ದೇಶದಲ್ಲಿ ಮೇ 31ರವರೆಗೂ ಲಾಕ್​ಡೌನ್​ ಮುಂದುವರಿಕೆ, ಹೊಸ ಮಾರ್ಗಸೂಚಿ ಬಿಡುಗಡೆ

ನವದೆಹಲಿ, ಮೇ 17- ನಾಳೆಯಿಂದ ಲಾಕ್ ಡೌನ್ 4.0 ಹೊಸ ನಿಯಮಗಳೊಂದಿಗೆ ಜಾರಿಯಾಗಲಿದೆ. ರಾಷ್ಟ್ರದಲ್ಲಿ ಕೊರೊನಾ ಸೋಂಕು ವ್ಯಾಪಕ ಹರಡುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಗೃಹ ಸಚಿವಾಲಯವು ನಾಲ್ಕನೇ ಹಂತದ ಲಾಕ್ ಡೌನ್ ಅನ್ನು ಇನ್ನೆರಡು ವಾರಗಳ ಕಾಲ ವಿಸ್ತರಿಸಿ ಇಂದು ಆದೇಶ ಹೊರಡಿಸಿದೆ.

ನಾಲ್ಕನೇ ಹಂತದ ಲಾಕ್‌ ಡೌನ್‌ನಲ್ಲಿ ಹಲವು ಸಡಿಲಿಕೆಗಳಾಗಲಿವೆ, ಸಾರ್ವಜನಿಕ ಸಾರಿಗೆಗಳಿಗೆ ಅವಕಾಶ ಸಿಗಲಿದೆ, ರೆಸ್ಟೋರೆಂಟ್, ಶಾಪಿಂಗ್ ಮಾಲ್ಗಳು ಮತ್ತೆ ತೆರೆಯಲಿವೆ ಎಂಬಿತ್ಯಾದಿ ಚರ್ಚೆ, ಆಶಯಗಳ ಮಧ್ಯೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಇಂದು ಹೊಸ ಆದೇಶವನ್ನು ಪ್ರಕಟಿಸಿದೆ.

ಸದ್ಯ ಇರುವ ಲಾಕ್ಡೌನ್ ಅವಧಿಯನ್ನು ಇನ್ನೂ ಎರಡುವಾರಗಳ ಕಾಲ ಅಂದರೆ ಮೇ 31ರವರೆಗೆ ವಿಸ್ತರಣೆ ಮಾಡಿ ಎನ್ಡಿಎಂಎ ಆದೇಶ ನೀಡಿದೆ. ಉನ್ನತ ವಿಪತ್ತು ನಿರ್ವಹಣಾ ಸಂಸ್ಥೆಯಾಗಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಗೃಹ ಸಚಿವಾಲಯಕ್ಕೆ ನೀಡಿದ ಶಿಫಾರಸುಗಳ ಅನ್ವಯ ಈ ಆದೇಶ ಪ್ರಕಟವಾಗಿದೆ. ದೇಶದಲ್ಲಿ ಕೊವಿಡ್-19 ತಡೆಗಟ್ಟಲು ಇನ್ನೂ ಹೆಚ್ಚಿನ ನಿಯಂತ್ರಣಾ ಕ್ರಮಗಳು ಅಗತ್ಯ ಇರುವ ಕಾರಣ ಲಾಕ್ಡೌನ್ ಅವಧಿ ವಿಸ್ತರಣೆ ಮಾಡಲಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ.

ಹೊಸ ಮಾರ್ಗಸೂಚಿ ಬಿಡುಗಡೆ
ಲಾಕ್‌ ಡೌನ್‌ ನಾಲ್ಕನೇ ಹಂತದ ಮಾರ್ಗಸೂಚಿಗಳನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿದ್ದು, ವಾಹನಗಳಲ್ಲಿ ಅಂತರರಾಜ್ಯ ಪ್ರಯಾಣಕ್ಕೆ ಅವಕಾಶ ನೀಡುವ ಬಗ್ಗೆ, ರಾಜ್ಯದೊಳಗೆ ಸಾರಿಗೆ ವ್ಯವಸ್ಥೆ ಬಗ್ಗೆ ರಾಜ್ಯ ಸರ್ಕಾರಗಳೇ ತೀರ್ಮಾನ ಕೈಗೊಳ್ಳಬಹುದು ಎಂದು ಹೇಳಲಾಗಿದೆ. ರಾಜ್ಯ ಸರ್ಕಾರಗಳು ಪರಿಸ್ಥಿತಿಯನ್ನು ಅವಲೋಕಿಸಿ ನಿರ್ಬಂಧ ವಿಧಿಸಬಹುದು. ಎಲ್ಲ ಉದ್ಯೋಗಿಗಳು ಆರೋಗ್ಯ ಸೇತು ಆಪ್ ಡೌನ್ ಲೋಡ್ ಮಾಡಿಕೊಳ್ಳಬೇಕು. ಮದುವೆ ಸಮಾರಂಭಕ್ಕೆ 50 ಜನರಿಗೆ ಮಾತ್ರ ಅವಕಾಶ ಇರಬೇಕು. ಸಂಜೆ 7 ರಿಂದ 7 ಗಂಟೆಯವರೆಗೆ ಸಂಚಾರಕ್ಕೆ ನಿರ್ಬಂಧವಿರುತ್ತದೆ.

ಶಾಲೆ – ಕಾಲೇಜು ಬಂದ್ ಮುಂದುವರೆಯಲಿದೆ. ಹೋಟೆಲ್, ರೆಸ್ಟೋರೆಂಟ್, ಚಿತ್ರಮಂದಿರ ಸ್ಥಗಿತ, ವಿಮಾನಯಾನ ಸಂಚಾರ ಸಂಪೂರ್ಣ ನಿರ್ಬಂಧವಿರುತ್ತದೆ. ನಾಲ್ಕನೇ ಹಂತದ ಲಾಕ್ಡೌನ್ ಮಾರ್ಗಸೂಚಿಯಲ್ಲಿ ಅಂತ್ಯಸಂಸ್ಕಾರಕ್ಕೆ ಕೇವಲ 20 ಜನ ಮಾತ್ರ ಭಾಗಿಯಾಗಬಹುದು ಎಂದು ಹೇಳಲಾಗಿದೆ.

ಮದ್ಯ ಮಾರಾಟಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ. ವೈನ್ ಸ್ಟೋರ್, ಎಂಎಸ್‌ಐಎಲ್, ಎಂಆರ್ಪಿ ಮಳಿಗೆಗಳಲ್ಲಿ ಮಾತ್ರ ಮದ್ಯ ಮಾರಾಟ ಮಾಡಬಹುದು. ಸಾರ್ವಜನಿಕ, ಕೆಲಸದ ಸ್ಥಳದಲ್ಲಿ ಮದ್ಯ ಗುಟ್ಕಾ, ತಂಬಾಕು ಸೇವನೆಗೆ ಅವಕಾಶ ಇರುವುದಿಲ್ಲ. ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಭಾರತದಲ್ಲಿ ಸದ್ಯಕ್ಕೆ 91 ಸಾವಿರ ಕೊರೊನಾ ಸೋಂಕು ಪ್ರಕರಣಗಳು ಇವೆ. ಇನ್ನು ಕೊರೊನಾದಿಂದ ಮೃತಪಟ್ಟಿರುವವರ ಸಂಖ್ಯೆ 2800 ದಾಟಿದೆ. ಕಳೆದ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿದ್ದರು. ಲಾಕ್ ಡೌನ್ ವಿಚಾರವಾಗಿ ಸಲಹೆ ನೀಡುವಂತೆ ತಿಳಿಸಿದ್ದರು.

*ದೇಶವ್ಯಾಪಿ ಲಾಕ್ ಡೌನ್ ಪರಿಸ್ಥಿತಿ ಮೇ 31ರವರೆಗೆ ಮುಂದುವರಿಯಲಿದೆ.
*ದೇಶಾದ್ಯಂತ ಈ ಎಲ್ಲಾ ಚಟುವಟಿಕೆಗಳ ಮೇಲೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ.
*ತುರ್ತು ವೈದ್ಯಕೀಯ ಸೇವೆಗಳು, ಏರ್ ಆಯಂಬುಲೆನ್ಸ್ ಸೇವೆಗಳು ಮತ್ತು ರಕ್ಷಣಾ ಉದ್ದೇಶಗಳನ್ನು ಹೊರತುಪಡಿಸಿದಂತೆ ಎಲ್ಲಾ ಅಂತಾರಾಷ್ಟ್ರೀಯ ಮತ್ತು ದೇಶೀಯ ವಿಮಾನ ಸಂಚಾರ ಇರುವುದಿಲ್ಲ.
*ಯಾವುದೇ ಮೆಟ್ರೋ ರೈಲು ಸೇವೆಗಳು ಇರುವುದಿಲ್ಲ.
*ಶಾಲಾ, ಕಾಲೇಜುಗಳು, ಶಿಕ್ಷಣ/ತರಬೇತಿ ಸಂಸ್ಥೆಗಳು ಇತ್ಯಾದಿ ಯಾವುದೇ ರೀತಿಯ ಶೈಕ್ಷಣಿಕ ಸಂಸ್ಥೆಗಳು ಕಾರ್ಯಾಚರಿಸುವುದಿಲ್ಲ.
*ಹೊಟೇಲ್ ಗಳು, ರೆಸ್ಟೋರೆಂಟ್ ಸಹಿತ ಇತರೇ ಹಾಸ್ಪಿಟಾಲಿಟಿ ಸೇವೆಗಳಿಗೆ ನಿರ್ಬಂಧ ಮುಂದುವರಿಯಲಿದೆ.
*ಹೊಟೇಲ್ ಹಾಗೂ ರೆಸ್ಟೋರೆಂಟ್ ಗಳಲ್ಲಿ ಹೋಂ ಡೆಲಿವರಿಗೆ ಮಾತ್ರವೇ ಅವಕಾಶ.

ಸಾಂಪ್ರದಾಯಿಕ ಆಚರಣೆಗಳ ಮೇಲಿನ ನಿರ್ಬಂಧ
ಕೇಂದ್ರದ ಕ್ಯಾಬಿನೆಟ್ ಕಾರ್ಯದರ್ಶಿ ನೇತೃತ್ವದಲ್ಲಿ 9 ಗಂಟೆಗೆ ನಡೆಯಲಿರುವ ಸಭೆಯಲ್ಲಿ ಎಲ್ಲಾ ರಾಜ್ಯಗಳ ಅಭಿಪ್ರಾಯ ಸಂಗ್ರಹಿಸಿ ಬಳಿಕ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಮಾರ್ಗಸೂಚಿಯಲ್ಲಿ ಲಾಕ್ ಡೌನ್ ಮುಂದುವರೆಸುವುದು,ನಿಯಮಾವಳಿ ಗಳಲ್ಲಿ ಸಡಿಲಿಕೆ, ಪ್ರದೇಶಗಳನ್ನು ಗುರುತಿಸುವುದು,(ರೆಡ್,ಆರೆಂಜ್,ಗ್ರೀನ್)ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡುವುದು. ಆರ್ಥಿಕ ಚಟುವಟಿಕೆ ಆರಂಭಿಸಲು ಹಾಲಿ ಇರುವ ಶೇ 33ರಿಂದ ಶೇ 50% ಹೆಚ್ಚಿಸುವುದು.ಜನ ಸಂದಣಿ ಸೇರುವ ಪ್ರದೇಶಗಳಾದ ಮಾಲ್ ಗಳು,ಥಿಯೇಟರ್ ಗಳು,ದೇವಸ್ಥಾನ,ಮಸೀದಿ, ಚರ್ಚ್ ಹಾಗೂ ಇತರೆ ಧಾರ್ಮಿಕ ಹಾಗೂ ಸಾಂಪ್ರದಾಯಿಕ ಆಚರಣೆಗಳ ಮೇಲಿನ ನಿರ್ಬಂಧಗಳನ್ನು ಮುಂದುವರೆಸಲು ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಲಿದೆ ಎನ್ನಲಾಗಿದೆ.

ಕಂಟೈನ್ಮೆಂಟ್ ಜೋನ್ ನಲ್ಲಿ ಲಾಕ್ ಡೌನ್ ಮುಂದುವರಿಕೆ
ಇನ್ನುಳಿದಂತೆ ಸಾರ್ವಜನಿಕ ಸಂಚಾರ ಸಂಪರ್ಕ ಸಾಧನಗಳಾದ ಬಸ್,ರೈಲು,ವಿಮಾನ ಯಾನಗಳನ್ನು ಆರಂಭಿಸದಿರಲು ತೀರ್ಮಾನಿಸಲಾಗಿದೆ.ಅಂತೆಯೇ ಶಾಲೆ,ಕಾಲೇಜುಗಳು ಆರಂಭಿಸಲು ಪರೀಕ್ಷೆ,ಮೌಲ್ಯಮಾಪನ,ಪ್ರವೇಶಾತಿ,ಸೇರಿದಂತೆ ಮುಂಬರುವ ಶೈಕ್ಷಣಿಕ ವರ್ಷದ ಸಿದ್ದತೆ ನಡೆಸಿಕೊಳ್ಳಲು ಅವಕಾಶ ಕಲ್ಪಿಸುವ ಸಾಧ್ಯತೆ ಇದೆ. ಕಂಟೈನ್ಮೆಂಟ್ ಜೋನ್ ನಲ್ಲಿ ಎಂದಿನಂತೆ ಕಠಿಣ ಲಾಕ್ ಡೌನ್ ಜೊತೆಗೆ ಸೀಲ್ ಡೌನ್ ಮುಂದುವರೆಯಲಿದ್ದು, ಉಳಿದೆಡೆ ಬಸ್ ಗಳನ್ನು ಸಾಮಾಜಿಕ ಅಂತರ ಕಾಯ್ದುಕೊಂಡು ಸಂಚರಿಸಲು ಸರ್ಕಾರ ತೀರ್ಮಾನ ಕೈಗೊಂಡಿದೆ.

Leave a Comment