ದೋಣಿಗೆ ಹಡಗು ಡಿಕ್ಕಿ ಮೂವರು ಮೀನುಗಾರರ ಸಾವು

ಕೊಚ್ಚಿ, ಆ. ೭- ಕೇರಳದ ತ್ರಿಶೂರು ಜಿಲ್ಲೆಯ ಚೆತ್ತುವಾ ಕರಾವಳಿಯ ದೂರ ಸಮುದ್ರದಲ್ಲಿ ಮೀನುಗಾರರ ದೋಣಿಗೆ ಅಪರಿಚಿತ ಹಡಗೊಂದು ಡಿಕ್ಕಿ ಹೊಡೆದ ಪರಿಣಾಮವಾಗಿ ಕನಿಷ್ಠ ಮೂವರು ಮೀನುಗಾರರು ಮೃತಪಟ್ಟಿರುವುದಾಗಿ ಶಂಕಿಸಲಾಗಿದೆ.
ಇಂದು ನಸುಕಿನ 3.30ರ ಹೊತ್ತಿಗೆ ಸಂಭವಿಸಿರುವ ಈ ಅಪಘಾತದಲ್ಲಿ ಕೆಲ ಮೀನುಗಾರರು ಗಾಯಗೊಂಡಿದ್ದಾರೆ. ದೋಣಿಯಲ್ಲಿ 15 ಮೀನುಗಾರರು ಇದ್ದರೆನ್ನಲಾಗಿದೆ.
ಎರ್ನಾಕುಲಂ ಜಿಲ್ಲೆಯ ಮುನಂಬಾಮ್ ಪ್ರದೇಶ ನಿವಾಸಿಗಳಾದ ಮೀನುಗಾರರ ತಂಡ ಮೀನುಗಾರಿಕೆಗೆ ಆಳದ ಕಡಲಿಗೆ ತೆರಳಿದ್ದರು.
ಮೀನುಗಾರರ ದೋಣಿಗೆ ಡಿಕ್ಕಿ ಹೊ‌ಡೆದ ಹಡಗು ಮುಂದೆ ಹೋಗಿದೆ. ಆರಂಭಿಕ ಮಾಹಿತಿಗಳ ಪ್ರಕಾರ ಮೂವರು ಮೀನುಗಾರರು ಮೃತಪಟ್ಟಿದ್ದಾರೆ ಎಂದು ಕೇರಳ ಮೀನುಗಾರಿಕೆ ಸಚಿವ ಜೆ. ಮರ್ಸಿಕುಟ್ಟಿ ತಿಳಿಸಿದ್ದಾರೆ.
ಈ ಘಟನೆಯ ಬಗ್ಗೆ ಕರಾವಳಿ ನೌಕಾಪಡೆಯನ್ನು ಜಾಗೃತಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಜೂನ್ 7 ರಂದು ವಿದೇಶಿ ಹಡಗೊಂದು ಮೀನುಗಾರಿಕೆ ದೋಣಿಗೆ ಡಿಕ್ಕಿ ಹೊಡೆದಿದ್ದ ಘಟನೆಯಲ್ಲಿ ಇಬ್ಬರು ಮೀನುಗಾರರು ಗಾಯಗೊಂಡಿದ್ದರು.

Leave a Comment