ಧನ್ಯಶ್ರೀ ಆತ್ಮಹತ್ಯೆ ಪ್ರಕರಣ ಬಂಟ್ವಾಳದ ಯುವಕ ಸೆರೆ

ಮೂಡಿಗೆರೆ, ಜ.೧೨- ಮೂಡಿಗೆರೆ ಕಾಲೇಜು ವಿದ್ಯಾರ್ಥಿನಿ ಧನ್ಯಶ್ರೀ ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸಂತೋಷ್ ಎಂಬಾತನನ್ನು ಮೂಡಿಗೆರೆ ಪೊಲೀಸರು ಬಂಧಿಸಿದ್ದಾರೆ. ಮೂಲತಃ ದಕ್ಷಿಣ ಕನ್ನಡ ಬಂಟ್ವಾಳ ನಿವಾಸಿಯಾದ ಸಂತೋಷ್ ಅಲಿಯಾಸ್ ರಾಜೇಶ್ ಬಡಗ ಕಜೆಕಾರ್‌ನಲ್ಲಿ ಲಿಫ್ಟ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ. ಧನ್ಯಶ್ರೀ ಆತ್ಮಹತ್ಯೆ ಘಟನೆ ಬಳಿಕ ಸಂತೋಷ್ ನಾಪತ್ತೆಯಾಗಿದ್ದ.

ಫೋನ್ ಕರೆ ಡೀಟೈಲ್ಸ್ ಹಾಗೂ ಲೋಕೇಶನ್ ಆಧಾರದ ಮೇಲೆ ಮೂಡಿಗೆರೆ ಪಿಎಸ್‌ಐ ರಫೀಕ್ ಹಾಗೂ ಪೊಲೀಸರು ಸಂತೋಷ್‌ನನ್ನು ಬೆಂಗಳೂರಿನಲ್ಲಿ ಬಂಧಿಸಿರುವುದಾಗಿ ವರದಿ ವಿವರಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಡಿಗೆರೆ ಬಿಜೆಪಿ ನಗರ ಯುವಮೋರ್ಛಾ ಅಧ್ಯಕ್ಷ ಅನಿಲ್‌ನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಧನ್ಯಶ್ರೀ ‘ಐ ಲವ್ ಮುಸ್ಲಿಮ್ಸ್’ ಎಂದು ಬರೆದಿದ್ದನ್ನು ಸಂತೋಷ್ ಸ್ನ್ಯಾಪ್‌ಶಾಟ್ ತೆಗೆದು ಇತರರಿಗೆ ಹಂಚಿದ್ದ ಆರೋಪ ಎದುರಿಸುತ್ತಿದ್ದಾನೆ. ಇದರಿಂದ ನೊಂದ ಧನ್ಯಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Comment