ದೇಶದ ಅಕ್ಷರ ಕಾಂತ್ರಿಗೆ ಶಿಕ್ಷಕರು ಕಾರಣಕರ್ತರಾಗಲಿ: ಪರಮೇಶ್ವರ್

ಕೊರಟಗೆರೆ, ಸೆ. ೭- ದೇಶ ಆರ್ಥಿಕ ಅಭಿವೃದ್ಧಿಯ ಕ್ರಾಂತಿಯಾಗಬೇಕಾದರೆ ಶೈಕ್ಷಣಿಕ ಕ್ರಾಂತಿಯಿಂದ ಮಾತ್ರ ಸಾಧ್ಯ. ಶಿಕ್ಷಕರು ಹೆಚ್ಚಿನ ಜವಾಬ್ದಾರಿಯಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಬೇಕು ಎಂದು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು.

ಪಟ್ಟಣದ ಮಾರುತಿ ಕಲ್ಯಾಣ ಮಂದಿರದಲ್ಲಿ ಸಾರ್ವಜನಿಕರ ಶಿಕ್ಷಣ ಇಲಾಖೆ, ಮಧುಗಿರಿ ಶೈಕ್ಷಣಿಕ ಜಿಲ್ಲೆ ಹಾಗೂ ಕೊರಟಗೆರೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಡಾ. ಎಸ್. ರಾಧಾಕೃಷ್ಣ ರವರ 131ನೇ ಜಯಂತಿ ಮತ್ತು ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

ದೇಶ ಸ್ವಾತಂತ್ರ್ಯ ಪೂರ್ವದಲ್ಲಿ ಶೇ. 12 ರಷ್ಟು ಇದ್ದು, ಸಾಕ್ಷರತೆ 72 ವರ್ಷಗಳ ಸ್ವಾತಂತ್ರ್ಯ ಬಂದ ನಂತರ ಶೇ. 80 ರಷ್ಟು ಅಕ್ಷರಸ್ಥರಾಗಿ ಅಕ್ಷರ ಕಾಂತ್ರಿಯನ್ನೆ ಮಾಡಲಾಗಿದ್ದು, ಸ್ವತಂತ್ರದ ಹಿಂದೆ ಕೇವಲ ಶೇ. 12 ಅಕ್ಷರಸ್ಥರು ಡಿ ದರ್ಜೆ ನೌಕರಿ ಅರ್ಹತೆಯ ಶಿಕ್ಷಣ ಪಡೆದಿದ್ದು, ಈಗ ವೃತ್ತಿಪರ ಶಿಕ್ಷಣ ಪಡೆದು ಭಾರತ ದೇಶ ವಿದ್ಯಾವಂತರು ನಾಸಾ ಸೇರಿದಂತೆ ವಿವಿಧ ದೇಶಗಳಲ್ಲಿ ವಿವಿಧ ವಿಭಾಗಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ಭಾರತ ದೇಶಕ್ಕೆ ಕೀರ್ತಿ ತಂದು ಶೈಕ್ಷಣಿಕ ಅಭಿವೃದ್ದಿಗೆ ಸಾಕ್ಷಿಯಾಗಿದೆ. ಇದರ ಯಶಸ್ಸು ಶಿಕ್ಷಕರಿಗೆ ಸೇರಬೇಕು ಎಂದರು.

ರಾಜ್ಯದಲ್ಲಿ ಪ್ರಸ್ತುತ 15 ಲಕ್ಷ ಶಾಲೆಗಳಿದ್ದು, ಅದರಲ್ಲಿ 10 ಲಕ್ಷ ಸರ್ಕಾರಿ ಶಾಲೆಗಳಲ್ಲಿ 2.5 ಕೋಟಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು ಅದರಲ್ಲಿ ಕಡುಬಡವರು, ಮಧ್ಯ ವರ್ಗದವರು ಅಭ್ಯಾಸ ಮಾಡುತ್ತಿದ್ದು ಶೇ. 5 ರಷ್ಟು ಮಂದಿ ಶ್ರೀಮಂತ ಮನೆತನದ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅವರಿಗೆ ಶಿಕ್ಷಕರು ನ್ಯಾಯ ದೊರಕಿಸಿಕೊಡಬೇಕು. ಒಂದು ಹೆಣ್ಣು ಕಲಿತರೆ ಒಂದು ಕುಟುಂಬ ಕಲಿತಂತೆ ಎಂಬ ಗಾಂಧೀಜಿಯವರ ಕನಸು ಇಂದು ಮಹಿಳಾ ಶಿಕ್ಷಕಿಯರು ನನಸು ಮಾಡುತ್ತಿದ್ದು ಶಿಕ್ಷಣ ಕ್ಷೇತ್ರದಲ್ಲಿ ಮಹಿಳಾ ಶಿಕ್ಷಕಿಯರು ಹೆಚ್ಚು ಕಾರ್ಯನಿರ್ವಹಿಸುತ್ತಿದ್ದು ಶೈಕ್ಷಣಿಕ ಕ್ರಾಂತಿಗೆ ಬೆಂಬಲವಾಗಿದೆ ಎಂದ ಅವರು, ಡಾ.ಎಸ್.ರಾಧಾಕೃಷ್ಣ ರವರ ದೊರದೃಷ್ಠಿಯ ತತ್ವ ಸಿದ್ದಾಂತಗಳು ಪ್ರಸ್ತುತ ಸಮಾಜಕ್ಕೆ ಆದರ್ಶವಾಗಿದ್ದು ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷರು ಡಾ. ಎಸ್.ರಾಧಾಕೃಷ್ಣರವರ ಆದರ್ಶಗಳನ್ನು ಎಲ್ಲಾ ಶಿಕ್ಷರು ಶೇ.1 ಭಾಗವಾದರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಶಾಲೆಯಲ್ಲಿ ಬೋಧನೆ ಮಾಡುವ ಮೂಲಕ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಗೆ ತರಬೇಕು ಎಂದರು.

ಶಿಕ್ಷಣ ಕ್ಷೇತ್ರಕ್ಕೆ ಸರ್ಕಾರ ಎಲ್ಲಾ ರೀತಿಯ ನೆರವು ನೀಡಲು ಸಿದ್ದವಿದೆ. ಅದರ ಸದುಪಯೋಗ ಪಡೆದು ಪ್ರಾಥಮಿಕ, ಪ್ರೌಢಶಾಲೆಗಳು, ಪದವಿಪೂರ್ವ ಸೇರಿದಂತೆ ಎಲ್ಲಾ ಶಿಕ್ಷಣ ವಿವಿಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದು ಮಕ್ಕಳನ್ನು ಇಂದಿನ ಸದೃಢ ಜಗತ್ತಿನ ಜತೆ ಸೆಣಸಾಡಲು ಸಜ್ಜುಗೊಳಿಸುವಂತೆ ಮನವಿ ಮಾಡಿದ ಅವರು, ಈ ಕಾರ್ಯಕ್ಕೆ ನಿಮ್ಮ ಜತೆಗೆ ಸದಾ ಇರುತ್ತೇನೆ ಎಂದು ಭರವಸೆ ನೀಡಿದ ಅವರು, ಕೊರಟಗೆರೆ ತಾಲ್ಲೂಕಿನಲ್ಲಿ ಶಿಕ್ಷಕರ ವರ್ಗಾವಣೆಗೆ ಮಾಡಿ ರಾಜಕೀಯ ಮಾಡಿದವನಲ್ಲ ಮುಂದೆಯೂ ಮಾಡುವವನಲ್ಲ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ನಾನು ಸದಾ ಸಿದ್ದನಿದ್ದು ಸಮಸ್ಯೆಗಳನ್ನು ತಿಳಿಸುವಂತೆ ಮನವಿ ಮಾಡಿದ ಅವರು, ಸರ್ಕಾರದ ವರ್ಗಾವಣೆ ನೀತಿಯನ್ನು ಅನುಸರಿಸಿರಿ ಎಂದರು.

ಕೊರಟಗೆರೆ ತಾಲ್ಲೂಕಿನಲ್ಲಿನ ಶಾಲೆಗಳ ಕೊಠಡಿ ಸೇರಿದಂತೆ ಗುರುಭವನ ಸಮಸ್ಯೆಯನ್ನು ಹಂತ-ಹಂತವಾಗಿ ಪರಿಹರಿಸುವ ಭರವಸೆ ನೀಡಿದ ಅವರು, ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್‌ಗೆ ತಾಲ್ಲೂಕಿನ 5 ಸರ್ಕಾರಿ ಶಾಲೆಗಳಾದ ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಗೌರಿನಿಲಯ, ಹಿರಿಯ ಪ್ರಾರ್ಥವಿಕ ಶಾಲೆ, ಜಟ್ಟಿಅಗ್ರಹಾರ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆ, ಹಂಚಿಹಳ್ಳಿ ಸರ್ಕಾರಿ ಪ್ರಾರ್ಥಮಿಕ ಶಾಲೆಗಳನ್ನು ದತ್ತು ನೀಡುವ ಮೂಲಕ ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಚಾಲನೆ ನೀಡಿದರು.

ಸಂಸದ ಹೆಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ಸರ್ಕಾರ ಶಿಕ್ಷಕರ ವರ್ಗಾವಣೆ ನೀತಿಯಲ್ಲಿ ಶಿಕ್ಷಕರಿಗೆ ಅನಾನುಕೂಲವಾಗದ ಅನುಕೂಲವಾಗುವ ರೀತಿಯಲ್ಲಿ ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ ಅವರು, ಇದರಿಂದ ಶಿಕ್ಷಕರು ತಮ್ಮಗೆ ಇಷ್ಟವಾದ ಸ್ಥಳಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ಶೈಕ್ಷಣಿಕ ಅಭಿವೃದ್ದಿಗೆ ಸಹಕಾರಿಯಾಗುವುದು ಎಂದರು.

ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಮಾತನಾಡಿ, ಸರ್ಕಾರದ ಅಧಿಕಾರಿಗಳು ಒಂದು ತರಗತಿಯಲ್ಲಿ 70 ಮಂದಿ ವಿದ್ಯಾರ್ಥಿಗಳ ಅನುಪಾತದಲ್ಲಿ ಒಬ್ಬ ಶಿಕ್ಷಕ ಎಂಬ ನೂತನ ಕಾನೂನು ತಂದು 15 ಸಾವಿರ ಶಿಕ್ಷಕರನ್ನು ಹೆಚ್ಚುವರಿಯಾಗಿ ಮಾಡಿದ್ದು ಸರ್ಕಾರ ತಕ್ಷಣ ವಾಪಸ್ ಪಡೆದು 50 ಮಂದಿ ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕ ಎಂದು ಆದೇಶ ಹೊರಡಿಸಬೇಕು ಹಾಗೂ ಸರ್ಕಾರಿ ಶಾಲೆಗಳನ್ನು ಉಳಿಸಬೇಕು ಎಂದು ಉಪಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಶಿಕ್ಷಕರ ಪ್ರಶಸ್ತಿಗೆ ಶಿಕ್ಷಕರು ಅರ್ಜಿ ಹಾಕುವುದನ್ನು ನಿಲ್ಲಿಸಿ ಖಾಸಗಿ ಸಂಸ್ಥೆಯಿಂದ ಸರ್ವೆ ಮಾಡಿಸಿ ಅರ್ಹ ಶಿಕ್ಷಕರಿಗೆ ಪ್ರಶಸ್ತಿ ನೀಡುವ ಪದ್ದತಿ ಜಾತಿಗೆ ತರಬೇಕು. ಶಿಕ್ಷಕರ ವೃತ್ತಿಗೆ ಬರುವ ಶಿಕ್ಷಕರು ಇಷ್ಟಪಟ್ಟು ಬರಬೇಕೆ ಹೊರತು ಜೀವನ ನಡೆಸಲು ಬರಬಾರದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯರಾದ ಪ್ರೇಮಾ, ಶಿವರಾಮಯ್ಯ, ಜೆ.ಜೆ.ರಾಜಣ್ಣ, ಕೆಂಚಮಾರಯ್ಯ, ಮಾಜಿ ಸದಸ್ಯ ಪಿ.ಎನ್.ಕೃಷ್ಣಮೂರ್ತಿ, ತಾ.ಪಂ. ಅಧ್ಯಕ್ಷ ಕೆಂಪರಾಮಯ್ಯ, ಉಪಾಧ್ಯಕ್ಷೆ ನರಸಮ್ಮ, ಸದಸ್ಯ ಟಿ.ಸಿ.ರಾಮಯ್ಯ, ಪ.ಪಂ.ಸದಸ್ಯ ಎ.ಡಿ.ಬಲರಾಮಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯಗೋಪಿನಾಥ್, ಉಪವಿಭಾಗಾಧಿಕಾರಿ ಡಾ.ವೆಂಟೇಶಯ್ಯ, ತಹಶೀಲ್ದಾರ್ ಎಂ.ನಾಗರಾಜು, ಡಿಡಿಪಿಐ ಕೆ.ವಿ.ರವಿಶಂಕರ್, ಇಓ. ಶಿವಪ್ರಸಾದ್, ಬಿಇಓ ಹೆಚ್.ಎಸ್.ಚಂದ್ರಶೇಖರ್, ಬಿಆರ್‍ಸಿ ಸುರೇಂದ್ರನಾಥ್, ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಜಿ.ಹನುಮಂತರಾಯಪ್ಪ, ಶಿವಣ್ಣ, ಎಲ್.ಕಾಮಯ್ಯ, ಚಿಕ್ಕಪ್ಪಯ್ಯ ಮತ್ತಿತರರು ಉಪಸ್ಥಿತರಿದ್ದರು.

Leave a Comment