ದೇಶದಲ್ಲಿ ಸೋಂಕಿತರ ಸಂಖ್ಯೆ ೨೦೬೯ಕ್ಕೆ ಏರಿಕೆ

ನವದೆಹಲಿ, ಏ ೩-ದೇಶಾದ್ಯಂತ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಕಳೆದ ೧೨ ತಾಸುಗಳ ಅವಧಿಯಲ್ಲಿ ೨೩೨ ಹೊಸ ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ ೨೦೬೯ಕ್ಕೆ ಏರಿಕೆಯಾಗಿದ್ದು ಇದುವರೆಗೆ ೧೮೬೦ ಮಂದಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ೧೫೫ ಮಂದಿ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ಅಂಕಿ ಅಂಶ ಬಿಡುಗಡೆ ಮಾಡಿದೆ.

ದೇಶಾದ್ಯಂತ ಲಾಕ್‌ಡೌನ್ ಘೋಷಣೆಯಾಗಿದ್ದರೂ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಒಟ್ಟು ೪೦೦ ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇವರೆಲ್ಲರೂ ತಬ್ಲಿಗಿ ಜಮಾತ್ ಮಸೀದಿಯ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ. ಆದರೆ ಈ ವೈರಾಣು ಸಮುದಾಯ ಮಟ್ಟದಲ್ಲಿ ವ್ಯಾಪಕವಾಗಿ ಹರಡಿರುವ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ. ದೇಶಾದ್ಯಂತ ೨೨ ಕೊರೊನಾ ಸೋಕಿನ ತಾಣಗಳಾಗಿವೆ ಎಂದು ಹೇಳಿದೆ.

ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕೊರೊನಾ ಸೋಂಕಿಗೆ ಬಲಿಯಾಗುತ್ತಿರುವ ಪ್ರಮಾಣ ಕಡಿಮೆಯಿದೆ. ಆದರೆ ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರಿಂದ ಸೋಂಕಿತ ಸಂಖ್ಯೆ ಹೆಚ್ಚಳವಾಗುತ್ತಿರುವುದು ಭೀತಿಗೆ ಕಾರಣವಾಗಿದೆ. ಈ ಸಭೆಯಲ್ಲಿ ಪಾಲ್ಗೊಂಡಿದ್ದವರ ಪೈಕಿ ೧೦ ಮಂದಿ ಮೃತಪಟ್ಟಿದ್ದಾರೆ. ಹೀಗಾಗಿ ಮುಂಬರುವ ದಿನಗಳಲ್ಲಿ ಸೋಂಕು ಪೀಡಿತರ ಸಂಖ್ಯೆಯಲ್ಲಿ ಹೆಚ್ಚಳವಾಗುವ ಭೀತಿ ಎದುರಾಗಿದೆ.

ಆಂಧ್ರಪ್ರದೇಶದಲ್ಲಿ ೧೨ ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ ೧೬೧ಕ್ಕೆ ಏರಿದೆ. ಅಹಮದಾಬಾದ್‌ನಲ್ಲಿ ಏಳು ಮಂದಿಗೆ ಕೊರೋನಾ ಸೋಂಕು ತಗುಲಿದ್ದು, ಗುಜರಾತ್‌ನಲ್ಲಿ ೯೫ಕ್ಕೆ ಏರಿಕೆಯಾಗಿದೆ.

ರಾಜಧಾನಿ ದೆಹಲಿಯಲ್ಲಿ ಇಬ್ಬರು ನರ್ಸಿಂಗ್ ಅಧಿಕಾರಿಗಳಿಗೆ ಕೋವಿಡ್-೧೯ ಸೋಂಕು ತಗುಲಿದೆ. ಅದೇ ರೀತಿ ತಬ್ಲೀಗ್ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆಗ್ರಾದ ಆರು ಮಂದಿ ಕೊರೊನಾ ಸೋಂಕಿನಿಂದ ಬಳಲುತ್ತಿರುವುದು ಖಚಿತವಾಗಿದೆ. ರಾಜಸ್ತಾನದಲ್ಲಿ ತಬ್ಲೀಗಿ ಜಮಾತ್‌ನಲ್ಲಿ ಭಾಗವಹಿಸಿದ್ಧ ಐವರು ಕೊರೊನಾ ಸೋಂಕು ಪಿಡೀತರಾಗಿದ್ದು ಸೋಂಕಿತರ ಸಂಖ್ಯೆ ೧೩೮ಕ್ಕೆ ಏರಿಕೆಯಾಗಿದೆ.

ಮಹಾರಾಷ್ಟ್ರದಲ್ಲಿ ೪೦೦ ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ವೈರಾಣು ಹತೋಟಿಗೆ ತರಲು ರಾಜ್ಯ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಇದರ ಭಾಗವಾಗಿ ಕೋವಿಡ್ -೧೯ ಸ್ವಯಂ ಮೌಲ್ಯಮಾಪನ ಸಾಧನವನ್ನು ಆನ್‌ಲೈನ್ ಮೂಲಕ ಪ್ರಾರಂಭಿಸಿದೆ.

ಸರ್ಕಾರ ಆರಂಭಿಸಿರುವ ಈ ಡಿಜಿಟಲ್ ವೇದಿಕೆಯಲ್ಲಿ ನಾಗರಿಕರು ಕೊರೊನಾ ಸೋಕಿನ ರೋಗಕ್ಷಣಗಳನ್ನು ತಮ್ಮ ಮನೆಗಳಲ್ಲೇ ಕುಳಿತು ಪತ್ತೆ ಮಾಡಿಕೊಳ್ಳಬಹುದಾಗಿದೆ. ನಂತರ ತಮ್ಮ ಸ್ಥಿತಿಗಿಗಳ ಬಗ್ಗೆ ಅನುಮಾನವಿದ್ದಲ್ಲಿ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.

ಅಪಲೊ ಆಸ್ಪತ್ರೆಯ ಸಹಯೋಗದೊಂದಿಗೆ ಈ ಆನ್ ಲೈನ್ ಉಪಕರಣವನ್ನು ಬಿಡುಗಡೆ ಮಾಡಿದೆ. ಜನರು ತಮ್ಮ ರೋಗ ಲಕ್ಷಣಗಳ ಬಗ್ಗೆ ತಮ್ಮ ಮನೆಯಲ್ಲಿ ತಿಳಿದುಕೊಳ್ಳಲು ಎಚ್‌ಟಿಟಿಪಿ://ಕೋವಿಡ್೧೯.iಹಾರಾಷ್ಟ್ರ.ಗೋವ್.ಇನ್ ವೆಬ್ ತಾಣಕ್ಕೆ ಭೇಟಿ ನೀಡಬಹುದಾಗಿದೆ.

ಕರ್ನಾಟದದಲ್ಲೂ ಮಾರಕ ಕೊರೊನಾ ಹಾವಳಿ ಮುಂದುವರೆದಿದ್ದು, ಇಂದು ಹೊಸದಾಗಿ ೧೪ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ ೧೨೧ಕ್ಕೆ ಏರಿಕೆಯಾಗಿದೆ. ಈ ಪೈಕಿ ದೆಹಲಿ ನಿಜಾಮುದ್ದೀನ್ ಸಭೆಯಲ್ಲಿ ಭಾಗವಹಸಿದ್ದ ೧೧ ಮಂದಿ ಕೊರೊನಾ ಸೋಂಕಿರುವುದ ಖಚಿತವಾಗಿದೆ.

ಈ ಮಧ್ಯೆ ಉತ್ತರ ಪ್ರದೇಶದಲ್ಲಿ ಲಾಕ್‌ಡೌನ್ ಪರಿಣಾಮಕಾರಿಯಾಗಿ ಜಾರಿಗೆ ತರಲು ಮುಂದಾಗಿದ್ದು, ಈ ನಿಯಮ ಉಲ್ಲಂಘಿಸಿ ಕರ್ತವ್ಯ ನಿರತ ಪೊಲೀಸರ ಮೇಲೆ ದಾಳಿ ನಡೆಸಿದರೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಂಮತ್ರಿ ಯೋಗಿ ಆದಿತ್ಯನಾಥ್ ಎಚ್ಚರಿಕೆ ನೀಡಿದ್ದಾರೆ.

Leave a Comment