ದೈವೀಕ ರಸಪಾಕ ‘ಭಕ್ತಿ ಮಂಜರಿ’

ಶ್ರೀಕೃಷ್ಣನ ಕೃಪಾರಕ್ಷೆಯ ವಿವಿಧ ಭಕ್ತಿ ಆಯಾಮಗಳನ್ನು ಚಿತ್ರಿಸಿದ ನೃತ್ಯಗುರು ಮೀನಾ ತೆಲಿಕಿಚೆರ್ಲಾರ  ನಾಟ್ಯಾಶಾಲೆ ”ನೃತ್ಯಾಂಜಲಿ’ಯ ಭಕ್ತಿಸಮರ್ಪಣೆ ದೈವೀಕವಾಗಿ ಅನಾವರಣಗೊಂಡಿತು. ಅಮೆರಿಕೆಯಲ್ಲಿ ನೆಲೆಸಿರುವ ಭರತನಾಟ್ಯ ಕಲಾವಿದೆ, ನೃತ್ಯಸಂಯೋಜಕಿ ಮೀನಾ ಅವರ ತಂಡ ಇತ್ತೀಚಿಗೆ ನಗರದ ಎ.ಡಿ.ಎ.ನಲ್ಲಿ ‘ನಾದಂ ಉತ್ಸವ’ದಲ್ಲಿ ಪ್ರಸ್ತುತಪಡಿಸಿದ ‘’ಭಕ್ತಿಮಂಜರಿ” ರಸಿಕರ ಪಾಲಿಗೆ ಭಕ್ತಿ ರಸಾಯನವಾಯಿತು.

ಶ್ರೀಕೃಷ್ಣನ ವ್ಯಕ್ತಿತ್ವ ಮತ್ತು ಜೀವನ, ಭಕ್ತರ ಮನಸ್ಸಿನಲ್ಲಿ ಸದಾ ಜೀವರಸವನ್ನು ಪುಟಿದೇಳಿಸುವ ವರ್ಣರಂಜಿತ ಕಾರಂಜಿ, ಸ್ಫೂರ್ತಿಯ ಸೆಲೆ. ಎಷ್ಟುಸಲ ನೋಡಿ ದರೂ ಬೇಸರವೆನಿಸದ, ತೃಪ್ತಿ ತಾರದ ನವನವೋನ್ಮೇಷ ಶಾಲಿನಿಯ ರಸಗಾಥೆ, ಬರಿದಾಗದ ಅಕ್ಷಯ ಭಂಡಾರ. ಕೃಷ್ಣನ  ರಾಗರಂಜಿತ ಬದುಕಿನ ಚಿತ್ರಣಗಳನ್ನು ಸಂಕ್ಷಿಪ್ತವಾಗಿ ಹಿಡಿದಿಡುವ ಪ್ರಯತ್ನ ಈ ‘’ಭಕ್ತಿಮಂಜರಿ” ನೃತ್ಯರೂಪಕದ್ದಾಗಿತ್ತು.

vaividya-dance

ಪಂಚವಿಧ ಭಕ್ತಿಗಳಲ್ಲಿ ಶ್ರೀಕೃಷ್ಣನ ದರ್ಶನ ಮಾಡಿಸುವ ಈ ನೃತ್ಯರೂಪಕದ ನೃತ್ಯ ಸಂಯೋಜನೆ ಎನ್. ಶ್ರೀಕಾಂತ್. ವಾತ್ಸಲ್ಯ ಭಕ್ತಿ  ಸೆರೆ ಮನೆಯಲ್ಲಿ ಕೃಷ್ಣನ ಜನನ, ವಸುದೇವ ಪುಟ್ಟಕೂಸನ್ನು ಗೋಕು ಲದಲ್ಲಿ ಬಿಟ್ಟು ಬರುವುದು, ಯಶೋದೆಯ ಮಡಿಲು ಸೇರಿದ ಮಗುವನ್ನು ಕಂಡು ಗೋಕುಲದ ಜನರ ಹರ್ಷ, ಕೃಷ್ಣನ ಬಾಲಲೀಲೆಗಳು,  ಯಶೋದೆಯ ಮಾತೃವಾತ್ಸಲ್ಯದ ಮಹಾಪೂರವನ್ನು ಕಲಾವಿದೆಯರು ತಮ್ಮ ಭಾವಪೂರ್ಣ ಅಭಿನಯದಿಂದ ಸುಂದರವಾಗಿ ಕಟ್ಟಿಕೊಟ್ಟರು. ಕಲಾವಿದೆಯರು ಒಟ್ಟಿಗೆ ಹೆಜ್ಜೆ ಹಾಕುವಾಗ ಕೇಳಿಬರುವ ಗೆಜ್ಜೆಗಳ ಸದ್ದೇ ಒಂದು ಬಗೆಯ ಆನಂದ ನೀಡಿತು. ಸಾಮರಸ್ಯದ ಸುಮನೋಹರ ನೃತ್ತಗಳು ಕಥಾನಕಕ್ಕೆ ಒಳ್ಳೆಯ ನಾಂದಿ ಹಾಡಿದವು. ಕಂದನ ಹುಟ್ಟನ್ನು ವಸುದೇವ ದಂಪತಿಗಳು ಸಂಭ್ರಮಿಸುವ ಪರಿ, ವಸುದೇವ ಸುರಿವ ಮಳೆಯಲ್ಲಿ, ಆದಿಶೇಷನ ರಕ್ಷೆಯಲ್ಲಿ ಸಾಗಿ, ದಾರಿಬಿಟ್ಟ ಯಮುನೆಯನ್ನು ದಾಟಿ, ನಂದನರಮನೆಯಲ್ಲಿ ಬಿಟ್ಟು ಬರುವ ದೃಶ್ಯ ಕಣ್ಣಿಗೆ ಕಟ್ಟುವಂತಿತ್ತು.

ಬಾಲಗೋಪಾಲನಾಗಿ ಮೀನಾ, ಮುಗ್ಧ ಮುಖಾಭಿವ್ಯಕ್ತಿಯಲ್ಲಿ ನೆಲದಮೇಲೆ ಅಂಬೆಗಾಲಿಟ್ಟ ನಡೆ ಸ್ತುತ್ಯಾರ್ಹ. ನರ್ತಕಿಯರು ವಿವಿಧ ಪಾತ್ರಗಳಾಗಿ ಬದಲಾಗುತ್ತ ಸನ್ನಿವೇಶಗಳನ್ನು ರೂಪಿಸಿದರು. ಯಶೋದೆ ಮಮತೆಯಿಂದ ಮಗುವನ್ನು ತೊಟ್ಟಿಲಿಗೆ ಹಾಕಿ ಜೋಗುಳ ಹಾಡಿ ನಲಿವ ಪರಿ, ಬೆನ್ನ ಮೇಲೆ ಕೂಸುಮರಿ ಆಡಿಸಿಕೊಳ್ಳುವ ವಾತ್ಸಲ್ಯಧಾರೆ, ಮಣ್ಣಾಟವಾಡುತ್ತಿದ್ದ ಮಗನ ಬಾಯಿ ತೆರೆಸಿದ ತಾಯಿ ಕಂಡ ಮೂರುಲೋಕದ ವಿಸ್ಮಯಭಾವ ಪರಿಣಾಮಕಾರಿಯಾಗಿತ್ತು.

ವಿಶ್ವ ಭಕ್ತಿ ಲೋಕ ಕಲ್ಯಾಣಾರ್ಥ ಬಾಲಗೋಪಾಲ ತೋರುವ ವಿಸ್ಮಯಕಾರಿ ಘಟನೆಗಳು ಒಂದೆರಡಲ್ಲ. ಅವನ ಬಾಲ್ಯಜೀವನದ ಕಥಾನಕಗಳೆಲ್ಲ ಕುತೂಹಲಕಾರಿ ಹಾಗೂ ರೋಮಾಂಚಕಾರಿಯಾದುದೇ. ಕೃಷ್ಣ ಶಕಟಾಸುರನ ವಧೆ, ಸುಂದರಿಯಾಗಿ ವೇಷ ಮಾರ್ಪಡಿಸಿಕೊಂಡ ಪೂತನಿಯ ವಿಷತುಂಬಿದ ಎದೆಯನ್ನು ಕಚ್ಚಿ ಅವಳನ್ನು ಕೊಂದ ದೃಶ್ಯ ಸುಂದರವಾಗಿ ಮೂಡಿಬಂತು. ಯಮುನಾ ನದಿಯ ನೀರನ್ನು ವಿಷಗೊಳಿಸಿ ಜನ-ದನಗಳ ಸಾವಿಗೆ ಕಾರಣವಾಗುತ್ತಿದ್ದ ಕಾಳಿಂಗ ನಾಗನನ್ನು ಕೃಷ್ಣ, ಚೆಂಡಾಟ ಆಡುತ್ತ ಬಂದವನು ಅದರ ಹೆಡೆ ಮೆಟ್ಟಿ ಕುಣಿಯುತ್ತ, ಬಾಲವನ್ನು ಗಿರಗಿರನೆ ತಿರುಗಿಸಿ ಮಣಿಸಿದ ಸನ್ನಿವೇಶವನ್ನು ನರ್ತಕಿಯರು ತಮ್ಮ ಸುಂದರ ಚಲನೆಗಳಿಂದ ರೂಪಿಸಿದರು.

ಗಿರಿಯಲ್ಲಿ ಮೇಯುತ್ತಿದ್ದ ಹಸುಗಳಾಗಿ ಅಭಿನಯಿಸಿದ ಕಲಾವಿದೆಯರ ಸುಂದರ ಅಭಿನಯ, ಗೋವರ್ಧನಗಿರಿಯನ್ನೆತ್ತಿ ಕಾಪಾಡಿದ ಕೃಷ್ಣನ ಸಾಹಸ ಅಷ್ಟೇ ಚೆನ್ನಾಗಿ ಮೂಡಿಬಂತು. ಮಧುರ ಭಕ್ತಿ ಗೋಪಿಕಾಸ್ತ್ರೀಯರ ನಡುವೆ ಕೃಷ್ಣ ರಾಸಲೀಲೆಯಾಡುವ, ಕೋಲಾಟದ ರಸಮಯ ಸನ್ನಿವೇಶದ ಉಲ್ಲಾಸಕರ ವಾತಾವರಣವನ್ನು ಕಲಾವಿದೆಯರು ತಮ್ಮ ಮನೋಹರ ನರ್ತನದ ಮೂಲಕ ನಿರ್ಮಿಸುವಲ್ಲಿ ಸಫಲರಾದರು. ಕೃಷ್ಣನನ್ನಲ್ಲದೆ ಮತ್ತಾರನ್ನೂ ಮದುವೆಯಾಗೆನೆಂದು ಹಟಹಿಡಿದು, ಅವನ ಧ್ಯಾನದಲ್ಲಿದ್ದ ರುಕ್ಮಿಣಿಯನ್ನು ಕೈಹಿಡಿದು ಕಾಪಾಡಿದ ಕೃಷ್ಣನ  ಮಧುರಭಕ್ತಿ ಸುವ್ಯಕ್ತವಾಯಿತು.

ಸಖ್ಯಭಕ್ತಿ- ತನ್ನನ್ನು ನೆಚ್ಚಿ ನಂಬಿದವರ ಬೆಂಬಿಡದೆ ಕಾವ ದೈವ ಕೃಷ್ಣ.  ದ್ರೌಪದಿಯ ಮುಂದೆಲೆ ಹಿಡಿದು ಎಳೆತಂದು, ತುಂಬಿದ ಸಭೆಯಲ್ಲಿ ಅವಮಾನಿಸಿದ ದುಶ್ಶಾಸನ, ಅವಳ ಸೀರೆಯನ್ನು ಸೆಳೆವಾಗ, ದ್ರೌಪದಿ, ಕರುಣಾಜನಕವಾಗಿ ಮೊರೆಯಿಡುವ ದೃಶ್ಯ ಹೃದಯ ಕರಗಿಸುವಂತಿತ್ತು. ದ್ಯೂತದಲ್ಲಿ ಎಲ್ಲವನ್ನೂ ಸೋಲುವ, ಪಾಂಡವರ ಪರಾಜಿತ ದೃಶ್ಯವನ್ನು ಸೂಕ್ಷ್ಮವಿವರಗಳೊಂದಿಗೆ ಅಭಿನಯಿಸುವಲ್ಲಿ ಕಲಾವಿದೆಯರ ಸಾಮೂಹಿಕ ನೃತ್ಯಾಭಿನಯ ಮತ್ತು ದ್ರೌಪದಿಯ ಪಕ್ವಾಭಿನಯ ಮನಮುಟ್ಟಿತು. ಸನ್ನಿವೇಶಗಳಿಗೆ ತಕ್ಕಂತೆ ಬಳಸಿಕೊಂಡ ಪುರಂದರದಾಸರ ಪದ, ಆಳ್ವಾರರ ಪಾಶರಗಳು, ಸ್ತೋತ್ರಗಳು ಮೆಚ್ಚುಗೆ ಪಡೆದವು.

ಗುರುಭಕ್ತಿ- ರಣಾಂಗಣದಲ್ಲಿ ಅರ್ಜುನ, ತನ್ನ ಬಂಧು-ಬಾಂಧವರನ್ನು ಕೊಲ್ಲಲು ಹಿಂಜರಿವ ಸಂದರ್ಭದಲ್ಲಿ, ಕೃಷ್ಣ ಅವನಲ್ಲಿ ಧೈರ್ಯ ತುಂಬಿ, ಗೀತೋಪದೇಶ ಮಾಡಿ ವಿಶ್ವರೂಪ ದರ್ಶನ ನೀಡುವ ಚಿತ್ರಣ ರೋಮಾಂಚಕಾರಿಯಾಗಿತ್ತು. ಅಂತ್ಯದಲ್ಲಿ ಸಂಕ್ಷಿಪ್ತವಾಗಿ ಮೂಡಿಬಂದ ‘ದಶಾವತಾರ’ದ ಪರಿಕಲ್ಪನೆ ಅನನ್ಯ.

  • ವೈ.ಕೆ.ಸಂಧ್ಯಾ ಶರ್ಮ

Leave a Comment