ ಅವಕಾಶ ಮಾಡಿಕೊ‌ಡುವ ಮೂಲಕ ವಿಧಾನಸಭೆಯ ನಡವಳಿಕೆಗಳು ಇಡೀ ದೇಶಕ್ಕೆ ಆದರ್ಶಪ್ರಾಯವಾಗಿರುವಂತೆ ನೀವೆಲ್ಲಾ ಸಹಕರಿಸಬೇಕು ಎಂದು ಮನವಿ ಮಾಡಿದರು.

ಈ ಹಂತದಲ್ಲಿ ಎದ್ದುನಿಂತ ಜಗದೀಶ್ ಶೆಟ್ಟರ್, ಭೀಕರ ಬರಗಾಲ ಕುರಿತು ಚರ್ಚೆಯಾಗಬೇಕಾಗಿದೆ. ಪಶ್ಚಿಮ ಘಟ್ಟಗಳ ಸಂರಕ್ಷಣೆ ಕುರಿತಂತೆ ಡಾ. ಕಸ್ತೂರಿರಂಗನ್ ನೀಡಿರುವ ವರದಿ ಕುರಿತು ಚರ್ಚೆಯಾಗಬೇಕಾಗಿದೆ. ಸದನ ಸಮಯ ಹಾಳುಮಾಡಬೇಕೆಂಬ ಉದ್ದೇಶ ತಮ್ಮದಾಗಿಲ್ಲ. ಅರ್ಥಪೂರ್ಣ ಚರ್ಚೆಗೆ ನಮ್ಮ ಸಹಕಾರ  ಸದಾ ಇರುತ್ತದೆ ಎಂದರು.

ಬರ ಪರಿಸ್ಥಿತಿ ಕುರಿತು ನಿಯಮ 69ರ ಅಡಿ ಚರ್ಚೆಗೆ ಅವಕಾಶ ನೀಡಬೇಕೆಂದು ಈಗಾಗಲೇ ತಮಗೆ ನೋಟೀಸ್ ಕಳುಹಿಸಲಾಗಿದೆ. ಅದಕ್ಕೆ ಅವಕಾಶ ಮಾಡಿಕೊಡಬೇಕು. ಡೈರಿ ವಿಚಾರವನ್ನು ಸರ್ಕಾರ ಪ್ರತಿಷ್ಠೆ ಪ್ರಶ್ನೆಯನ್ನಾಗಿ ಪರಿಗಣಿಸಿ ಚರ್ಚೆ ಮಾಡದಿರುವ ಮೊಂಡುತನ ಪ್ರದರ್ಶಿಸಿದೆ ಎಂದು ಟೀಕಿಸಿದರು.

ಇದಕ್ಕೆ ತೀಕ್ಷ್ಮವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಬಿಜೆಪಿ ಧೋರಣೆಯನ್ನು ಕಟುವಾಗಿ ಟೀಕಿಸಿದರು. ಇದರಿಂದಾಗಿ ಬಿಜೆಪಿ ಸದಸ್ಯರು ಕೆರಳಿದರು. ಆಗ ಬಿಜೆಪಿ ಹಾಗೂ ಆಡಳಿತ ಪಕ್ಷದ ನಡುವೆ ಏರಿದ ಧ್ವನಿಯಲ್ಲಿ ಮಾತಿನ ಚಕಮಕಿ ನಡೆಯಿತು.

ಜನರ ಸಮಸ್ಯೆಗಳ ಬಗ್ಗೆ ಬಿಜೆಪಿ ಸದಸ್ಯರಿಗೆ ಕಾಳಜಿ ಇಲ್ಲ. ಕೇವಲ ಪ್ರಚಾರಕ್ಕೋಸ್ಕರ ವಿಧಾನಸಭೆಯಲ್ಲಿ ಧರಣಿ ನಡೆಸುತ್ತಿದ್ದಾರೆ. ನಕಲಿ ಡೈರಿಯನ್ನು ಮುಂದಿಟ್ಟುಕೊಂಡು ಪ್ರಚಾರ ಪಡೆಯಲು ಸದನ ಕಲಾಪವನ್ನು ಹಾಳು ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತರಾಟೆಗೆ ತೆಗೆದುಕೊಂಡರು.

‌ಕಾಂಗ್ರೆಸ್ ಹೈಕಮಾಂಡ್‌ಗೆ ಕಪ್ಪ ನೀ‌ಡಿರುವ ಗೋವಿಂದರಾಜು ರವರ ಮನೆಯಲ್ಲಿ ದೊರೆತ ಡೈರಿಯಲ್ಲಿ ಉಲ್ಲೇಖವಿದೆ ಎಂಬ ವಿಚಾರ ಕುರಿತು ಚರ್ಚೆಗೆ ಅವಕಾಶ ಕೊಡಬೇಕು ಎಂದು ಕಳೆದ ಗುರುವಾರದಿಂದ ಧರಣಿ ನಡೆಸುತ್ತಿದ್ದ ಬಿಜೆಪಿ ಸದಸ್ಯರು ಇಂದು ಧರಣಿ ಕೈಬಿಟ್ಟ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಸಿದ್ದರಾಮಯ್ಯ ಬಿಜೆಪಿ ನಾಯಕರ ಧೋರಣೆಯನ್ನು ಟೀಕಿಸಿದರು.

ನಕಲಿ ಡೈರಿ ಮುಂದಿಟ್ಟುಕೊಂಡು ಬಿಜೆಪಿ ಸದಸ್ಯರು ಧರಣಿ ನಡೆಸಿದರು. ಆದರೆ ಇಂಥ ವಿಚಾರಗಳನ್ನು ಪರಿಗಣಿಸಲು ಸಾಧ್ಯವಿಲ್ಲವೆಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಹೀಗಿದ್ದರೂ ಇವರು ಧರಣಿ ನಡೆಸಿದರು. ಜನ ಉಗಿಯಲಿಕ್ಕೆ ಶುರ ಮಾಡಿದಾಗ ಧರಣಿ ಕೈಬಿಡುವುದಾಗಿ ಹೇಳುತ್ತಿದ್ದಾರೆ ಎಂದರು.

ಅದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಜಗದೀಶ್‌ಶೆಟ್ಟರ್ ಸಿದ್ದರಾಮಯ್ಯ ವಿರುದ್ದ ಹರಿಹಾಯ್ದರು. ಶೆಟ್ಟರ್ ಬೆಂಬಲಕ್ಕೆ ವಿಶ್ವೇಶ್ವರಹೆಗಡೆ ಕಾಗೇರಿ, ಸುನೀಲ್‌ಕುಮಾರ್, ಬೋಪಯ್ಯ ಮತ್ತಿತರರು ನಿಂತರು.

ಟೀಕಾ ಪ್ರಹಾರ ಮುಂದುವರೆಸಿದ ಸಿದ್ದರಾಮಯ್ಯ ಈ ರಾಜ್ಯವನ್ನು ಲೂಟಿ ಹೊಡೆದವರು ಇವರೆ. ಲಕ್ಷಾಂತರ ಕೋಟಿ ರೂ.ಗಳ ಲೂಟಿಕೋರರು ಇವರು. ಕರ್ನಾಟಕವನ್ನು ಹಾಳು ಮಾಡಿದ್ರು. ಇವರಿಗೆ ನಾಚಿಕೆ ಆಗಬೇಕು. ಜಗದೀಶ್‌ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅವರೂ ಲೂಟಿ ಮಾಡಿದರೆಂದು ಅಂದು ಕೆ.ಜೆ.ಪಿ.ಯಲ್ಲಿದ್ದ ಯಡಿಯೂರಪ್ಪ ಟೀಕೆ ಮಾಡಿದರು. ಭೂತದ ಬಾಯಿಯಲ್ಲಿ ಭಗವದ್ಗೀತೆ ಕೇಳಿದಂತಾಗುತ್ತಿದೆ. ಇವರಿಗೆ ಮಾನಮರ್ಯಾದೆ ಇಲ್ಲ ಎಂದರು.

ಈ ಹಂತದಲ್ಲೂ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ವಾದ-ವಾಗ್ವಾದ, ಏರಿದ ಧ್ವನಿಯಲ್ಲಿ ಮಾತಿನಚಕಮಕಿ ನಡೆದು ಯಾರು ಏನು ಹೇಳುತ್ತಿದ್ದಾರೆ ಎಂಬುದು ತಿಳಿಯಲಿಲ್ಲ.

ಸಭಾಧ್ಯಕ್ಷರು ನಿಗದಿತ ಕಲಾಪವನ್ನು ಕೈಗೆತ್ತಿಕೊಳ್ಳುತ್ತಿದ್ದಂತೆ ವಾತಾವರಣ ತಿಳಿಯಾಯಿತು.

 

Leave a Comment