ದ.ಕ. ಜಿಲ್ಲೆಯ ಮೊದಲ ಕೊರೊನ ಸೋಂಕಿತ ವ್ಯಕ್ತಿ ಗುಣಮುಖ! ಇಂದು ಆಸ್ಪತ್ರೆಯಿಂದ ಡಿಸ್ ಚಾರ್ಜ್ 

ಮಂಗಳೂರು, ಎ.6- ದ.ಕ. ಜಿಲ್ಲೆಯಲ್ಲಿ ದಾಖಲಾಗಿದ್ದ ಮೊದಲ ಕೊರೊನಾ ಸೋಂಕಿತ ವ್ಯಕ್ತಿ ಗುಣಮುಖನಾಗಿದ್ದು ಇಂದು ಆಸ್ಪತ್ರೆಯಿಂದ ಡಿಸ್ ಚಾರ್ಜ್ ಅಗಲಿದ್ದಾರೆ.
ದುಬೈನಿಂದ ಬಂದಿದ್ದ 22 ವರ್ಷದ ಭಟ್ಕಳ ಮೂಲದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು. ಮಂಗಳೂರು ವಿಮಾನ ನಿಲ್ದಾಣದ ಮೂಲಕ ಆ ವ್ಯಕ್ತಿ ಮಂಗಳೂರಿಗೆ ಆಗಮಿಸಿದ್ದ. ಮಾರ್ಚ್ 19ರಂದು ಭಟ್ಕಳ ಮೂಲದ ವ್ಯಕ್ತಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಆಗಮಿಸಿದ್ದು ವಿಮಾನ ನಿಲ್ದಾಣದಲ್ಲಿ ತಪಾಸಣೆ ಸಂದರ್ಭ ಆತನಲ್ಲಿ ಕೊರೊನಾ ಸೋಂಕು ಲಕ್ಷಣಗಳು ಕಂಡುಬಂದಿತ್ತು. ತಕ್ಷಣ ಆತನನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಬಳಿಕ ಆತನನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಅಲ್ಲದೆ, ಗಂಟಲ ದ್ರವ ಸಂಗ್ರಹಿಸಿ ಪರೀಕ್ಷೆಗೆ ರವಾನಿಸಲಾಗಿತ್ತು. ಪರೀಕ್ಷಾ ವರದಿ ಕೈ ಸೇರಿದ ಸಂದರ್ಭದಲ್ಲಿ ಆತನಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಇದು ಜಿಲ್ಲೆಯಲ್ಲಿ ದಾಖಲಾಗಿದ್ದ ಮೊದಲ ಪ್ರಕರಣವಾಗಿತ್ತು.
ಸದ್ಯ ಪರೀಕ್ಷಾ ಮಾದರಿಗಳು ನೆಗೆಟಿವ್ ವರದಿಯನ್ನು ನೀಡಿವೆ. ಈ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ದಾಖಲಾದ ಮೊದಲ ಸೋಂಕಿತ ಗುಣಮುಖನಾದಂತಾಗಿದೆ. ಇಂದು ವ್ಯಕ್ತಿಯನ್ನು ಡಿಸ್ಚಾರ್ಜ್ ಮಾಡಲಾಗುವುದೆಂದು, ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ನಿನ್ನೆ ಯಾವುದೇ ಕೊರೊನ ಪ್ರಕರಣವಿಲ್ಲ!
ಮಂಗಳೂರು, ಎ.6- ಜಿಲ್ಲೆಯಲ್ಲಿ ರವಿವಾರದಂದು ಯಾವುದೇ ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿಲ್ಲ.
ನಿನ್ನೆ ೨೮ ಮಂದಿಯ ಪರೀಕ್ಷಾ ವರದಿ ಲಭ್ಯವಾಗಿದೆ. ಎಲ್ಲಾ ವರದಿಗಳು ನೆಗೆಟಿವ್ ಆಗಿವೆ. ಶನಿವಾರದಂದು ಮೂರು ಪ್ರಕರಣಗಳು ದೃಢಪಟ್ಟು ಉಂಟಾಗಿದ್ದ ಆತಂಕ ಸ್ವಲ್ಪಮಟ್ಟಿಗೆ ದೂರವಾಗಿದೆ. ಸೋಂಕು ಹರಡುವುದನ್ನು ತಡೆಯಲು ಜಿಲ್ಲಾಡಳಿತ ಎಲ್ಲಾ ರೀತಿಯ ಮುತುವರ್ಜಿ ವಹಿಸಿದ್ದು, ಆರೋಗ್ಯ ಇಲಾಖೆ ಕೂಡ ಹಲವು ರೀತಿಯಲ್ಲಿ ಕ್ರಮಗಳನ್ನು ಕೈಗೊಂಡಿದ್ದು, ಪೊಲೀಸ್ ಇಲಾಖೆ ಕೂಡ ಲಾಕ್ ಡೌನ್ ಮೂಲಕ ಜನತೆಯನ್ನು ನಿಯಂತ್ರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಸೋಂಕಿತನ ಜೊತೆಯಿದ್ದ ವ್ಯಕ್ತಿಯ ಬಗ್ಗೆ ಪೊಲೀಸ್ ದೂರು ಜಿಲ್ಲಾಸ್ಪತ್ರೆಗೆ ದಾಖಲು 
ಮಂಗಳೂರು, ಎ.6- ಬಿಕರ್ನಕಟ್ಟೆ-ಶಕ್ತಿನಗರ ರಸ್ತೆಯಲ್ಲಿರುವ ಸೌಜನ್ಯ ಲೇನ್ ನಿವಾಸಿಯೋರ್ವ ತೊಕ್ಕೊಟ್ಟಿನ ಕೊರೋನ ಪೀಡಿತ ವ್ಯಕ್ತಿಯ ಸಂಪರ್ಕವನ್ನು ಹೊಂದಿದ್ದು ಈ ಮಾಹಿತಿಯನ್ನು ಪಡೆದಿದ್ದ ಸ್ಥಳೀಯರು ಕಂಕನಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದು ಕೂಡಲೇ ಸ್ಪಂದಿಸಿದ ಠಾಣೆಯ ಹೆಡ್ ಕಾನ್ ಸ್ಟೇಬಲ್ ಸಂತೋಷ್ ಸಿ.ಜೆ. ಸಿಬ್ಬಂದಿಯ ಜೊತೆಗೆ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ಶಂಕಿತ ವ್ಯಕ್ತಿಯು ಜ್ವರದಿಂದ ಬಳಲುತ್ತಿದ್ದು ಕಂಕನಾಡಿ ಪೊಲೀಸರು ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಿ ಅನಾರೋಗ್ಯ ಪೀಡಿತ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

Leave a Comment