ದೇಶಕ್ಕೆ ಮೆದುಳಾಗಿದೆ ಜೈನ ಧರ್ಮ: ಜ್ಯೋತಿಗಣೇಶ್

ತುಮಕೂರು, ಜು. ೧೧- ದೇಶದ ಧಾರ್ಮಿಕತೆ ಪರಂಪರೆ ಇತಿಹಾಸ ಸಾಮರಸ್ಯ ಭದ್ರತೆಗಳ ರಕ್ಷಣೆಯಲ್ಲಿ ಜೈನ ಧರ್ಮದ ಕೊಡುಗೆ ಮಹತ್ತರವಾಗಿದ್ದು, ದೇಶದ ರಕ್ಷಣೆಗೆ ಜೈನಧರ್ಮ ಮೆದುಳಿನಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಶಾಸಕ ಜ್ಯೋತಿಗಣೇಶ್ ತಿಳಿಸಿದರು.

ನಗರದ ಜೈನ ಭವನದಲ್ಲಿ ಯುಗಳ ಮುನಿಗಳ ಚಾತುರ್ಮಾಸ ಸಮಿತಿ ವತಿಯಿಂದ ಮುನಿಶ್ರೀಗಳ ಮಂಗಳ ಪುರ ಪ್ರವೇಶ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ದೇಶದ ಸಾಮಾಜಿಕತೆ, ಪರಂಪರೆಗೆ ಜೈನಧರ್ಮದ ಕೊಡುಗೆ ಅಪಾರ. ಸಂಸ್ಕೃತಿ, ಸಂಸ್ಕಾರದಿಂದ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಜೈನ್ ಅಸೋಸಿಯೇಷನ್ ಅಧ್ಯಕ್ಷ ಎಸ್. ಜಿತೇಂದ್ರಕುಮಾರ್ ಮಾತನಾಡಿ, ರಾಜ್ಯದ 2ನೇ ಅತಿ ದೊಡ್ಡ ಜೈನ ಸಮಾಜ. ಮುನಿಶ್ರೀ ಪ್ರಮುಖ ಸಾಗರ ಮಹಾರಾಜರ ಚಾತುರ್ಮಾಸದಿಂದ ಈನಗರ ಧರ್ಮ ನಗರಿಯಾಗಿದೆ. ಸಮಾಜದಲ್ಲಿನ ಭಿನ್ನಾಭಿಪ್ರಾಯಗಳಿಗೆ ಅಂತ್ಯ ಹಾಡಿ ಸಮಾಜದ ಬೆಳವಣಿಗೆಗೆ ಶ್ರಮಿಸಬೇಕಿದೆ. ಇತ್ತೀಚಿನ ಕೆಲ ಘಟನೆಗಳಿಂದ ಸಮಾಜದ ಆಡಳಿತ ಪರಕೀಯರ ಪಾಲಾದ ಬಗ್ಗೆ ವಿಷಾದಿಸಿದ ಅವರು, ಚಾತುರ್ಮಾಸ ಆರಂಭಿಲು ಸಮಿತಿ ರಚಿಸಿ ಒಗ್ಗಟ್ಟಾಗಿ ಶ್ರಮಿಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾಜದ ಜನಹಿತ ಕಾರ್ಯಗಳಿಗೆ ಎಲ್ಲಾ ಸಹಕಾರ ನೀಡುವುದಾಗಿ ತಿಳಿಸಿದರು.

ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಮುಸ್ತಾಕ್ ಅಹಮದ್ ಮಾತನಾಡಿ, ಅಲ್ಪಾಸಂಖ್ಯಾತರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಬಗ್ಗೆ ತಿಳಿಸಿದರು.

ಪುಟ್ಟೇನಹಳ್ಳಿ ಶ್ರೀ ಶೀತಲನಾಥ ಸ್ವಾಮಿ ಜಿನ ಮಂದಿರದ ಅಧ್ಯಕ್ಷ ಬಿ. ಪ್ರಸನ್ನಯ್ಯ ಮಾತನಾಡಿ, ಸಮಾಜದ ಬೆಳವಣಿಗೆಗೆ ಒಗ್ಗಟ್ಟು ಅಗತ್ಯ. ಭಿನ್ನಾಭಿಪ್ರಾಯ ತೊರೆದು ಸಮಾಜದ ಏಳ್ಗೆಗೆ ಶ್ರಮಿಸುವಂತೆ ಕರೆ ನೀಡಿದ ಅವರು, ಮುನಿಶ್ರೀಗಳು, ಪೂಜ್ಯಭಟ್ಟಾರಕರು, ಸಮಾಜದ ಹಿರಿಯರ ಮಾರ್ಗದರ್ಶನ ಅಗತ್ಯ ಎಂದರು.

ಚಾತುರ್ಮಾಸ ಆಚರಿಸಲಿರುವ ಮನಿಶ್ರೀ ಅಮೋಘಕೀರ್ತಿ-ಮಹಾರಾಜ್, ಮುನಿಶ್ರೀ ಅಮರಕೀರ್ತಿ ಮಹಾರಾಜ್, ಶ್ರೀಕ್ಷೇತ್ರ ಶ್ರವಣಬೆಳಗೊಳದ ಪೀಠಾಧ್ಯಕ್ಷರಾದ  ಶ್ರೀ ಚಾರುಕೀರ್ತಿಭಟ್ಟಾರಕ ಪಟ್ಟಾಚಾರ್ಯವರ್ಮ ಮಹಾಸ್ವಾಮಿಗಳು, ಶ್ರೀಕ್ಷೇತ್ರ ನರಸಿಂಹರಾಜಪುರ ಸಿಂಹನಗರ ಬಸ್ತಿಮಠದ ಪೀಠಾಧ್ಯಕ್ಷರಾದ ಸ್ವಸ್ತಿಶ್ರೀ ಲಕ್ಷ್ಮಿಸೇನಾ ಭಟ್ಟಾರಕ ಪಟ್ಟಾಚಾರ್ಯವರ್ಮ ಮಹಾಸ್ವಾಮಿಗಳು, ಶ್ರೀಕ್ಷೇತ್ರ ಆರತಿಪುರ ಜೈನಮಠಾಧ್ಯೇಕ್ಷರಾದ ಸ್ವಸ್ತಿಶ್ರೀ ಸಿದ್ಧಾಂತ ಕೀರ್ತಿಭಟ್ಟಾರಕ ಪಟ್ಟಾಚಾರ್ಯವರ್ಮ ಮಹಾಸ್ವಾಮಿಗಳು ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುಗಳ ಮುನಿಗಳ ಚಾತುರ್ಮಾಸ ಸಮಿತಿ ಅಧ್ಯಕ್ಷ ಟಿ.ಎನ್. ಅಜಿತ್ ವಹಿಸಿದ್ದರು. ಭಾರತೀಯ ಜೈನ್‍ಮಿಲನ್, ರಾಷ್ಟ್ರೀಯ ಕಾರ್ಯಾಧ್ಯಕ್ಷ ಧರ್ಮಸ್ಥಳ ಸುರೇಂದ್ರಕುಮಾರ್, ಅನಿತ ಸುರೇಂದ್ರಕುಮಾರ್, ಜೈನ ಸಮಾಜದ ಮಾಜಿ ಅಧ್ಯಕ್ಷ ಸನ್ಮತಿಕುಮಾರ್, ಜಯಲಕ್ಷ್ಮಿ ಆನಂದ್, ಉದ್ಯಮಿ ಸುಭೋದ್, ಕುಮಾರ್‍ಜೈನ್, ಪಾಲಿಕೆ ಸದಸ್ಯರಾದ ಗಿರಿಜಾ ಧನಿಯಾಕುಮಾರ್, ಮಂಜುಳಾ ಆದರ್ಶ ಮತ್ತಿತರರು ಉಪಸ್ಥಿತರಿದ್ದರು.

ಶಾಂತಲಾ ಅಜಿತ್ ಪ್ರಾರ್ಥಿಸಿದರು. ಎಸ್.ಐ. ನಾಗರಾಜ್ ಸ್ವಾಗತಿಸಿದರು. ಕುಮಾರ ನಾಗಭೂಷಣ್ ಕಾರ್ಯಕ್ರಮ ನಿರೂಪಿಸಿದರು. ರಾಜೇಂದ್ರ ಪ್ರಸಾದ್ ವಂದಿಸಿದರು.

Leave a Comment