ದೇಶದಲ್ಲಿ ಕೊರೊನಾ ಸತ್ತವರ ಸಂಖ್ಯೆ 15ಕ್ಕೆ ಏರಿಕೆ

ನವದೆಹಲಿ, ಮಾ. ೨೬- ಕೊರೊನಾ ಸೋಂಕು ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಸರ್ಕಾರ 21 ದಿನಗಳ ಕಾಲ ಲಾಕ್‌ಡೌನ್ ಮಾಡಿದ್ದರೂ ಸೋಂಕು ನಿಯಂತ್ರಣಕ್ಕೆ ಬಾರದಿರುವುದು ಆತಂಕಕ್ಕೆ ಕಾರಣವಾಗಿದೆ. ಜಮ್ಮು-ಕಾಶ್ಮೀರದಲ್ಲಿ ಕೊರೊನಾ ಸೋಂಕಿಗೆ 65 ವರ್ಷದ ವೃದ್ಧರೊಬ್ಬರು ಬಲಿಯಾಗಿದ್ದಾರೆ. ಅಲ್ಲದೆ ಅವರ ಜೊತೆ ಸಂಪರ್ಕ ಹೊಂದಿದ್ದ ನಾಲ್ವರಿಗೆ ಕೊರೊನಾ ಸೋಂಕು ತಗಲಿರುವುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದೆ. ತಮಿಳುನಾಡಿನ ಮಧುರೈನ ರಾಜಾಜಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತ ವ್ಯಕ್ತಿ ನಿನ್ನೆ ನಿಧನರಾಗಿದ್ದರು. ನವಿಮುಂಬೈನಲ್ಲೂ ಕೊರೊನಾ ಸೋಂಕು ಪೀಡಿತರೊಬ್ಬರು ಮೃತಪಟ್ಟಿದ್ದಾರೆ. ಒಟ್ಟು ದೇಶದಲ್ಲಿ ಮೃತರ ಸಂಖ್ಯೆ 15ಕ್ಕೆ ಏರಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಮಿಳುನಾಡಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣಸಚಿವ ಡಾ. ಸಿ. ವಿಜಯಭಾಸ್ಕರ್, ಮೃತ ವ್ಯಕ್ತಿಯೂ ಶಾಶ್ವಕೋಶ ಸಂಬಂಧಿ ಕಾಯಿಲೆ ಅಧಿಕ ರಕ್ತಒತ್ತಡ‌, ಮಧುಮೇಹದಿಂದಾಗಿ ದೀರ್ಘಕಾಲದಿಂದ ಅನಾರೋಗ್ಯ ಪೀಡತರಾಗಿದ್ದರು ಎಂದು ತಿಳಿಸಿದ್ದಾರೆ.

ಲಾಕ್‌ಡೌನ್ ಆದ ಮೊದಲ ದಿನವೇ 70 ಮಂದಿಗೆ ಕೊರೊನಾ ಸೋಂಕು ತಗಲಿರುವುದು ಆತಂಕಕ್ಕೆ ಕಾರಣವಾಗಿದೆ. ಆದರೆ ಜನರು ಲಾಕ್‌ಡೌನ್ ಘೋಷಿಸಿದ್ದರೂ ಅನಗತ್ಯವಾಗಿ ಹೊರಬರುತ್ತಿರುವುದು ಪೊಲೀಸ್ ಇಲಾಖೆ ತಲೆನೋವು ಆಗಿ ಪರಿಣಮಿಸಿದೆ. ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ 669ಕ್ಕೆ ಏರಿಕೆಯಾಗಿದೆ. 43 ಮಂದಿ ಗುಣಮುಖರಾಗಿ ಮನೆಗೆ ವಾಪಸ್ಸ್ ತೆರಳಿದ್ದಾರೆ. ಸಿಂಗಾಪುರದಲ್ಲಿ ಭಾರತೀಯ ಮೂಲದ ಹೆಣ್ಣು ಮಗುವಿಗೆ ಕೊರೊನಾ ಸೋಂಕು ತಗಲಿದೆ.

ಮೂರು ವಾರಗಳ ಕಾಲ ಪ್ರಧಾನಿ ನರೇಂದ್ರ ಮೋದಿಯವರು ಲಾಕ್‌ಡೌನ್ ಘೋಷಣೆ ಮಾಡಿದ್ದಾರೆ. ಆದರೆ ಚೆನ್ನೈನ ಮೌಂಟ್ ರಸ್ತೆಯಲ್ಲಿ ನಾಗರೀಕರು ವಾಹನಗಳಲ್ಲಿ ಸಂಚರಿಸುತ್ತಿದ್ದರು. ಅಲ್ಲಿ ಕರ್ತವ್ಯ ಯೋಜನೆಗೊಂಡಿದ್ದ ಇನ್ಸ್‌ಪೆಕ್ಟರ್‌ ರೊಬ್ಬರು ಮನೆಯಿಂದ ಹೊರಗೆ ಬರಬೇಡಿ ಎಂದು ಪರಿಪರಿಯಾಗಿ ಬೇಡಿಕೊಂಡರು. ಆದರೆ ಜನ ಮಾತ್ರ ಅವರ ಮಾತು ಕೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ.

ವಾಹನ ಸವಾರರನ್ನು ತಡೆದು ನಿಲ್ಲಿಸಿ ಮನೆಯಿಂದ ಹೊರಗಡೆ ಬರಬೇಡಿ ಎಂದು ಮನವಿ ಮಾಡಿದರು. ನಿಮ್ಮ ಕಾಲಿಗೆ ಬೀಳುತ್ತೇನೆ ವಾಪಸ್ ಹೋಗಿ ಎಂದು ಬೇಡಿಕೊಂಡರು. ಆದರು ಜನ ಅವರ ಮಾತಿಗೆ ಬೆಲೆಕೊಡದ ಮುಂದೆ ಸಾಗಿದರು. ಎಷ್ಟೂ ಹೇಳಿದರು ವಾಹನ ಸವಾರರು ಹಿಂದೆ ಸರಿದರು. ಅಗತ್ಯವಿದ್ದರೆ ಮಾತ್ರ ಹೊರಗೆ ಬನ್ನಿ, ಇಲ್ಲದಿದ್ದರೆ ಹೊರಗೆ ಬರಬೇಡಿ, ಕಾಲಿಗೆ ಬಿದ್ದು ಮನವಿ ಮಾಡುವುದನ್ನು ಬಿಟ್ಟರೆ ತಮ್ಮ ಬಳಿ ಏನು ಉಳಿದಿಲ್ಲ ಎಂದು ಅಂಗಲಾಚಿದರು. ಕಡೆಗೆ ಕಣ್ಣೀರು ಹಾಕಿ ಮನೆಯಿಂದ ಹೊರಗಡೆ ಬರಬೇಡಿ ಎಂದು ಪರಿಪರಿಯಾಗಿ ಬೇಡಿ ಕೊಂಡ ದೃಶ್ಯ ನಿಜಕ್ಕೂ ಮಾನವೀಯತೆಗೆ ಹಿಡಿದ ಕೈಗನ್ನಡಿಯಾಯಿತು.

4 ತಿಂಗಳು ಸಂಬಳ
ಕೊರೊನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ಒರಿಸ್ಸಾದಲ್ಲಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ 4 ತಿಂಗಳ ಸಂಬಳವನ್ನು ನೀಡುವುದಾಗಿ ಘೋಷಿಸಿದ್ದಾರೆ. ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿರುವ ವೈದ್ಯರು, ನರ್ಸ್, ಆರೋಗ್ಯ ಇಲಾಖೆ ಸಿಬ್ಬಂದಿ, ಹಾಗೂ ಎಲ್ಲ ಸರ್ಕಾರಿ ವೈದ್ಯಕೀಯ ವೃತ್ತಿಪರರಿಗೂ ಅನ್ವಯವಾಗುವಂತೆ ಏಪ್ರಿಲ್, ಮೇ, ಜೂನ್, ಜುಲೈ, ಸೇರಿ ಒಟ್ಟು 4 ತಿಂಗಳ ಸಂಬಳವನ್ನು ಮುಂಗಡವಾಗಿ ಪಾವತಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ವೈದ್ಯರು ಮತ್ತು ಪೊಲೀಸರ ಕಾರ್ಯಕ್ಕೆ ಅಡ್ಡಿಪಡಿಸಿದರೆ, ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.ಇದೇ ವೇಳೆ ಮುಖ್ಯಮಂತ್ರಿಗಳು ನಮ್ಮ 3 ತಿಂಗಳ ಸಂಬಳವನ್ನು  ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದು, ಶಾಸಕರಿಗೂ ತಮ್ಮ ಸಂಬಳ ಪರಿಹಾರ ನಿಧಿಗೆ ನೀಡುವಂತೆ ಮನವಿ ಮಾಡುವುದಾಗಿ ತಿಳಿಸಿದರು.

ಇದರ ಜೊತೆಗೆ ಕೊರೊನಾ ಸೋಂಕು ತಡೆಗೆ ರಾಜ್ಯದ ಜನರು ಕೈಜೋಡಿಸಿ ಎಂದು ಮನವಿ ಮಾಡಿರುವ ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡುವಂತೆ ಮನವಿ ಮಾಡಿದ್ದಾರೆ.

Leave a Comment