ದೊಡ್ಡ ಮೋರಿ ಬಳಿ ತ್ಯಾಜ್ಯದ ವಾಸನೆ

ಹಂದಿಗಳ ಕಾಟ ಸಹಿಸಲಸಾಧ್ಯ : ಕ್ರಮಕ್ಕೆ ಒತ್ತಾಯ
ಮೈಸೂರು, ಮೇ.22:- ನಗರದ ಇಸ್ಕಾನ್ ಟೆಂಪಲ್ ಮುಂದೆ ಸ್ಟಾರ್ಲೈಟ್ ಹೋಟೆಲ್ ಪಕ್ಕ ದೊಡ್ಡ ಮೋರಿಗೆ ಬೆಳಗಿನ ಜಾವದ ಹೊತ್ತು ಬೇರೆಬೇರೆ ಬಡಾವಣೆಗಳಿಂದ ಬಂದು ಕಸವನ್ನು ಸುರಿದು ಹೋಗುತ್ತಾರೆ. ಇದು ಕುವೆಂಪು ನಗರ ಮತ್ತು ಚನ್ನಗಿರಿ ಕೊಪ್ಪಲ್ ಮತ್ತು ಕೆ ಬ್ಲಾಕ್ ಬಡಾವಣೆ ನಿವಾಸಿಗಳಿಗೆ ಸಹಿಸಲಾರದ ಕಾಟವಾಗಿದೆ. ಇತ್ತ ಅಧಿಕಾರಿಗಳು ಗಮನ ಹರಿಸಬೇಕೆಂದು ಸಾಮಾಜಿಕ ಹೋರಾಟಗಾರ ವಿಕ್ರಂ ಅಯ್ಯಂಗಾರ್ ಒತ್ತಾಯಿಸಿದ್ದಾರೆ.
ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು ಸತ್ತವರಿಗೆ ಉಪಯೋಗಿಸಿದ ಚಾಪೆ ಹಾಸಿಗೆಗಳು. ತಮ್ಮ ಮನೆಗೆ ಬೇಡವಾದ ವಸ್ತುಗಳು, ಸೂಟ್ಕೇಸ್ ಗಳು, ಹಾಸಿಗೆ ದಿಂಬುಗಳನ್ನು ತಂದು ಮೋರಿಯೊಳಗೆ ಸುರಿಯುತ್ತಾರೆ. ಬೆಳಗಿನ ಜಾವಕ್ಕೆ ಕಾವಲು ಕಾಯುವ ಪರಿಸ್ಥಿತಿ ಬಂದಿದೆ. ರಾತ್ರಿಯಲ್ಲಿ ಮನೆಯಲ್ಲಿ ಮಿಕ್ಕ ಆಹಾರ ಪದಾರ್ಥಗಳನ್ನು ತಂದು ರಸ್ತೆ ರಸ್ತೆಗಳಲ್ಲಿ ಚೆಲ್ಲುತ್ತಾರೆ. ಬೆಳಗಿನ ಜಾವ 5 ರಿಂದ 7 ಗಂಟೆಯ ತನಕ ಇಸ್ಕಾನ್ ಪಕ್ಕದ ದೊಡ್ಡ ಗುಡ್ಡದಮೇಲೆ ಎಲ್ಲಿಂದಲೋ ಬಾಟಲುಗಳನ್ನು ತೆಗೆದುಕೊಂಡು ಬಂದು ಟಾಯ್ಲೆಟ್ ಮಾಡುತ್ತಾರೆ. ಇದರ ಜೊತೆಗೆ ಹಂದಿಗಳ ಹಾವಳಿ ಸುಮಾರು 200 ಹಂದಿಗಳು ದೊಡ್ಡ ಮೋರಿಯ ಪಕ್ಕ ರಾತ್ರಿ ಹತ್ತು ಗಂಟೆಯ ನಂತರ ತುಂಬಾ ಕಿರಿಚಿ ಕೊಳ್ಳುತ್ತವೆ. ರಸ್ತೆಯಲ್ಲಿ ತಂದು ಎಸೆದು ಹೋದ ಆಹಾರ ಪದಾರ್ಥಗಳನ್ನು ಕೆದಕಿ ಗೊಬ್ಬರ ಮಾಡಿರುತ್ತವೆ. ಬೆಳಗಿನ ಜಾವ ಗಾಡಿಯಲ್ಲಿ ಹೋಗುವವರಿಗೆ ವಿದ್ಯುತ್ ಬೆಳಕು ಇಲ್ಲದಿದ್ದರೆ ಅವರ ಪರದಾಟ ದೇವರಿಗೇ ಪ್ರೀತಿ. ಎಷ್ಟೋ ಗಾಡಿಗಳು ಅಪಘಾತಕ್ಕೆ ಒಳಗಾಗಿವೆ. ಹಂದಿ ಮಾಲೀಕರು ಪ್ರತಿನಿತ್ಯ ಬೆಳಿಗ್ಗೆ ಬಂದು ಎಣಿಸಿಕೊಂಡು ಹೋಗುತ್ತಾರೆ. ಕೇಳಿದರೆ ಇಸ್ಕಾನ್ ನವರು ಅದಕ್ಕೆ ಮಿಕ್ಕ ಆಹಾರ ಪದಾರ್ಥಗಳನ್ನು ತಂದು ಹಾಕುತ್ತಾರೆ ಅದರಿಂದ ಇಲ್ಲಿ ಬಿಟ್ಟಿದ್ದೇನೆ ಎಂದು ಹೇಳುತ್ತಾರೆ. ರಾತ್ರಿಯೆಲ್ಲ ಕುಡಿದು ಬಿಸಾಡಿದ ಖಾಲಿ ಬಿಯರ್ ಬಾಟಲ್ ಗಳು ವಿಸ್ಕಿ ಬಾಟಲ್ ಗಳು ಉದ್ದಕ್ಕೂ ಬಿದ್ದಿರುತ್ತವೆ. ಮೂತ್ರವಿಸರ್ಜನೆ ಕೇಳುವ ಹಾಗೇ ಇಲ್ಲ. ಇಲ್ಲಿ ಬದುಕುವುದು ತುಂಬಾ ದುಸ್ತರವಾಗಿದೆ.
ಕೊರೋನಾ ಆತಂಕದ ನಡುವೆ ಗಲೀಜಿನ ಭಯ , ಹಂದಿಗಳ ಭಯ. ಸಂಬಂಧಪಟ್ಟವರಿಗೆ ದೂರಿದರೂ ಪ್ರಯೋಜನವಿಲ್ಲ. ದೊಡ್ಡ ಮೋರಿಯ ವಾಸನೆಯಿಂದ ಮನೆಯಲ್ಲಿ ಕೂರಲು ಆಗುವುದಿಲ್ಲ. ಸೊಳ್ಳೆಗಳ ಕಾಟ. ಪ್ಲಾಸ್ಟಿಕ್ ಕವರ್ ಗಳು ಮೋರಿ ತುಂಬಾ ಬಿದ್ದಿವೆ. ಎಷ್ಟು ಹೇಳಿದರೂ ನಾಗರಿಕರು ಕೇಳುವ ಮನಸ್ಥಿತಿಯಲ್ಲಿ ಇಲ್ಲ. ಪಕ್ಕದಲ್ಲೇ ಮೂರು ಚೌಲ್ಟ್ರಿ ಇದೆ. ಸ್ವಚ್ಛ ನಗರಿ ಎಂದು ಹೆಸರು ಪಡೆದಿರುವ ಮೈಸೂರಿನಲ್ಲಿ ಇದೊಂದು ಭಾಗವನ್ನು ನೋಡಿದರೆ ಗೊತ್ತಾಗುತ್ತದೆ ಮೈಸೂರು ಎಷ್ಟು ಸ್ವಚ್ಛವಾಗಿದೆ ಎಂದಿದ್ದಾರೆ.
ಯಾವುದೋ ಬಡಾವಣೆಗಳಿಂದ ಕಸ ಸುರಿಯುವುದು ಖಾಲಿ ಬಾಟಲಿಗಳನ್ನು ಎಸೆಯುವುದು ಅಲ್ಲೇ ಶೌಚಾಲಯವಾಗಿ ಉಪಯೋಗಿಸಿಕೊಳ್ಳುವುದು. ರಸ್ತೆಗಳೆಲ್ಲಾ ಗಬ್ಬೆದ್ದು ಹೋಗಿದೆ. ನಿರ್ಮಲ ನಗರ ಯೋಜನೆ ಯಲ್ಲಿ ದೊಡ್ಡ ಮೋರಿಯನ್ನು ಸ್ವಚ್ಛ ಮಾಡಿಸಲಾಗಿತ್ತು. ಆದರೆ ರಾತ್ರಿ ಹತ್ತು ಗಂಟೆಯ ನಂತರ ಮತ್ತು ಬೆಳಗಿನ ಜಾವ ತುಂಬಾ ಕಸಗಳನ್ನು ತಂದು ಸುರಿಯುತ್ತಾರೆ. ಇನ್ನು ಸಂಜೆಯಾಯಿತೆಂದರೆ ಕುಡುಕರು ಮತ್ತು ಗಾಂಜಾ ಸೇರುವವರ ಸಂಖ್ಯೆ ತುಂಬಾ ಜಾಸ್ತಿಯಾಗಿದೆ. ಹೆಂಗಸರು ಮಕ್ಕಳು ವಾಕಿಂಗೆ ಹೋಗುವುದು ಆಗಲಿ ಓಡಾಡುವುದು ಆಗಲಿ ಸಾಧ್ಯವಿಲ್ಲ. ಸಂಜೆ 7 ಗಂಟೆಯ ನಂತರ ತುಂಬಾ ಭಯದ ವಾತಾವರಣ ನಿರ್ಮಾಣವಾಗಿದೆ. ದಯವಿಟ್ಟು ಸಂಬಂಧಪಟ್ಟವರು ಈ ಸಮಸ್ಯೆಗಳನ್ನು ಬಗೆಹರಿಸಿ ಎಂದು ಒತ್ತಾಯಿಸಿದ್ದಾರೆ.

Leave a Comment