ದೇಶ ರಕ್ಷಣೆಗೆ ರಫೇಲ್ ಯುದ್ಧ ವಿಮಾನ ಖರೀದಿ

ನವದೆಹಲಿ: ಭಾರತವು ಫ್ರಾನ್ಸ್‌ನಿಂದ ೩೬ ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಿರುವುದು ಮತ್ತೊಬ್ಬರ ಮೇಲೆ ದಾಳಿ ಮಾಡಲಿಕ್ಕಲ್ಲ; ಬದಲಿಗೆ ಸ್ವಯಂ ರಕ್ಷಣೆಯ ಕಾರ್ಯತಂತ್ರದ ಒಂದು ಭಾಗವಾಗಿ ಇಟ್ಟುಕೊಳ್ಳಲಿಕ್ಕಾಗಿ ಮಾತ್ರ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಫ್ರಾನ್ಸ್‌ನ ದಸಾಲ್ಟ್ ಯುದ್ಧ ವಿಮಾನ ತಯಾರಿಕಾ ಸಂಸ್ಥೆಯಿಂದ ಭಾರತಕ್ಕೆ ಹಸ್ತಾಂತರಗೊಂಡ ಮೊದಲನೇ ರಫೇಲ್ ಸ್ವೀಕರಿಸಿದ ಬಳಿಕ ಪ್ರಥಮ ಬಾರಿಗೆ ಅದರಲ್ಲಿ ಪ್ರಾಯೋಗಿಕ ಹಾರಾಟ ನಡೆಸಿ ಬಂದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
‘೨೦೨೧ ಫೆಬ್ರವರಿ ವೇಳೆಗೆ ನಾವು ೧೮ ರಫೇಲ್ ಯುದ್ಧ ವಿಮಾನ ಪಡೆದುಕೊಳ್ಳಲಿದ್ದೇವೆ; ನಂತರ ೨೦೨೨ ಏಪ್ರಿಲ್-ಮೇ ವೇಳೆಗೆ ೩೬ ರಫೇಲ್‌ಗಳು ನಮ್ಮ ಬತ್ತಳಿಕೆಗೆ ಬಂದು ಸೇರಲಿವೆ. ಈ ಅತ್ಯಾಧುನಿಕ ಶಕ್ತಿಶಾಲಿ ವಿಮಾನಗಳು ನಮ್ಮ ಸ್ವಯಂ ರಕ್ಷಣೆಗಾಗಿಯೇ ಹೊರತು; ಯಾರ ಮೇಲೋ ದಾಳಿ ನಡೆಸುವ ಮುನ್ಸೂಚನೆಯಲ್ಲ ಎಂದು ಖಚಿತಪಡಿಸಿದರು.
ರಾಜನಾಥ ಸಿಂಗ್ ಕುಳಿತ ೨ ಆಸನಗಳ ರಫೇಲ್ ಯುದ್ಧ ವಿಮಾನವನ್ನು ದಸಾಲ್ಟ್ ವಿಮಾನಯಾನ ಸಂಸ್ಥೆಯ ಮುಖ್ಯ ಪರೀಕ್ಷಾ ಪೈಲಟ್ ಫಿಲಿಪ್ಪೆ ಡಚಾಟ್ಯು ಚಲಾಯಿಸಿದರು. ಪ್ರಾಯೋಗಾರ್ಥ ಹಾರಾಟದಲ್ಲಿ ಡಚಾಟ್ಯ ಅವರು ಮುಂದಿನ ಕಾಕ್‌ಪಿಟ್‌ನಲ್ಲಿ ಕುಳಿತಿದ್ದು, ಅದಕ್ಕೂ ಸ್ವಲ್ಪ ಹಿಂದಿನ ಪಕ್ಕದ ಆಸನದಲ್ಲಿ ರಾಜನಾಥ ಸಿಂಗ್ ಆಸೀನರಾಗಿದ್ದರು. ರಫೇಲ್ ಯುದ್ಧ ವಿಮಾನ ನಡೆಸುವ ಕುರಿತು ಭಾರತೀಯ ಪೈಲಟ್‌ಗಳಿಗೆ ಈಗಿನ್ನೂ ತರಬೇತಿ ಆರಂಭಿಸಿರುವ ಹಿನ್ನೆಲೆಯಲ್ಲಿ ಡಚಾಟ್ಯು ಅವರೇ ವಿಮಾನ ಹಾರಾಟ ನಡೆಸಿ ತೋರಿಸಿದರು.
ಇದಕ್ಕೂ ಮುನ್ನಾದಿನ ರಾಜನಾಥ ಸಿಂಗ್ ಅವರು, ಫ್ರಾನ್ಸ್‌ನ ನೈರುತ್ಯ ಭಾಗದಲ್ಲಿನ ಬೋರ್ಡಾಕ್ಸ್ ಸಮೀಪದ ಡಸಾಲ್ಟ್ ಕಂಪನಿಯ ಮೆರಿಗ್ನಕ್ ವಾಯು ನೆಲೆಯಲ್ಲಿ, ಮೊದಲ ರಫೇಲ್ ಯುದ್ಧ ವಿಮಾನವನ್ನು ಔಪಚಾರಿಕವಾಗಿ ಸ್ವೀಕರಿಸಿ, ‘ಶಸ್ತ್ರ (ಆಯುಧ) ಪೂಜೆ’ ನೆರವೇರಿಸಿದರು.
‘ಇದೊಂದು ವ್ಯವಸ್ಥಿತವಾದ ಸುಖಾಸೀನ ಸುಗಮ ವಿಮಾನವಾಗಿದೆ. ಇಂತಹ ಅತ್ಯಾಧುನಿಕ ಸೂಪರ್‌ಸಾನಿಕ್ ಯುದ್ಧ ವಿಮಾನದಲ್ಲಿ ನಾನೂ ಒಂದು ದಿನ ಹಾರಾಟ ನಡೆಸುತ್ತೇನೆ ಎಂದು ಕನಸಿನಲ್ಲೂ ನಿರೀಕ್ಷಿಸಿರಲಿಲ್ಲ; ಇದು ಮರೆಯಲಾಗದ ಅನುಭವ’ ಎಂದು ರಾಜನಾಥ ಸಿಂಗ್ ಹೆಮ್ಮೆಪಟ್ಟರು.

Leave a Comment