ದೇಶ ಉಳಿಸಿ ಬೆಳೆಸಲು ಕರೆ

ಬೆಂಗಳೂರು, ಆ. ೧೫- ದೇಶ ಉಳಿಸಿಕೊಳ್ಳಲು ಮತ್ತೊಮ್ಮೆ ನಾವು ತ್ಯಾಗ ಮಾಡಬೇಕಿದೆ. ಮಾನವೀಯ ಮೌಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ನಾವು ನಡೆಸುವ ಹೋರಾಟಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕೆಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದರು.

ಅವರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಏರ್ಪಡಿಸಿದ್ದ 72ನೇ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಪ್ರಸ್ತುತ ದೇಶದಲ್ಲಿ ಮೂಲ ಸಿದ್ಧಾಂತಗಳಿಗೆ ಧಕ್ಕೆಯಾಗುತ್ತಿದೆ. ಮೂಲಭೂತ ಸ್ವಾತಂತ್ರ್ಯ ಕಿತ್ತುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆಡಳಿತ ನಡೆಸುತ್ತಿದೆ.

ಈ ಸರ್ವಾಧಿಕಾರಿ ಧೋರಣೆಯಿಂದ ಅಲ್ಪಸಂಖ್ಯಾತರು, ದಲಿತರಿಗೆ ಅಭದ್ರತೆ ಕಾಡುತ್ತಿದೆ. 125 ಕೋಟಿ ಜನಗಳಿಗೆ ಪ್ರಧಾನಿಗಳಾಗಬೇಕಿದ್ದವರು ಕೆಲವೇ ಸೀಮಿತ ಜನರಿಗೆ ಪ್ರಧಾನಿಯಾಗಿದ್ದಾರೆ. ಅಲ್ಪಸಂಖ್ಯಾತರಿಗೆ, ದಲಿತರಿಗೆ ಮಾನಸಿಕ ಹಿಂಸೆ ನೀಡಲಾಗುತ್ತಿದೆ. ಅವರ ದೇಶಪ್ರೇಮವನ್ನು ಪ್ರಶ್ನಿಸಲಾಗುತ್ತಿದೆ ಎಂದರು.

ಕೇಂದ್ರ ಸರ್ಕಾರ ಮೂಲ ಸಂವಿಧಾನ ನೀಡಿದ ನಿಯಮಗಳ ವಿರುದ್ಧ ದಿಕ್ಕಿನಲ್ಲಿ ಆಡಳಿತ ನಡೆಸುತ್ತಿದೆ. ದೇಶದ ಜನರಿಗೆ ದೇಶವನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದ ಅವರು, ಇದುವರೆಗೂ ದೇಶವನ್ನು ಕಾಂಗ್ರೆಸ್ ರಕ್ಷಿಸಿಕೊಂಡು ಬಂದಿದೆ ಎನ್ನುವುದು ಜನತೆಗೆ ಮನದಟ್ಟಾಗಬೇಕಿದೆ ಎಂದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಸ್ವಾತಂತ್ರ್ಯ ಕೇವಲ ರಾಜಕೀಯ ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಆರ್ಥಿಕ, ಸಾಮಾಜಿಕ, ಸ್ವಾತಂತ್ರ ಕೂಡ ದೊರೆಯಬೇಕು ಎನ್ನುವುದು ಅಂಬೇಡ್ಕರ್ ಆಶಯ. ಇದು ನಮ್ಮೆಲ್ಲರ ಆಶಯ ಕೂಡ ಎಂದರು.

ಮಹದಾಯಿ ತೀರ್ಪಿನಿಂದ ಭಾಗಶಃ ರಾಜ್ಯದ ಜನತೆಗೆ ಅನುಕೂಲವಾಗಿದೆ. ತೀರ್ಪು ಕುರಿತಂತೆ ತಜ್ಞರೊಂದಿಗೆ ಚರ್ಚಿಸಿ, ಮೇಲ್ಮನವಿ ಸಲ್ಲಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಸಂಸದ ವೀರಪ್ಪ ಮೊಯಿಲಿ, ರಾಣಿ ಸತೀಶ್, ರೋಷನ್ ಬೇಗ್, ಇತರ ಕಾಂಗ್ರೆಸ್ ಮುಖಂಡರು ಹಾಜರಿದ್ದರು.

Leave a Comment