ದೇವಾಪುರ ತಾಂಡಾದಲ್ಲಿ ಕೊರೊನಾ ಆತಂಕ ಸೋಂಕಿತ 9 ಜನ ಊರೊಳಗೆ-ಸೋಂಕಿಲ್ಲದವ ಆಸ್ಪತ್ರೆಗೆ!

 

ವಾಡಿ,ಮೇ.31-ಕ್ವಾರಂಟೈನ್ ಕೇಂದ್ರದಿಂದ ಬಿಡುಗಡೆ ಮಾಡಲಾದ 10 ಜನ ವಲಸೆ ಕಾರ್ಮಿಕರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಸೋಂಕಿತರು ಎರಡು ದಿನ ಊರು ಮತ್ತು ತಾಂಡಾದೊಳಗೆ ಅಡ್ಡಾಡಿದ ಬಳಿಕ ಮರಳಿ  ಆಸ್ಪತ್ರೆಗೆ ದಾಖಲಿಸಿದ ಘಟನೆ ನಡೆದಿದೆ ಚಿತ್ತಾಪುರ ತಾಲ್ಲೂಕಿನಲ್ಲಿ ನಡೆದಿದೆ.

ಈಚೆಗೆ ಮಹಾರಾಷ್ಟ್ರದಿಂದ ಆಗಮಿಸಿದ 10 ಜನ ವಲಸೆ ಕಾರ್ಮಿಕರನ್ನು ಚಿತ್ತಾಪುರ ತಾಲ್ಲೂಕಿನ ಕರದಾಳ ಗ್ರಾಮದ ಕಸ್ತೂರಬಾ ವಸತಿ ಶಾಲೆಯ ಕ್ವಾರಂಟೈನ್ ಕೇಂದ್ರಲ್ಲಿ ಇರಿಸಲಾಗಿತ್ತು. 14 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಅವಧಿ ಮುಗಿದಿದ್ದರಿಂದ ಅವರನ್ನು ಬಿಡುಗಡೆ ಮಾಡಲಾಗಿತ್ತು. ಗಂಟಲು ದ್ರವ ಮಾದರಿ ಪರೀಕ್ಷೆ ವರದಿ ಬರುವ ಮುಂಚೆಯೇ ಅವರನ್ನು ಬಿಡುಗಡೆ ಮಾಡಿದ್ದರಿಂದ ಅವರು ತಮ್ಮತಮ್ಮ ಗ್ರಾಮ ಮತ್ತು ತಾಂಡಾಗಳಿಗೆ ತೆರಳಿದ್ದರು. ಅದರಲ್ಲಿ 9 ಜನರ ಗಂಟಲು ದ್ರವದ ಮಾದರಿ ಪರೀಕ್ಷೆಯಲ್ಲಿ ಕೊರೊನಾ ಪಾಸಿಟಿವ್ ಬಂದಿದ್ದರಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕ್ವಾರಂಟೈನ್ ಕೇಂದ್ರದಿಂದ ಬಿಡುಗಡೆಯಾದ ಬಳಿಕ ವಲಸೆ ಕಾರ್ಮಿಕರು ಗ್ರಾಮ ಮತ್ತು ತಾಂಡಾಗಳಲ್ಲಿ ಓಡಾಡಿದ್ದರಿಂದ ಗ್ರಾಮ ಮತ್ತು ತಾಂಡಾಗಳ ಜನರು ಇದೀಗ ಕೊರೊನಾ ಭೀತಿ ಎದುರಿಸುವಂತಾಗಿದೆ.

@12bc = ದೇವಾಪುರ ತಾಂಡಾದಲ್ಲಿ ಕೊರೊನಾ ಆತಂಕ:

ಮಹಾಮಾರಿ ಕೊರೊನಾ ಕಟ್ಟಿಹಾಕಲು ಮಹಾ ವಲಸಿಗರಿಗೆ 14 ದಿನಗಳ ಕೊರಂಟೈನ್ ಮಾಡಿದರೂ ಕೂಡ ಅಧಿಕಾರಿಗಳ ಎಡವಟ್ಟಿನಿಂದ ಸೋಂಕು ಗ್ರಾಮದೊಳಗೆ ಪ್ರವೇಶ ಪಡೆದಿದೆ. ಹಳಕರ್ಟಿ ಗ್ರಾಪಂ ವ್ಯಾಪ್ತಿಯ ದೇವಾಪುರ ತಾಂಡಾ ಜನರಲ್ಲಿ ಸಾಂಕ್ರಾಮಿಕ ರೋಗ ಕೊರೊನಾ ಭೀತಿ ಶುರುವಾಗಿದೆ. ತಾಂಡಾದ ಹತ್ತು ಜನ ಸೋಂಕಿತರು ಕ್ವಾರಂಟೈನ್ ಕೇಂದ್ರದಿಂದ ಬಿಡುಗಡೆಯಾಗಿ ಮನೆಗೆ ಬಂದಾಗ ವರದಿಯಲ್ಲಿ ಸೋಂಕು ದೃಢಪಟ್ಟಿದೆ. ಸೋಂಕಿತರೆಲ್ಲ ಜನರೊಂದಿಗೆ ಸಮ್ಮಿಲನಗೊಂಡ ಬಳಿಕ ಆಸ್ಪತ್ರೆಗೆ ದಾಖಲಿಸಿರುವುದು ಮತ್ತಷ್ಟು ಆತಂಕಕ್ಕೊಳಗಾಗುವಂತೆ ಮಾಡಿದೆ. ಇಷ್ಟೆಲ್ಲ ಎಡವಟ್ಟಾದರೂ ತಹಶೀಲ್ದಾರರಾಗಲಿ, ಆರೋಗ್ಯ ಇಲಾಖೆಯ ಅಧಿಕಾರಿಗಳಾಗಲಿ ಅಥವ ಪೊಲೀಸ್ ಅಧಿಕಾರಿಗಳಾಗಲಿ ತಾಂಡಾ ಜನರ ಸಂಕಷ್ಟ ಕೇಳಲು ಬಂದಿಲ್ಲ. ಜನರೆಲ್ಲ ಸತ್ತ ಮೇಲೆ ಹೆಣ ಸಾಗಿಸಲು ಬರ್ತಾರೇನೋ? ಎಂದು ತಾಂಡಾ ನಿವಾಸಿಗಳು ತಾಲೂಕು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೊರೊನಾ ಕಟ್ಟಿಹಾಕಲು ಜಿಲ್ಲಾಡಳಿತ ಕೈಗೊಂಡ ಹಲವು ಕ್ರಮಗಳು ಜನರ ಟೀಕೆಗೆ ಗುರಿಯಾಗುತ್ತಿವೆ.

ಇನ್ನೊಂದು ಪ್ರಕರಣದಲ್ಲಿ ಕೊರೊನಾ ಪಾಜಿಟಿವ್ ಬಂದವನನ್ನು ಊರೊಳಗೆ ಬಿಟ್ಟು ನೆಗೆಟಿವ್ ವರದಿ ಬಂದಾತನನ್ನು ಆಸ್ಪತ್ರೆಗೆ ದಾಖಲಿಸಿದ ಎಡವಟ್ಟು ಸಹ ನಡೆದಿದೆ. ಕೊರೊನಾ ನೆಗೆಟಿವ್ ಬಂದಾತ ತಾಂಡಾದೊಳಗೆ ಉಳಿದುಕೊಂಡಿದ್ದು, ಕುಟುಂಬದ ಇತರ ಸದಸ್ಯರೊಂದಿಗೆ ಬೆರೆತಿರುವುದರ ಜೊತೆಗೆ ತಾಂಡಾದಲ್ಲಿ ಅಡ್ಡಾಡಿದ್ದಾನೆ. ವಾಡಿ ಪಟ್ಟಣಕ್ಕೂ ಹೋಗಿ ಬಂದಿದ್ದಾನೆ. ಅಧಿಕಾರಿಗಳಿಗೆ ತಪ್ಪಿನ ಅರಿವಾದ ಬಳಿಕ ಶನಿವಾರ ದೇವಾಪುರ ತಾಂಡಾಕ್ಕೆ ತೆರಳಿ 108 ಅಂಬ್ಯುಲೆನ್ಸ್ ನಲ್ಲಿ ಸೋಂಕಿತನನ್ನು ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

 

Share

Leave a Comment