ದೇವಸೂಗೂರು: ನಿವೇಶನ ಮನೆ ನಿರ್ಮಾಣಕ್ಕೆ ಆಗ್ರಹ

ರಾಯಚೂರು.ಫೆ.20- ದೇವಸೂಗೂರು ಶಕ್ತಿನಗರದಲ್ಲಿ ಲೇಬರ್ ಕಾಲೋನಿಯ ಹಾಗೂ ಬಸವನಗುಡಿ ಪಕ್ಕದ ನಾಗರಿಕರಿಗೆ ವಾಸಿಸಲು ನಿವೇಶನ ಮತ್ತು ಮನೆ ನಿರ್ಮಾಣ ಮಾಡುವಂತೆ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ವಾಸುದೇವ ಮೇಟಿಯವರು ಆಗ್ರಹಿಸಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ದೇವಸೂಗೂರು ಲೇಬರ್ಸ್ ಕಾಲೋನಿಯ ನಿವಾಸಿಗಳಿಗೆ ಆರ್‌ಟಿಪಿಎಸ್ ಗ್ರಾ.ಪಂ.ಆಡಳಿತ ಮಂಡಳಿಯು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕೂಡಲೇ ಜಿಲ್ಲಾಧಿಕಾರಿಗಳು ಈ ಸಮಸ್ಯೆಯನ್ನು ಬಗೆಹರಿಸಿ ಕಳೆದ 30 ವರ್ಷಗಳಿಂದ ಈ ಭಾಗದ ರೈತರಿಗೆ ಮತ್ತು ಕೃಷಿ ಕಾರ್ಮಿಕರಿಗೆ ಅನ್ಯಾಯವಾಗುತ್ತಿದ್ದು ಇವರಿಗೆ ವಾಸಿಸಲು ಮನೆಗಳು ನೀಡಬೇಕು. ಸುಮಾರು 4 ಸಾವಿರಕ್ಕಿಂತ ಅಧಿಕ ಕುಟುಂಬಗಳು ಈ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.
ಕೂಡಲೇ ಇಲ್ಲಿಂದ ಸ್ಥಳಾಂತರಿಸಿ ಪ್ರತ್ಯೇಕವಾಗಿ ನಿವೇಶನಗಳನ್ನು ಮಾಡಿ ಮನೆ ನಿರ್ಮಾಣ ಮಾಡಿಕೊಡಬೇಕು. ಆರ್‌ಟಿಪಿಎಸ್‌ನಲ್ಲಿ ದತ್ತು ಗ್ರಾಮಗಳ ಅನುದಾನವಿದೆ ಎಂದು ಈಗಾಗಲೇ ಅಧಿಕಾರಿಗಳು ತಿಳಿಸಿದ್ದಾರೆ. ಆದರೂ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಜನರ ಮನಸ್ಸಿಗೆ ಧಕ್ಕೆವುಂಟಾಗಿದೆ. ಕೂಡಲೇ ಜಿಲ್ಲಾಧಿಕಾರಿಗಳು ದೇವಸೂಗೂರು ಗ್ರಾ.ಪಂ.ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ತಿಳಿಸಿ ಈ ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕು. ಇಲ್ಲವಾದಲ್ಲಿ ಹಂತ-ಹಂತವಾಗಿ ನಿರಂತರ ಚಳುವಳಿಯನ್ನು ಮಾಡಲಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಚೂನಪ್ಪ ಪೂಜಾರಿ, ರಾಘವೇಂದ್ರ ನಾಯಕ, ಉರುಕುಂದಪ್ಪ, ನರಸಣ್ಣ, ಶಿವು, ಜೆ.ರಾಮುಬಾಬು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Comment