ದೇವಳದ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು ಕಾರಿಂಜೆ ಕ್ಷೇತ್ರದಲ್ಲಿ ಘಟನೆ

ಬಂಟ್ವಾಳ, ಫೆ.೧೦- ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರ ಕಾರಿಂಜ ದೇವಳದ ಕೆರೆಯಲ್ಲಿ ಸ್ನಾನಕ್ಕೆಂದು ಇಳಿದ ಯುವಕನೋರ್ವ ನೀರಲ್ಲಿ ಮುಳುಗಿ ದಾರುಣ ಮೃತಪಟ್ಟ ಘಟನೆ ನಿನ್ನೆ ಸಂಜೆ ನಡೆದಿದೆ. ಸಿದ್ದಕಟ್ಟೆ ಸಮೀಪದ ವಕ್ಕಾಡಿಗೋಳಿ ನಿವಾಸಿ ಸೇಸಪ್ಪ ಮಡಿವಾಳ ಅವರ ಪುತ್ರ ಸುಕೇಶ್(೨೬) ಮೃತಪಟ್ಟವರು.
ಸುಕೇಶ್ ಮಂಗಳೂರಿನ ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದು ನಿನ್ನೆ ಕೆಲಸಕ್ಕೆ ರಜೆ ಇದ್ದುದರಿಂದ ಇಬ್ಬರು ಸ್ನೇಹಿತರ ಜೊತೆ ಕಾರಿಂಜ ದೇವಸ್ಥಾನಕ್ಕೆ ಹೋಗಿದ್ದರು. ಅಲ್ಲಿ ದೇವರ ದರ್ಶನ ಪಡೆದು ಸಂಜೆಯ ವೇಳೆ ದೇವಳದ ಕೆರೆಯಲ್ಲಿ ಸ್ನಾನಕ್ಕೆಂದು ಇಳಿದ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಘಟನಾಸ್ಥಳಕ್ಕೆ ಪುಂಜಾಲಕಟ್ಟೆ ಪೊಲೀಸ್ ಠಾಣೆ ಎಸ್.ಐ. ಸೌಮ್ಯ ಹಾಗೂ ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಹಲವು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಅಗ್ನಿಶಾಮಕದಳ ಸಿಬ್ಬಂದಿ ಪತ್ತೆಹಚ್ಚಿ ಮೇಲಕ್ಕೆತ್ತಿದ್ದಾರೆ. ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಶವಮಹಜರು ನಡೆಸಲಾಗಿದೆ.

Leave a Comment