ದೈವಾರಾಧನೆಗೆ ಪ್ರತ್ಯೇಕ ಅಕಾಡೆಮಿ ಸ್ಥಾಪನೆ ಅಗತ್ಯ: ಕತ್ತಲ್‌ಸಾರ್‌

ಉಡುಪಿ, ಮೇ ೩೧- ದೈವಾರಾಧನೆಯ ವ್ಯಾಪ್ತಿಗೆ ತುಳುನಾಡಿನ ಎಲ್ಲ ಜಾತಿ ಯವರು ಕೂಡ ಬರುತ್ತಾರೆ. ಆದುದರಿಂದ ಸರಕಾರ ದೈವಾರಾಧ ನೆಗೆ ಪ್ರತ್ಯೇಕ ಅಕಾಡೆಮಿಯನ್ನು ಸ್ಥಾಪಿಸಬೇಕು ಮತ್ತು ಅಧ್ಯಯನ ಪೀಠವನ್ನು ರಚಿಸಬೇಕು. ಈ ನಿಟ್ಟಿನಲ್ಲಿ ನಾವೆಲ್ಲ ಹೋರಾಟ ಮಾಡಬೇಕಾದ ಅಗತ್ಯ ಇದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್‌ ಹೇಳಿದ್ದಾರೆ.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯ ವತಿಯಿಂದ ಅಜ್ಜರಕಾಡು ಪುರ ಭವನದ ಮಿನಿಹಾಲ್‌ನಲ್ಲಿ ಶುಕ್ರವಾರ ಆಯೋಜಿಸಲಾದ ಆರ್ಥಿಕವಾಗಿ ಹಿಂದುಳಿದ ತುಳುನಾಡಿನ ಸುಮಾರು 100 ಮಂದಿ ಜನಪದ ಕಲಾವಿದರಿಗೆ, ಸಾಹಿತಿಗಳಿಗೆ ದಿನಸಿ ಕಿಟ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. ಕೋವಿಡ್ ಪರಿಹಾರ ಒದಗಿಸಲು ದೈವಾರಾಧನೆ ಎಂಬುದು ಸರಕಾರದ ಯಾವುದೇ ಪಟ್ಟಿಯಲ್ಲಿ ಇಲ್ಲ. ಆದುದರಿಂದ ಇದಕ್ಕೆ ಅನುದಾನ ಒದಗಿಸಲು ಸರಕಾರ ಹಿಂದೇಟು ಹಾಕುತ್ತಿದೆ. ನಮ್ಮ ಕಲಾವಿದರಲ್ಲಿ ಆಧಾರ್ ಕಾರ್ಡ್ ಸೇರಿದಂತೆ ಯಾವುದೇ ಸರಿಯಾದ ದಾಖಲೆಗಳಿಲ್ಲ. ಇದೇ ಕಾರಣಕ್ಕೆ ಅಕಾಡೆಮಿ ಯಿಂದ ಸರಕಾರಕ್ಕೆ ಕಳುಹಿಸಿದ ಕಲಾವಿದರ ಪಟ್ಟಿಯಲ್ಲಿ ಕೆಲವು ಮಂದಿಯ ಹೆಸರುಗಳನ್ನು ಕೈಬಿಡಲಾಗಿದೆ. ಆದುದರಿಂದ ಕಲಾವಿದರು ತಮ್ಮ ದಾಖಲಾತಿ ಗಳನ್ನು ಸರಿಪಡಿಸಿಕೊಳ್ಳಬೇಕು ಎಂದರು. ಬಡಗುಬೆಟ್ಟು ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಕೊರೋನ ಮಹಾ ಮಾರಿಯ ಪರಿ ಣಾಮ ತುಳುನಾಡಿನ ದೈವಾರಾಧನೆಗೂ ತಟ್ಟಿದೆ. ಇದರಿಂದ ಕಲಾವಿದರು ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ನಾವು ಇಂತಹ ಸಂಕಷ್ಟದಲ್ಲಿಯೂ ಬದಕು ಬಹುದು ಎಂಬುದು ಕೊರೋನ ಕಲಿಸಿಕೊಟ್ಟಿದೆ. ಕೊರೋನ ವಿರುದ್ಧ ಹೋರಾಟ ನಡೆಸಲು ಪ್ರತಿಯೊಬ್ಬರ ಮುಂಜಾಗ್ರತಾ ಕ್ರಮ ವಹಿಸಬೇಕು ಎಂದು ತಿಳಿಸಿದರು. ಅಕಾಡೆಮಿ ಸದಸ್ಯ ನಾಗೇಶ್ ಕುಲಾಲ್, ಮಾಜಿ ಸದಸ್ಯ ಯಾದವ್ ಕರ್ಕೇರ, ತುಳುಕೂಟದ ಉಪಾಧ್ಯಕ್ಷರಾದ ಮುಹಮ್ಮದ್ ಮೌಲಾ, ಮನೋಹರ್ ಶೆಟ್ಟಿ ತೋನ್ಸೆ, ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯ ಮುಖ್ಯಸ್ಥ ಹಫೀಝ್ ರೆಹಮಾನ್, ಭುವನಪ್ರಸಾದ್ ಹೆಗ್ಡೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಅವರಿಗೆ ಮಲಬಾರ್ ಗೋಲ್ಡ್‌ನಿಂದ ಪಿಪಿಇ ಕಿಟ್‌ಗಳನ್ನು ವಿತರಿಸಲಾ ಯಿತು. ಅಕಾಡೆಮಿಯ ಸದಸ್ಯ ಡಾ.ಆಕಾಶ್‌ರಾಜ್ ಜೈನ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಸ್ಯೆ ತಾರಾ ಉಮೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Share

Leave a Comment