ದೇವರ ನಾ‌ಡಲ್ಲಿ ವರುಣನ ಮುನಿಸು : ಜನರ ನರಕಯಾತನೆ

ಕೊಚ್ಚಿ, ಆ. ೧೭- ದೇವರನಾಡು ಕೇರಳದಲ್ಲಿ ಮಳೆಯ ರೌದ್ರಾವತಾರ ಮುಂದುವರೆದಿದ್ದು, ರಾಜ್ಯದಾದ್ಯಂತ ಮತ್ತಷ್ಟು ಪ್ರವಾಹದ ಭೀತಿ ಎದುರಾಗಿದೆ. ಈವರೆಗೆ ನಡೆದ ಮಳೆಯ ಅಟ್ಟಹಾಸಕ್ಕೆ ಸತ್ತವರ ಸಂಖ್ಯೆ 167ಕ್ಕೇರಿದೆ. ರಾಜ್ಯದಾದ್ಯಂತ ತೆರೆಯಲಾಗಿರುವ ನಿರಾಶ್ರಿತ ಕೇಂದ್ರಗಳಿಗೆ 1.67 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ.

ಓಣಂ ಹಬ್ಬ ಜನತೆ ಕಂಗಾಲು

ಕೇರಳದ ರಾಜ್ಯದಾದ್ಯಂತ ಮುಂದಿನ ಶನಿವಾರ ಓಣಂ ಹಬ್ಬ. ಆದರೆ ಕಳೆದ ಹಲವಾರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಮುಂದಿನವಾರವು ಮುಂದುವರೆದರೆ ಓಣಂ ಹಬ್ಬದ ಸಂಭ್ರಮಕ್ಕೆ ತಣ್ಣೀರೆರಚಿದಂತಾಗುತ್ತದೆ. ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಹಬ್ಬದ ಸಿದ್ಧತೆಗೆ ತೊಡಕುಂಟಾಗಿದೆ.

ಕೇರಳದ ಬಹುತೇಕ ಪ್ರದೇಶಗಳು ಜಲಾವ್ರತಗೊಂಡಿದ್ದು, ಅಲ್ಲಲ್ಲಿ ಗುಡ್ಡ ಕುಸಿತ, ಮನೆಗಳು ಉರುಳುವುದು ಮುಂದುವರೆದಿವೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ನದಿಪಾತ್ರಗಳು ಉಕ್ಕಿ ಹರಿಯಲಾರಂಭಿಸಿದ್ದು, ಯಾವುದೇ ಹಂತದಲ್ಲಿ ಪ್ರವಾಹ ಭೀತಿ ಎದುರಾಗುವ ಸಾಧ್ಯತೆಗಳಿದ್ದು, ಆ ಪ್ರದೇಶಗಳ ನಿವಾಸಿಗಳನ್ನು ಸ್ಥಳಾಂತರಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.

kerala-raina

ಕೊಚ್ಚಿ ವಿಮಾನನಿಲ್ದಾಣ ಸಂಪೂರ್ಣ ನೀರಿನಿಂದ ತುಂಬಿ ಹೋಗಿದ್ದು, ಆ. 26ರವರೆಗೆ ಮುಚ್ಚಿರುವುದಾಗಿ ಸರ್ಕಾರ ಘೋಷಿಸಿದೆ. ರೈಲು ಹಳಿಗಳು ಜಲಾವೃತಗೊಂಡಿದ್ದು, ರಾಜಧಾನಿಗೆ ಆಗಮಿಸುವ-ನಿರ್ಗಮಿಸುವ ಎಲ್ಲ ರೈಲುಗಳ ಸೇವೆಯನ್ನು ತಕ್ಷಣದಿಂದಲೇ ರಾಜ್ಯದ 14 ಜಿಲ್ಲೆಗಳ ಪೈಕಿ 13 ಜಿಲ್ಲೆಗಳನ್ನು ಹೈ ಅಲರ್ಟ್ ಜಿಲ್ಲೆಗಳಾಗಿ ಘೋಷಿಸಲಾಗಿದೆ. 8 ಸಾವಿರ ಕೋಟಿ ರೂ.ಗಳಷ್ಟು ಆಸ್ತಿ-ಪಾಸ್ತಿಗಳು ಮತ್ತು ಬೆಳೆ ನಾಶವಾಗಿದೆ ಎಂದು ಅಂದಾಜಿಸಲಾಗಿದೆ. ಎಲ್ಲ 9 ಪ್ರವಾಹದ ನಿರ್ವಹಣಾ ನಿಲ್ದಾಣಗಳನ್ನು ಸೂಕ್ಷ್ಮ ಪ್ರವಾಹ ಪರಿಸ್ಥಿತಿ ಕೇಂದ್ರಗಳೆಂದು ಗುರುತಿಸಲಾಗಿದೆ.

kerala-rain-new3

ಮಳೆಯಿಂದ ತೀವ್ರ ಹಾನಿಗೊಳಗಾದ ಜನರನ್ನು ಸಂರಕ್ಷಿಸಲು ಎನ್‌ಜಿಒ ಸಂಸ್ಥೆಗಳೂ ಸೇರಿದಂತೆ ಸೇನಾ ವೈಮಾನಿಕ ನೌಕಾ ಕರಾವಳಿ ಪಡೆ ಎನ್‌ಡಿಆರ್‌ಎಫ್ ಸಂಸ್ಥೆಗಳು ರಕ್ಷಣಾ ಕಾರ್ಯವನ್ನು ಆರಂಭಿಸಿವೆ. ಪಟ್ಟಣಂ ತಿಟ್ಟ ಜಿಲ್ಲೆಯಲ್ಲಿ ಮಳೆಯ ಅವಾಂತರ ಮುಂದುವರೆದಿದೆ. ಅಲ್ಲಿನ ಜನರ ಪರಿಸ್ಥಿತಿ ಚಿಂತಾಜನಕವಾಗಿದೆ. ರಾಣಿ ಆರ್ನಮುಲ್ಲ ಮತ್ತು ಕೊಚ್ಚಿನ್ ಚೆಱ್ರಿ ಪಟ್ಟಣಗಳು ಮಳೆಯಿಂದ ನೆಂದು ತೊಪ್ಪೆಯಾಗಿವೆ.

ಯರ್ಣಾಕುಲಂ, ಪಟ್ಟಣಂ ತಿಟ್ಟ, ತ್ರಿಶೂರ್ ಜಿಲ್ಲೆಯಲ್ಲಿ 20 ಅಡಿಗಳಷ್ಟು ನೀರು ತುಂಬಿದ್ದು, ರಸ್ತೆಗಳು ಕೆರೆಯಂತಾಗಿವೆ. ಜನರು ತೆಪ್ಪಗಳನ್ನು ಬಳಸುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಕೊಚ್ಚಿಯ ರಸ್ತೆಗಳಲ್ಲಿ ನೀರು ತುಂಬಿದ್ದು, ಸೇನಾ ಪಡೆಗಳ ಯೋಧರು ಜನರನ್ನು ಸುರಕ್ಷ ಸ್ಥಳಗಳಿಗೆ ತೆಪ್ಪಗಳ ಮೂಲಕ ಕೊಂಡೊಯ್ಯುವ ಕಾರ್ಯಾಚರಣೆ ನಡೆಸಿದ್ದಾರೆ.

kerala-rain3

ಆಲಪ್ಪುಜ, ಇಡುಕ್ಕಿ, ಯರ್ಣಾಕುಲಂ, ವೈನಾಡು ಪ್ರದೇಶಗಳ ಜನರು ಆಹಾರಕ್ಕಾಗಿ ಪರದಾಡಲಾರಂಭಿಸಿದ್ದಾರೆ. ಈ ಮಧ್ಯೆ ಪ್ರತಿಪಕ್ಷವಾದ ಯುಡಿಎಫ್ ಪಕ್ಷವು ಪರಿಹಾರೋಪಾಯ ಕಾರ್ಯಾಚರಣೆಯನ್ನು ತೀವ್ರಗೊಳಿಸುವಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಆಗ್ರಹಪಡಿಸಿದೆ.

ತ್ರಿಶೂರ್, ಪಾಲಕ್ಕಾಡ್,ಎನ್.ಹೆಚ್ ರಸ್ತೆ, ಅಡೂರ್, ಚೆಂಗನೂರ್ ಪ್ರದೇಶಗಳ ಹೆದ್ದಾರಿಗಳಲ್ಲಿ ಗುಡ್ಡ ಕುಸಿತವಾಗುವ ಸೂಚನೆಗಳು ಕಂಡು ಬಂದಿದ್ದು, ಆ ಭಾಗದಲ್ಲಿ ವಾಹನ ಸಂಚಾರವನ್ನು ಪೊಲೀಸರು ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದಾರೆ. ಇಡುಕ್ಕಿ ಡ್ಯಾಂ 2,402 ಅಡಿಯಷ್ಟು ನೀರು ತುಂಬಿದ್ದು, ಕೆಳ ಪ್ರದೇಶಗಳಲ್ಲಿ ನೀರು ಹರಿಯುವ ಸಾಧ್ಯತೆಗಳಿದ್ದು, ಜನರನ್ನು ಸ್ಥಳಾಂತರಿಸಲಾಗಿದೆ.

kerala-rain2

ಮಳೆಯ ಅಟ್ಟಹಾಸಕ್ಕೆ ಕೇರಳ ಅಕ್ಷರಶಃ ನಡುಗಿ ಹೋಗಿದ್ದು, ಪರಿಹಾರೋಪಾಯಕ್ಕಾಗಿ ಕೇಂದ್ರದತ್ತ ಮುಖ ಮಾಡಿದೆ. ಪ್ರಧಾನಿ ನರೇಂದ್ರಮೋದಿ ಅವರಿಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ರಾಜ್ಯದಾದ್ಯಂತ ಮಳೆಯ ಅಟ್ಟಹಾಸದಿಂದಾಗಿರುವ ಅನಾಹುತಗಳ ಬಗ್ಗೆ ವಿವರಣೆ ನೀಡಿದ್ದಾರೆ.

ನೂರಾರು ಮಂದಿ ಎತ್ತರದ ಮಹಡಿಗಳ ಮೇಲೆ ನಿಂತಿದ್ದು, ಪ್ರಾಣ ರಕ್ಷಣೆಗಾಗಿ ಸಹಾಯ ಕೋರಿದ್ದಾರೆ. 14 ಜಿಲ್ಲೆಗಳ ಪೈಕಿ 13 ಜಿಲ್ಲೆಗಳಲ್ಲಿ ಮಳೆಯ ಅವಾಂತರದಿಂದ ಜನ ರೋಸಿಹೋಗಿದ್ದು, ಅಗತ್ಯ ಆಹಾರಕ್ಕಾಗಿ ಅಂಗಲಾಚಿದ್ದಾರೆ. ಕಣ್ಣೂರು, ವೈನಾಡು, ಕೊಚ್ಚಿಕೋಡ್, ಮಲ್ಲಾಪುರಂ, ಇಡುಕ್ಕಿ ಜಿಲ್ಲೆಗಳಲ್ಲಿ ಗುಡ್ಡ ಕುಸಿತವುಂಟಾಗಿದೆ ಎಂದು ಪ್ರಧಾನಿಯವರ ಗಮನಕ್ಕೆ ತಂದಿದ್ದಾರೆ.

kerala-rain-new1

ಈ ಮಧ್ಯೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮುಂದೆ ಕೈಗೊಳ್ಳಬೇಕಾದ ಪರಿಹಾರೋಪಾಯ ಕಾರ್ಯಗಳಿಗಾಗಿ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಮಳೆಯ ತೀವ್ರತೆಗೊಳಗಾಗಿರುವ ಪ್ರದೇಶಗಳಲ್ಲಿ 23ಕ್ಕೂ ಹೆಚ್ಚು ಹೆಲಿಕಾಪ್ಟರ್ ಸೇವೆಯನ್ನು ಬಳಸಿಕೊಂಡು ಜನರನ್ನು ರಕ್ಷಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಸರ್ಕಾರ 250ಕ್ಕೂ ಹೆಚ್ಚು ದೋಣಿಗಳನ್ನು ಬಳಸಿಕೊಂಡು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವಂತೆ ಕೂಡ ಆದೇಶಿಸಿದ್ದಾರೆ.

ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಿಎಂ ಮನವಿ

ರಾಜ್ಯದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಒಟ್ಟಾರೆ ಈವರೆಗೆ 167 ಮಂದಿ ಸಾವನ್ನಪ್ಪಿದ್ದಾರೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ತಿಳಿಸಿದ್ದಾರೆ. ಇಂದು ಬೆಳಿಗ್ಗೆ ಪತ್ರಿಕಾಗೋಷ್ಠಿ ನಡೆಸಿದ ಅವರು, ಆ. 8ರವರೆಗೆ 94 ಮಂದಿ ಮೃತಪಟ್ಟಿದ್ದರು, ಈವರೆಗೆ 167 ಮಂದಿ ಸಾವನ್ನಪ್ಪಿದ್ದಾರೆ. ಜನರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕೆಂದು ಜನರಲ್ಲಿ ಮನವಿ ಮಾಡಿದರು.

ಎನ್‌ಡಿಆರ್‌ಎಫ್ ತಂಡ ಈವರೆಗೆ 4 ಸಾವಿರ ಜನರನ್ನು ರಕ್ಷಣೆ ಮಾಡಿದೆ. ಭಾರತೀಯ ಸೇನೆಯ 6 ತಂಡಗಳು, ನೌಕಾಪಡೆಯ 42 ತಂಡಗಳೂ ಸೇರಿದಂತೆ ಎನ್‌ಡಿಆರ್‌ಎಫ್‌ನ ಒಟ್ಟು 26 ತಂ‌‌ಡಗಳು ಕಾರ್ಯಾಚರಣೆ ನಡೆಸಿವೆ ಎಂದು ತಿಳಿಸಿದರು. ಆ. 26ರವರೆಗೆ ಕೊಚ್ಚಿ ವಿಮಾನ ನಿಲ್ದಾಣವನ್ನು ಮುಚ್ಚುವಂತೆ ಆದೇಶಿಸಲಾಗಿದೆ ಎಂದು ಅವರು ಹೇಳಿದ್ದಾರೆ.

Leave a Comment