ದೇಶದ ಆರ್ಥ ವ್ಯವಸ್ಥೆ ಹಾಳು: ಯಚೂರಿ

 

ಕಲಬುರಗಿ,ಜ.22-ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದೇಶದ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದಗೆಟ್ಟು ಹೋಗಿದೆ ಎಂದು ಸಿಪಿಐ(ಎಂ) ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯಚೂರಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಡಿಪಿ ಸಂಪೂರ್ಣ ಕುಸಿದು ಹೋಗಿದ್ದು, ಕೃಷಿ ಕ್ಷೇತ್ರ ಸಂಕಷ್ಟದಲ್ಲಿದೆ. ರೈತರ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗಿದ್ದು, ಅನೇಕ ಕಾರ್ಖಾನೆಗಳು, ಅಟೋಮೊಬೈಲ್ ಕಂಪನಿಗಳು ಬಾಗಿಲು ಮುಚ್ಚಿವೆ. ಅಟೋಮೊಬೈಲ್ ಕ್ಷೇತ್ರದಲ್ಲಿ 10 ಲಕ್ಷ ಜನ, ಟೆಕ್ಸ್ ಟೈಲ್ ಕ್ಷೇತ್ರದಲ್ಲಿ 20 ಲಕ್ಷ ಜನ, ಐಟಿಬಿಟಿ ಕಂಪನಿಗಳಲ್ಲಿ ಸಾಕಷ್ಟು ಜನ ಉದ್ಯೋಗ ಕಳೆದುಕೊಂಡು ನಿರುದ್ಯೋಗಿಗಳಾಗಿದ್ದಾರೆ. ವಿಪ್ರೋ, ಇನ್ಫೋಸಿಸ್ ನಂತಹ ಸಂಸ್ಥೆಗಳು ಸಹ ಉದ್ಯೋಗ ಕಡಿತ ಮಾಡಿವೆ. ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಿದ್ದು, ಸಾಮಾನ್ಯ ಜನರ ಜೀವನ ಸಂಕಷ್ಟದಲ್ಲಿದೆ. ಇಷ್ಟಾದರೂ ಕೇಂದ್ರ ಸರ್ಕಾರ ಈ ಸಮಸ್ಯೆಗಳ ಬಗ್ಗೆ ಗಮನಹರಿಸದೇ ಪೌರತ್ವ ತಿದ್ದುಪಡಿ, ರಾಷ್ಟ್ರೀಯ ಪೌರತ್ವ ನೋಂದಣಿ ಮತ್ತು ರಾಷ್ಟ್ರೀಯ ಜನಸಂಖ್ಯೆ ನೋಂದಣಿ ಕಾಯ್ದೆ ಜಾರಿಗೆ ತರಲು ಮುಂದಾಗುವುದರ ಮೂಲಕ ದೇಶದ ಜನರನ್ನು ದಿಕ್ಕು ತಪ್ಪಿಸುತ್ತಿವೆ ಎಂದು ದೂರಿದರು.

@h18 = ಸಿಎಎ ವಿರುದ್ಧ ಹೋರಾಟ

ಸಿ.ಎ.ಎ., ಎನ್.ಪಿ.ಆರ್ ಮತ್ತು ಎನ್.ಆರ್.ಸಿ. ಕಾಯ್ದೆ ಜಾರಿಗೆ ತರಲು ಮುಂದಾಗುವುದರ ಮೂಲಕ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಧರ್ಮದ ಹೆಸರಿನಲ್ಲಿ ದೇಶ ವಿಭಜಿಸುವ ಹುನ್ನಾರ ನಡೆಸಿದೆ ಎಂದು ಆರೋಪಿಸಿದ ಯಚೂರಿ ಅವರು ಈ ಕಾಯ್ದೆಗಳ ವಿರುದ್ಧ ದೇಶವ್ಯಾಪಿ ಅಸಹಕಾರ ಚಳವಳಿ ರೂಪಿಸಲಾಗುವುದು ಎಂದು ಹೇಳಿದರು.

ಕೇಂದ್ರ ಸರ್ಕಾರ ಸಿ..ಎ.ಎ., ಎನ್.ಪಿ.ಆರ್. ಮತ್ತು ಎನ್.ಆರ್.ಸಿ ಕಾಯ್ದೆಗಳನ್ನು ಜಾರಿಗೆ ತರಲು ಮುಂದಾಗುವುದರ ಮೂಲಕ ಜಾತಿ, ಧರ್ಮ ಮತ್ತು ಲಿಂಗದ ಆಧಾರದ ಮೇಲೆ ದೇಶ ಒಡೆಯಲಾಗುತ್ತಿದ್ದು, ದೇಶದ ಐಕ್ಯತೆ ಮತ್ತು ಅಖಂಡತೆಯನ್ನು ಕಾಪಾಡಲು ಹೋರಾಟ ನಡೆಸಬೇಕಾಗದ ಅಗತ್ಯವಿದೆ ಎಂದರು.

ಬಿಜೆಪಿ ಹಿಂದು ಮತಬ್ಯಾಂಕ್ ಭದ್ರಗೊಳಿಸಲು ಓಟಬ್ಯಾಂಕ್ ರಾಜಕಾರಣ ಮಾಡುತ್ತಿರುವುದು ಅತ್ಯಂತ ಹೇಯಕರ ವಿಷಯವಾಗಿದೆ ಎಂದ ಅವರು ಇಡೀ ದೇಶವನ್ನು ಕಾಶ್ಮೀರ ಸ್ಥಿತಿಗೆ ತೆಗೆದುಕೊಂಡು ಹೋಗಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಪಕ್ಷದ ಹಿರಿಯ ಮುಖಂಡ ಮಾರುತಿ ಮಾನ್ಪಡೆ, ಶರಣಬಸಪ್ಪ ಮಮಶೆಟ್ಟಿ ಸೇರಿದಂತೆ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Comment