ದೇಶ ಭಕ್ತಿಗೀತೆ ಗಾಯನ ಸ್ಪರ್ಧೆ-ಶ್ಲಾಘನೀಯ

ರಾಯಚೂರು.ಆ.13- ಇತ್ತೀಚಿನ ದಿನಗಳಲ್ಲಿ ಜನರಲ್ಲಿ ದೇಶ ಭಕ್ತಿಗೀತೆಗಳ ಹಾಡುಗಾರಿಕೆ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿ ಜನರಲ್ಲಿ ಆಸಕ್ತಿ ಮೂಡಿಸುತ್ತಿರುವುದು ಶ್ಲಾಘನೀಯವೆಂದು ಜಿಲ್ಲಾ ಸ್ಥಾನಿಕ ಆಯುಕ್ತರಾದ ಎಲ್.ಬಿ.ಹೊರಪ್ಯಾಟಿ ಹೇಳಿದರು.
ಜಿಲ್ಲಾ ಸ್ಕೌಟ್ ಭವನದಲ್ಲಿ ಭಾರತ ಸ್ಕೌಟ್ಸ್, ಗೈಡ್ಸ್ ಸಂಸ್ಥೆಯಿಂದ ಹಮ್ಮಿಕೊಳ್ಳಲಾಗಿದ್ದ ಸ್ಕೌಟ್ ಮತ್ತು ಗೈಡ್ಸ್‌ಗಳ ಜಿಲ್ಲಾ ಮಟ್ಟದ ದೇಶಭಕ್ತಿ ಗೀತೆಗಳ ಗಾಯನ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ಸ್ಪರ್ಧೆಯ ತೀರ್ಪುಗಾರರಾಗಿ ಆಗಮಿಸಿದ ಸಿದ್ದರಾಮಯ್ಯ ತೆಕ್ಕಲಕೋಟಿ ಅವರು ಮಾತನಾಡಿ, ಕಣ್ಣಿಲ್ಲದೆ ಸಾಧನೆಗೈದು ಅನೇಕ ಅಂಧ ಮಕ್ಕಳ ಪಾಲಿಗೆ ಪಂ.ಪುಟ್ಟರಾಜ ಗವಾಯಿಗಳು ದೇವರರಾಗಿದ್ದರು. ಆದರೆ, ನಾವು ಕಣ್ಣಿದ್ದು ಸಾಧನೆ ಮಾಡದೆ ಅಂಧಕಾರದಲ್ಲಿದ್ದೇವೆ. ಅಂಧಕಾರವನ್ನು ತೊಲಗಿಸಿ ಜ್ಞಾನವೆಂಬ ದಿವ್ಯ ಜ್ಯೋತಿಯನ್ನು ಬೆಳಗಿಸೋಣ ಎಂದು ತಿಳಿಸಿದರು.
ರಾವುತ್ ರಾವ್ ಬರೂರ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಮುಖ್ಯ ಆಯುಕ್ತ ಕೆ.ತಿಮ್ಮಯ್ಯ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಹೋರಾಟಗೈದು ಮಡಿದ ವೀರರ ಜೀವನ ಚರಿತ್ರೆಯನ್ನು ಅರ್ಥೈಸಿಕೊಂಡು ಮೌಲ್ಯಯುತವಾದ ಬದುಕು ರೂಪಿಸಿಕೊಳ್ಳಿ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ದೇಶಭಕ್ತಿ ಗೀತೆಗಳ ಗಾಯನ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಅರ್ಜುನ್, ಜೆ.ಸೀಮಾ, ಗೀತಾಜಿ, ಲಕ್ಷ್ಮಿ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Comment