ದೇವೇಗೌಡ ಕುಟುಂಬದ ವಿರುದ್ಧ ಹೆಚ್. ವಿಶ್ವನಾಥ್ ಆಕ್ರೋಶ

ಬೆಂಗಳೂರು, ಜು 14- ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರ ಕುಟುಂಬ ಸದಸ್ಯರೇ ರಾಜಕೀಯದಲ್ಲಿ ಎಲ್ಲಾ ಅಧಿಕಾರ ಅನುಭವಿಸಿದ್ದು, ಪ್ರಧಾನಿ, ಮುಖ್ಯಮಂತ್ರಿ, ಸಚಿವ, ಸಂಸದ, ಶಾಸಕ ಸ್ಥಾನ ಸೇರಿದಂತೆ ರಾಜಕಾರಣದ ಎಲ್ಲಾ ಉನ್ನತ ಸ್ಥಾನಗಳನ್ನು ಅಲಂಕರಿಸಿದೆ ಎಂದು ಜೆಡಿಎಸ್ ಅತೃಪ್ತ ಶಾಸಕ ಹೆಚ್.ವಿಶ್ವನಾಥ್ ಟೀಕಿಸಿದ್ದಾರೆ.
ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಈಗ ಸಾಂವಿಧಾನಿಕ ಬಿಕ್ಕಟ್ಟು ಏರ್ಪಟ್ಟಿದೆ. ಇಂತಹ ಸಂದರ್ಭದಲ್ಲಿ ದೇವೇಗೌಡರು ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕಿದೆ. ನಾವು ಅತೃಪ್ತ ಶಾಸಕರಲ್ಲ. ರಾಜ್ಯದ ಜನತೆಗೆ ಮೈತ್ರಿ ಸರ್ಕಾರದ ಮೇಲಿರುವ ಅತೃಪ್ತ ಅಸಮಾಧಾನದ ಪ್ರತಿನಿಧಿಯಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇವೆ ಎಂದರು.
ಬಿಜೆಪಿ ನಾಯಕ ಆರ್.ಅಶೋಕ್ ಜೊತೆ ಮುಂಬೈಗೆ ತೆರಳಿದ ಬಳಿಕ ಮಾತನಾಡಿದ ಸಚಿವ ಎಂಟಿಬಿ ನಾಗರಾಜ್, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸರಿಯಾಗಿ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಹೀಗಾಗಿ ತಮಗೆ ಬೇಸರವಾಗಿದೆ. ವೈಯಕ್ತಿಕವಾಗಿ ಕಾಂಗ್ರೆಸ್ ಪಕ್ಷದ ಬಗ್ಗೆ ಅಸಮಾಧಾನವಿಲ್ಲ ಇಲ್ಲ ಎಂದಿದ್ದಾರೆ.

ಬೆಂಗಳೂರಿನಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ರಾಮಲಿಂಗಾರೆಡ್ಡಿ ‌ಮಾತನಾಡಿ, ಶಾಸಕ ಸ್ಥಾನಕ್ಕೆ ರಾಜೀನಾಮೆ‌‌ ಸಲ್ಲಿಸಿರುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ರಾಜೀನಾಮೆ ಹಿಂಪಡೆಯದಂತೆ ತಮ್ಮ ಮೇಲೆ ಬಿಜೆಪಿ ನಾಯಕರು ಒತ್ತಡ ಹೇರಿದ್ದಾರೆ ಎನ್ನುವುದು ಸತ್ಯಕ್ಕೆ ದೂರವಾದುದು.ತಮಗೆ ಎಲ್ಲಾ ಪಕ್ಷದಲ್ಲಿಯೂ ಸ್ನೇಹಿತರಿರುವ ಕಾರಣ ತಮ್ಮನ್ನು ಭೇಟಿ ಮಾಡುವುದು ಸಹಜ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Leave a Comment