ದೇಶದ ಮೇಲೆ ಕೆಂಗಣ್ಣು ಬೀರುವವರಿಗೆ ತಕ್ಕ ಉತ್ತರ ನೀಡಲು ಸೇನಾ ಪಡೆ ಸಮರ್ಥ: ರಾಜನಾಥ್ ಸಿಂಗ್

ನವದೆಹಲಿ, ಅ.22 – ದೇಶದ ಮೇಲೆ ಕೆಂಗಣ್ಣು ಬೀರುವವರಿಗೆ ತಕ್ಕ ಉತ್ತರ ನೀಡಲು ಭಾರತೀಯ ಸೇನಾ ಪಡೆ ಸಮರ್ಥವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಹೇಳಿದ್ದಾರೆ.

ಯುದ್ಧ ನಡೆದರೆ, ಅದು ಪರಮಾಣು ಎಂದು ಪಾಕಿಸ್ತಾನ ಸಚಿವ ಶೇಖ್ ರಶೀದ್ ಹೇಳಿಕೆಗೆ ರಾಜನಾಥ್ ಸಿಂಗ್ ಈ ಪ್ರತಿಕ್ರಿಯೆ ನೀಡಿದ್ದಾರೆ. ಭಾರತ ಯಾವತ್ತೂ ಆಕ್ರಮಣಕಾರಿಯಾಗಿರುವುದಿಲ್ಲ. ಯಾವುದೇ ದೇಶದ ಮೇಲೆ ಮೊದಲು ದಾಳಿ ಮಾಡುವುದಿಲ್ಲ ಎಂದು ರಕ್ಷಣಾ ಸಚಿವರು ಸ್ಪಷ್ಟಪಡಿಸಿದರು.

ಇಲ್ಲಿ ಎರಡು ದಿನಗಳ ನೌಕಾಪಡೆ ಕಮಾಂಡರ್‌ಗಳ ಸಮ್ಮೇಳನವನ್ನು ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಜನಾಥ್ ಸಿಂಗ್, ಭಾರತ ಎಂದಿಗೂ ಆಕ್ರಮಣಕಾರಿಯಾಗಿಲ್ಲ ಮತ್ತು ಇದು ಯಾವತ್ತೂ ಯಾವುದೇ ದೇಶದ ಮೇಲೆ ಆಕ್ರಮಣ ಮಾಡಲಿಲ್ಲ ಅಥವಾ ಯಾವುದೇ ಪ್ರದೇಶವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಲಿಲ್ಲ ಎಂಬುದು ಭಾರತದ ಸ್ವಭಾವ. ಆದರೆ ಯಾರಾದರೂ ಭಾರತದ ಮೇಲೆ ಕೆಂಗಣ್ಣು ಬೀರಲು ಪ್ರಯತ್ನಿಸಿದರೆ ಭಾರತೀಯ ಪಡೆಗಳು ಅವರಿಗೆ ತಕ್ಕ ಉತ್ತರವನ್ನು ನೀಡುತ್ತದೆ ಮತ್ತು ಭಾರತೀಯ ಸಶಸ್ತ್ರ ಪಡೆಗಳಿಗೆ ಆ ಸಾಮರ್ಥ್ಯವಿದೆ ಎಂದು ಹೇಳಿದ್ದಾರೆ.

ರಕ್ಷಣಾ ಬಜೆಟ್ ಕಡಿತ ಕುರಿತ ಪ್ರಶ್ನೆಗೆ ಉತ್ತರಿಸಿದ ರಕ್ಷಣಾ ಸಚಿವರು, ಅಗತ್ಯವಿದ್ದರೆ ಬಜೆಟ್ ಖಂಡಿತವಾಗಿಯೂ ಹೆಚ್ಚಾಗುತ್ತದೆ. ನಮ್ಮ ಮೂರು ಪಡೆಗಳು ಆಮದಿನ ಮೇಲಿನ ಅವಲಂಬನೆಯನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಿವೆ. ದೇಶವು ರಕ್ಷಣಾ ವಸ್ತುಗಳ ರಫ್ತುದಾರ ರಾಷ್ಟ್ರವಾಗಬೇಕು ಎಂದು ನಾವು ಬಯಸುತ್ತೇವೆ ಎಂದರು.

ಗಮನಾರ್ಹ ವಿಷಯವೆಂದರೆ, ಜಲಾಂತರ್ಗಾಮಿ ನೌಕೆಗಳು ಮತ್ತು ಯುದ್ಧ ವಿಮಾನಗಳು ಸೇರಿದಂತೆ ಪ್ರಮುಖ ಉಪಕರಣಗಳ ಖರೀದಿಗಾಗಿ ಹೆಚ್ಚಿನ ಬಜೆಟ್‌ಗಾಗಿ ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ಭಾರತೀಯ ನೌಕಾಪಡೆ ಕಳೆದ ತಿಂಗಳು ಹೇಳಿತ್ತು. ಪ್ರಸ್ತುತ, ರಕ್ಷಣಾ ಬಜೆಟ್‌ನಲ್ಲಿ ಭಾರತೀಯ ನೌಕಾಪಡೆಯ ಪಾಲು ಶೇಕಡಾ 13.66 ರಷ್ಟಿದ್ದು, ಅದನ್ನು ಶೇಕಡಾ 18 ಕ್ಕೆ ಹೆಚ್ಚಿಸಲು ಬಯಸಿದೆ.

ಬಜೆಟ್‌ನಲ್ಲಿ, ಸರ್ಕಾರವು ರಕ್ಷಣಾ ಖರ್ಚು ವೆಚ್ಚಗಳಿಗಾಗಿ 4.31 ಟ್ರಿಲಿಯನ್ ರೂ. (ಮಿಲಿಟರಿ ಪಿಂಚಣಿ 1.12 ಟ್ರಿಲಿಯನ್ ರೂ.ಸೇರಿ) ವ್ಯಯಿಸುತ್ತಿದೆ.

ಸಮುದ್ರ ಮಾರ್ಗದ ಮೂಲಕ 26/11 ದಾಳಿಯಂತಹ ಭಯೋತ್ಪಾದಕ ದಾಳಿ ಪುನರಾವರ್ತನೆಯಾಗುವುದಿಲ್ಲ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ ಸಿಂಗ್, ” ನಮ್ಮ ಸಮುದ್ರ ಮಾರ್ಗಗಳು ಭಾರತೀಯ ನೌಕಾಪಡೆಯ ಕೈಯಲ್ಲಿ ಸುರಕ್ಷಿತವಾಗಿವೆ ಎಂದು ನನಗೆ ತುಂಬಾ ಭರವಸೆ ಇದೆ. 26/11ರ ದಾಳಿಗಳು ಪುನರಾವರ್ತನೆಯಾಗುವುದಿಲ್ಲ ಎಂಬುದು ಭಾರತೀಯ ನೌಕಾಪಡೆಯ ಬದ್ಧತೆಯಾಗಿದೆ ಎಂದು ರಾಜನಾಥ್ ಸಿಂಗ್ ಹೇಳಿದರು.
ಭಾರತೀಯ ನೌಕಾಪಡೆ ದೇಶೀಕರಣದತ್ತ ಸಾಗುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ. ಹಡಗುಗಳ ನಿರ್ಮಾಣದಲ್ಲಿ, ಹೆಚ್ಚಿನ ಶೇಕಡಾವಾರು ದೇಶೀಯ ಉತ್ಪನ್ನಗಳನ್ನು ಬಳಸಲಾಗುತ್ತಿದೆ, ಇದು ಪ್ರಶಂಸನೀಯ ಕೆಲಸವಾಗಿದೆ ಎಂದು ಸಿಂಗ್ ಹೇಳಿದರು.
ಹಿಂದಿನ ವರ್ಷಗಳಿಗೆ ಹೋಲಿಸಿದರೆ ಭಾರತೀಯ ನೌಕಾಪಡೆಯ ಶಕ್ತಿ ಬೆಳೆದಿದೆ ಎಂದು ನಾನು ನಂಬುತ್ತೇನೆ ಎಂದು ಸಚಿವರು ಹೇಳಿದರು.
ರಕ್ಷಣಾ ಸಚಿವರು ಉದ್ಘಾಟಿಸಿದ ಮೂರು ದಿನಗಳ ನೌಕಾ ಕಮಾಂಡರ್‌ಗಳ ಸಮಾವೇಶವು ಹಿಂದಿನ ಆರು ತಿಂಗಳಲ್ಲಿ ಕೈಗೊಂಡ ಪ್ರಮುಖ ಕಾರ್ಯಾಚರಣೆ, ಶಸ್ತ್ರಾಸ್ತ್ರಗಳು, ಲಾಜಿಸ್ಟಿಕ್ಸ್, ಎಚ್‌ಆರ್, ತರಬೇತಿ ಮತ್ತು ಆಡಳಿತಾತ್ಮಕ ಚಟುವಟಿಕೆಗಳನ್ನು ಪರಿಶೀಲಿಸುತ್ತದೆ.

Leave a Comment