ದೋಸ್ತಿ ವರ್ಸಸ್ ದೋಸ್ತಿ ಚುನಾವಣೆ : ಶ್ರೀನಿವಾಸ ಪ್ರಸಾದ್

ಮೈಸೂರು. ಏ.16 : ದೋಸ್ತಿ ವರ್ಸಸ್ ಬಿಜೆಪಿ ಹೋಗಿ, ದೋಸ್ತಿ ವರ್ಸ್ಸ್ ದೋಸ್ತಿ ಆಗಿದೆ, ಮಂಡ್ಯ, ಹಾಸನದಲ್ಲಿ ದೋಸ್ತಿ ನಡುವೆ ಹೊಂದಾಣಿಕೆ ಹಾಗೂ ಸಮನ್ವಯತೆಯೇ ಇಲ್ಲ, ಈ ಮೈತ್ರಿಯಿಂದ ಬಿಜೆಪಿಗೆ ಅನುಕೂಲವಾಗಿದೆ ಎಂದು ಕೇಂದ್ರ ಮಾಜಿ ಸಚಿವ ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ ಪ್ರಸಾದ್ ತಿಳಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘವು ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿ, ಮೇ.23ರ ಚುನಾವಣಾ ಫಲಿತಾಂಶದ ನಂತರ ಈ ದೋಸ್ತಿಗಳ ಮೇಲೆ ಯಾವ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಿ ಎಂದು ಯಕ್ಷ ಉತ್ತರ ನೀಡಿದರು.
ಕುಮಾರ ಪರ್ವ ಆರಂಭವಾಗಿದ್ದೇ ಚಾಮರಾಜನಗರದಿಂದ, ಇಂದು ದೋಸ್ತಿಗಳಾಗಿರುವವರು ವಿಧಾನಸಭಾ ಚುನಾವಣಾ ಪೂರ್ವದಲ್ಲಿ ನಡೆಸಿದ ವಾಗ್ಧಾಳಿಗಳನ್ನು ಇಂದು ಉಲ್ಲೇಖಿಸಲು ಸಾಧ್ಯವಿಲ್ಲ, ಅಂತಹ ಕೆಳಮಟ್ಟದ ಮಾತುಗಳು ಕೇಳಿ ಬಂದವು ಎಂದು ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು.
ಮೇಲ್ವರ್ಗ, ಕೆಳವರ್ಗ, ದಲಿತ ವಿರೋಧಿ, ದಲಿತ ಪರ, ಅಹಿಂದ ವಿರೋಧಿ ಎನ್ನುವುದು ಚುನಾವಣಾ ಪ್ರಚಾರದ ಪದಗಳಿವು ಜನರ ಗಮನ ಮತ್ತೊಂದೆಡೆ ಸೆಳೆಯಲು ಈ ರೀತಿ ಮಾತುಗಳು ಕೇಳಿ ಬರುತ್ತಿವೆ ಎಂದರು.
ಮೋದಿ ನೇತೃತ್ವದ ಸರ್ಕಾರವನ್ನು ಸೋಲಿಸಲೋಸ್ಕರ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದೋಸ್ತಿ ಮಾಡಿಕೊಂಡಿದ್ದಾರೆಯೇ ಹೊರತು ಇದರಿಂದ ರಾಜ್ಯಕ್ಕೆ ಯಾವ ಲಾಭವಿಲ್ಲ, ಕಳೆದ ಎಂಟು ತಿಂಗಳಲ್ಲಿ ಈ ಸರ್ಕಾರದ ಸಮನ್ವಯತೆ ಕೊರತೆಯಿದ್ದು ಪಕ್ಷಗಳ ಆಂತರಿಕ ಕಲಹವು ಅಸಹ್ಯ ಹುಟ್ಟಿಸುತ್ತಿದೆ ಎಂದು ದೂರಿದರು.
ದಾವೂದ್ ಇಬ್ರಾಹಿಂ-ಸಿಎಂ ಇಬ್ರಾಹಿಂ ಒಂದೇ :
ದಾವೂದ್ ಇಬ್ರಾಹಿಂಗೂ ಹಾಗೂ ಸಿಎಂ ಇಬ್ರಾಹಿಂಗೂ ಯಾವುದೇ ವ್ಯತ್ಯಾಸವಿಲ್ಲ, ಅವರೊಬ್ಬ ವಿದೂಷಕ, ಸಿದ್ದರಾಮಯ್ಯನವರ ಜೊತೆಯಿದ್ದಾಗ ದೇವೇಗೌಡ್ರ ವಿರುದ್ಧ ಬೇಕಾಬಿಟ್ಟೆಯಾಗಿ ಮಾತನಾಡಿದವರು, ಈಗ ಸಮಯ ಸಾಧಕತನ ತೋರುತ್ತಿರುವ ಪುಂಗಿದಾಸ ಎಂದು ಮಾಜಿ ಸಚಿವ ಇಬ್ರಾಹಿಂ ವಿರುದ್ಧ ಹರಿಹಾಯ್ದರು.
ಅನ್ಯ ಧರ್ಮದ ಮತ ಬೇಡ ಎನ್ನುವುದು ಪ್ರಜಾಪ್ರಭುತ್ವ ವಿರೋಧಿಯಾಗಿದೆ, ಹಾಗೆ ಇನ್ನೊಂದ ಧರ್ಮದ ಮತ ಬೇಡ ಎಂದು ಯಾರು ಹೇಳಬಾರದು, ಆ ಧರ್ಮದವರು ದೇಶದ ಮುಖ್ಯ ವಾಹಿನಿಯಲ್ಲಿರುವವರು, ದಲಿತರು ಮುಖ್ಯಮಂತ್ರಿಯಾಗಬೇಕು ಇದು ನನ್ನಾಸೆಯಾಗಿದೆ, ಇದು ನನ್ನ 7ನೇ ಚುನಾವಣೆ, ಬೂತ್ ಮಟ್ಟದಿಂದಲೂ ಕಾರ್ಯಕರ್ತರನ್ನು ಸಂಘಟಿಸಿರುವೆ.
ಸಂವಿಧಾನ ಪ್ರಶ್ನೆ ಉದ್ಭವಿಸಿದಾಗ ನಾನು ಯಾವ ಪಕ್ಷದಲ್ಲಿದ್ದರೂ ಸಹಿಸಿಕೊಳ್ಳುವುದಿಲ್ಲ. ದೇಶಕ್ಕೆ ಮೋದಿಯವರ ನೇತೃತ್ವ ಎಷ್ಟು ಅವಶ್ಯವೋ, ರಾಜ್ಯಕ್ಕೆ ಯಡಿಯೂರಪ್ಪನವರ ಆಡಳಿತವು ಅಷ್ಟೇ ಮುಖ್ಯ, ಆದ್ದರಿಂದ ಯಡಿಯೂರಪ್ಪ ಮುಖ್ಯಮಂತ್ರಿಯಾಗಬೇಕು, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು 20 ಕ್ಷೇತ್ರಗಳಲ್ಲಿ ಜಯ ಸಾಧಿಸಲಿದೆ ಎಂದು ತಿಳಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಪ್ರಧಾನ ಕಾರ್ಯದರ್ಶಿ ಕೆ.ಜೆ.ಲೋಕೇಶ್ ಬಾಬು, ನಗರ ಕಾರ್ಯದರ್ಶಿ ರಾಘವೇಂದ್ರ, ದಕ್ಷಿಣಾಮೂರ್ತಿ ಸಂವಾದದಲ್ಲಿ ಹಾಜರಿದ್ದರು.

Leave a Comment