ದೇಶದಲ್ಲಿ ಬಿಜೆಪಿ ಸರ್ವಾಧಿಕಾರ ಆಡಳಿತ: ಖರ್ಗೆ

ಕಲಬುರಗಿ, ನ. ೯- ದೇಶದಲ್ಲೀಗ ಬಿಜೆಪಿಯ ಸರ್ವಾಧಿಕಾರದ ಆಡಳಿತವಿದೆ ಎಂದು ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನ‌ಡೆಸಿದ್ದಾರೆ.

ಕಲಬುರಗಿ ನಗರದಲ್ಲಿಂದು ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಾರ್ಯವೈಖರಿಗೆ ಜನ ಬೇಸತ್ತಿದ್ದು, ಸರ್ಕಾರ ಬದಲಾವಣೆಗಾಗಿ ಕಾಯುತ್ತಿದೆ.

ಈ ಹಿನ್ನೆಲೆಯಲ್ಲಿಯೇ ದೇಶದಲ್ಲಿ ಬಿಜೆಪಿಯೇತರ ಮಹಾಮೈತ್ರಿ ವಿವಿಧ ಪಕ್ಷಗಳು ಒಂದಾಗಿವೆ. ಮಹಾಮೈತ್ರಿಗೆ  ದೇಶದೆಲ್ಲೆಡೆ  ಜನರು  ವ್ಯಾಪಕ ಬೆಂಬಲ ವ್ಯಕ್ತ ಪಡಿಸುತ್ತಿದ್ದಾರೆ. ಇತ್ತೀಚಿಗೆ ಕರ್ನಾಟಕದಲ್ಲಿ ನಡೆದ ಉಪಚುನಾವಣೆ ಫಲಿತಾಂಶವೇ ಇದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಸಾಮೂಹಿಕ ನಾಯಕತ್ವ:

ಮುಂದಿನ ಲೋಕಸಭೆ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸುತ್ತೇವೆ.ನಮಗೆ ಗೆಲವು ಶತಸಿದ್ಧ ಎಂದು ಮಲ್ಲಿಕಾರ್ಜುನ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದರು.

ವ್ಯವಸ್ಥಿತ ಲೂಟಿ:

ಕೇಂದ್ರ ಆರ್ಥಿಕ ಸಚಿವ ಅರುಣ್ ಜೇಟ್ಲಿಯವರು ನೋಟು ಅಮಾನ್ಯೀಕರಣದಿಂದ ಆರ್ಥಿಕ ಸುಧಾರಣೆ ಆಗಿದೆ ಎಂದಿದ್ದಾರೆ. ಆದರೆ ಮೂಲಭೂತವಾಗಿ ಅಂತಹ ಬದಲಾವಣೆಗಳೇನೂ ಆಗಿಲ್ಲ.ನೋಟು ಅಪನಗದೀಕರಣ ಒಂದು ವ್ಯವಸ್ಥಿತ ಲೂಟಿಯಾಗಿದ್ದು,ಜನ ಸಾಮಾನ್ಯರಿಗೆ ಯಾವುದೇ ಲಾಭ ಆಗಿಲ್ಲ ಎಂದು ಹರಿಹಾಯ್ದರು.ಉದ್ಯೋಗ ಸೃಷ್ಟಿ, ಭಯೋತ್ಪಾದನೆ ನಿರ್ಮೂಲನೆ,ಭ್ರಷ್ಟಾಚಾರ ತಡೆಯ ಬಗ್ಗೆ ಪ್ರಧಾನಮಂತ್ರಿ ಮಾತಾಡಿದರೇ, ಹೊರತು ಒಂದನ್ನೂ ಯಶಸ್ವಿಯಾಗಿ ಕಾರ್ಯರೂಪಕ್ಕೆ ತರಲಿಲ್ಲ ಎಂದರು

ರೆಡ್ಡಿ ಪ್ರಕರಣ

ಬಳ್ಳಾರಿಯ ಗಾಲಿಜನಾರ್ಧನ ರೆಡ್ಡಿ ಡೀಲ್ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಹಸ್ತಕ್ಷೇಪದ ಪ್ರಶ್ನೆಯೇ ಇಲ್ಲವೆಂದು ಖರ್ಗೆ ಸ್ಪಷ್ಟಪಡಿಸಿದರು.

ಅಂಬಿಡೆಂಟ್ ಕಂಪನಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಸಿಸಿಬಿ ತನಿಖೆ ನಡಸುತ್ತಿದೆ. ಯಾರೇ ಕಾನೂನು ಉಲ್ಲಂಘನೆ ಮಾಡಿದರೂ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲೇಬೇಕಾಗುತ್ತದೆ. ಸ್ವತಃ ಸಿಸಿಬಿ ಆಯುಕ್ತರೇ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ ಎಂದರು.

ಪರಿಸ್ಥಿತಿ ಹೀಗಿರುವಾಗ ರೆಡ್ಡಿ ಮನೆ ಮೇಲೆ ದಾಳಿ ಮತ್ತು ತನಿಖೆಯನ್ನು ರಾಜಕೀಯಪ್ರೇರಿತ ಎನ್ನಲಾಗುತ್ತಿದೆ. ರಾಜಕೀಯ ಪ್ರೇರಿತ ಎನಿಸಿದರೆ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಯಡಿಯೂರಪ್ಪ ಅವರು ಪ್ರಶ್ನಿಸಲಿ ಎಂದು ಅವರು ಸವಾಲು ಹಾಕಿದರು.

Leave a Comment