ದೇವೇಗೌಡರ ನಡೆ ನಿಗೂಢ

ಬೆಂಗಳೂರು, ಜು. ೧೮- ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರ ರಕ್ಷಿಸಲು ಟೊಂಕಕಟ್ಟಿ ನಿಂತಿರುವ ಮಾಜಿ ಪ್ರಧಾನಿ ದೇವೇಗೌಡ ಅವರ ನಡೆ ನಿಗೂಢವಾಗಿದೆ.
ನೀರಿನಲ್ಲಿ ಮೀನಿನ ಹೆಜ್ಜೆ ಗುರ್ತಿಸಬಹುದು. ರಾಜಕೀಯದಲ್ಲಿ ಗೌಡರು ಮುಂದಿಡುವ ಹೆಜ್ಜೆ ಗುರ್ತಿಸುವುದು ಅಸಾಧ್ಯ ಎಂಬುದು ಜನಜನಿತ ಮಾತು.
ತಮ್ಮ ನಡೆಯ ಗುಟ್ಟನ್ನು ಯಾರಿಗೂ ಬಿಟ್ಟು ಕೊಡದ ಗೌಡ ಅವರು ಅಡ್ವೋಕೇಟ್ ಜನರಲ್ ಉದಯ್ ಹೊಳ್ಳ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿರುವುದು ಕುತೂಹಲ ಕೆರಳಿಸಿದೆ.
ಬಹುಮತದ ಚರ್ಚೆಯನ್ನು ಎರಡರಿಂದ ಮೂರು ದಿನ ಎಳೆಯುವುದು. ಅಷ್ಟರೊಳಗೆ ಸುಪ್ರೀಂಕೋರ್ಟ್ ನೀಡಿದ್ದ ಮಧ್ಯಂತರ ಆದೇಶವನ್ನು ಪ್ರಶ್ನಿಸಿ, ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿ ಅಥವಾ ವಿಪ್ ಗೊಂದಲದ ಬಗ್ಗೆ ನಿವಾರಿಸಲು ಯತ್ನಿಸುವುದು. ಒಂದು ವೇಳೆ ವಿಪ್ ಉಲ್ಲಂಘಿಸಿದ್ದಕ್ಕಾಗಿ ಶಾಸಕರನ್ನು ಅನರ್ಹತೆ ಮಾಡ‌ಬಹುದು ಎಂದು ತೀರ್ಪು ನೀಡಿದರೆ, ಅನರ್ಹತೆ ಅಸ್ತ್ರ ಬಳಸಿ, ಕೊನೆಕ್ಷಣದಲ್ಲಿ ಸರ್ಕಾರ ರಕ್ಷಿಸುವ ಲೆಕ್ಕಾಚಾರ ದೇವೇಗೌಡ ಅವರದ್ದು ಎಂದು ಹೇಳಲಾಗಿದೆ.
ಬಹುಮತ ಚರ್ಚೆಯ ವೇಳೆ ಮೂರರಿಂದ ನಾಲ್ಕು ಜನ ಶಾಸಕರನ್ನು ಸಾಧ್ಯವಾದಷ್ಟು ಮಟ್ಟಿಗೆ ಮನವೊಲಿಸುವುದು. ಬೆಂಗಳೂರು ಶಾಸಕರಾದ ಸೋಮಶೇಖರ್, ಭೈರತಿ ಬಸವರಾಜು, ಮುನಿರತ್ನ ಹಾಗೂ ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್ ಮನವೊಲಿಕೆಗೆ ಯತ್ನಿಸುವುದು. ಒಂದು ವೇಳೆ ಅತೃಪ್ತರ ಪೈಕಿ ನಾಲ್ಕು ಮಂದಿ ಶಾಸಕರು ಕೊನೆಕ್ಷಣದಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ನೀಡಿದರೆ ಸರ್ಕಾರ ಹಾಳುಗುತ್ತವೆ ಎಂಬ ಲೆಕ್ಕಾಚಾರದಲ್ಲಿದ್ದಾರೆ ದೇವೇಗೌಡರು.
ಬಹುಮತ ಸಂದರ್ಭದಲ್ಲಿ ಸಾಧ್ಯವಾದಷ್ಟು ರಿವರ್ಸ್ ಆಪರೇಷನ್ ಮಾಡುವುದಕ್ಕೆ ಪ್ರಯತ್ನಿಸಲು ಕಾಂಗ್ರೆಸ್, ಜೆಡಿಎಸ್ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಮೂರ್ನಾಲ್ಕು ಮಂದಿ ಶಾಸಕರನ್ನು ಸೆಳೆದುಕೊಂಡರೆ ಸರ್ಕಾರ ಉಳಿಯುತ್ತದೆ. ಸರ್ಕಾರ ಉಳಿಸಿಕೊಳ್ಳಲು ಸಾಧ್ಯವಾಗದಿದ್ದರೆ ಸರ್ಕಾರ ಪತನ ಕೊಂಡರೆ ಬಿಜೆಪಿ ವರಿಷ್ಠರ ಜತೆ ಚರ್ಚಿಸಿ, ಬಿಜೆಪಿಗೆ ಬಾಹ್ಯ ಬೆಂಬಲನೀ‌ಡಿ ಸರ್ಕಾರ ಭಾಗವಾಗಿ ಪಕ್ಷವನ್ನು ಉಳಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

Leave a Comment