ದೇಶದ ಜನತೆಗೆ ನೀಡಿದ ಭರವಸೆ ಈಡೇರಿಸುವಲ್ಲಿ ಮೋದಿ ವಿಫಲ

ಬೀದರ್,ಆ.13-ಕಳೆದ ಲೋಕಸಭಾ ಚುನಾವಣೆ ವೇಳೆ ದೇಶದ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಂಪೂರ್ಣವಾಗಿ ವಿಫಲವಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಸಂಸತ್ ನಲ್ಲಿ ರಾಹುಲ್ ಗಾಂಧಿ ಅವರು ಎನ್.ಡಿ.ಎ. ಸರ್ಕಾರದಲ್ಲಿ ನಡೆದ ಭ್ರಷ್ಟಾಚಾರ ಬಿಚ್ಚಿಟ್ಟಾಗ ಅದಕ್ಕೆ ಉತ್ತರ ನೀಡಿದ ಪ್ರಧಾನಿ ಮೋದಿ ಅವರು ನಾನು ಈ ದೇಶದ ಚೌಕಿದಾರ ಎಂದು ಹೇಳಿದ್ದರು. ಮೋದಿ ಅವರು ಚೌಕಿದಾರ ಅಲ್ಲ ಭ್ರಷ್ಟಾಚಾರದಲ್ಲಿ ಭಾಗಿದಾರ ಎಂದು ಟೀಕಿಸಿದರು.

ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ, ಭ್ರಷ್ಟಾಚಾರ ಸಂಪೂರ್ಣ ನಿರ್ಮೂಲನೆ ಮಾಡುವುದಾಗಿ, ವಿದೇಶದಲ್ಲಿರುವ ಕಪ್ಪು ಹಣ ವಾಪಸ್ ತರುವುದಾಗಿ ಮೋದಿ ಭರವಸೆ ನೀಡಿದ್ದರು. ಆದರೆ ಉದ್ಯೋಗ ಸೃಷ್ಟಿ, ಭ್ರಷ್ಟಾಚಾರ ನಿರ್ಮೂಲನೆ ಮತ್ತು ವಿದೇಶದಲ್ಲಿರುವ ಕಪ್ಪು ಹಣ ವಾಪಸ್ ತರುವಲ್ಲಿ ಅವರು ಸಂಪೂರ್ಣವಾಗಿ ವಿಫಲವಾಗಿದ್ದಾರೆ ಎಂದರು.

ನಾನು ಮುಖ್ಯಮಂತ್ರಿಯಾಗಿದ್ದಾಗ ಸಹಕಾರಿ ಸಂಘದಲ್ಲಿರವ ಶೇ.50 ರಷ್ಟು ಸಾಲ ಮನ್ನಾ ಮಾಡಿದ್ದೆ. ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿರುವ  ಶೇ.50 ರಷ್ಟು ಸಾಲ ಮನ್ನಾ ಮಾಡಿ ಎಂದು ಕೇಂದ್ರ ಸರ್ಕಾರವನ್ನು ಕೋರಿದ್ದೆ. ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ರೈತರ ಸಾಲ ಮನ್ನಾ ಮಾಡಲು ಮುಂದಾಗಲಿಲ್ಲ ಎಂದರು.

ದಲಿತರು ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಎಸ್.ಸಿ.ಪಿ ಮತ್ತು ಟಿಎಸ್ಪಿ ಅಡಿ 54 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿದರೆ, ಕರ್ನಾಟಕದಲ್ಲಿ ಕಳೆದ ವರ್ಷ 28 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿದೆ. ಈ ವರ್ಷ 30 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಲು ಹಣ ಮೀಸಲಿಟ್ಟಿದೆ. ಆಂಧ್ರಪ್ರದೇಶ ಹೊರತು ಪಡಿಸಿದರೆ ದಲಿತರು ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಅತೀ ಹೆಚ್ಚು ಹಣ ಖರ್ಚು ಮಾಡಿದ ಎರಡನೇ ರಾಜ್ಯ ಕರ್ನಾಟಕವಾಗಿದೆ ಎಂದರು.

ರೈತರು, ದಲಿತರು ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ ಶ್ರಮಿಸಿದ ಮೋದಿ ಅವರ ಮಾತುಗಳಿಗೆ ಜನ ಮರುಳಾಗದೆ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು.

Leave a Comment