‘ದೇವರ ದರ್ಶನದಿಂದ ಅಂತರಂಗ ಶುದ್ಧಿ’

ಧರ್ಮಸ್ಥಳ, ಅ.೧೨- ಅಖಿಲ ಕರ್ನಾಟಕ ಜನಜಗೃತಿ ವೇದಿಕೆಯ ಮೂಲಕ ಮದ್ಯವರ್ಜನ ಶಿಬಿರಗಳು ನಿರಂತರವಾಗಿ ನಡೆಯುತ್ತಿವೆ. ರಾಜ್ಯದ ೩೦ ಜಿಲ್ಲೆಗಳಲ್ಲಿಯೂ ಕಾರ್ಯಕ್ರಮ ಸಂಯೋಜನೆ ಮಾಡುವುದರ ಮೂಲಕ ದುಶ್ಚಟಮುಕ್ತರಾಗಲು ಅವಕಾಶ ಕಲ್ಪಿಸಲಾಗಿದೆ. ವಾರ್ಷಿಕವಾಗಿ ೧೫೦ ಶಿಬಿರಗಳನ್ನು ನಡೆಸಿ ೧೦೦೦೦ ಮಂದಿಗೆ ಸಲಹೆ ಮತ್ತು ಚಿಕಿತ್ಸೆ ನೀಡಲಾಗುತ್ತಿದೆ. ಇವರಿಗೆ ಶಿಬಿರದ ಬಳಿಕ ಉತ್ತಮ ಜೀವನ ನಿರ್ವಹಣೆಗಾಗಿ ಮಾಸಿಕ ಸಭೆ, ಶತದಿನೋತ್ಸವ, ಅಭಿನಂದನಾ ಕಾರ್ಯಕ್ರಮ, ಪ್ರಮಾಣ ಪತ್ರ ವಿತರಣೆ, ಸಾಧಕರ ಸನ್ಮಾನ, ಪ್ರೇರಕರ ತರಬೇತಿ… ಹೀಗೆ ವಿವಿಧ ಕಾರ್ಯಕ್ರಮಗಳ ಮೂಲಕ ಮಗದೊಮ್ಮೆ ಕುಡಿತಕ್ಕೆ ಬಲಿಬೀಳದಂತೆ ನೋಡಿಕೊಳ್ಳುವ ವ್ಯವಸ್ಥೆಯಿದೆ. ಹೀಗೆ ಬೈಲಹೊಂಗಲ, ಕುಮುಟಾ, ಶ್ರೀನಿವಾಸಪುರ, ಮದ್ದೂರು, ಅರಕಲಗೂಡು, ರಾಮನಗರ, ಅರಸಿಕೆರೆ, ಬಾಗಲಕೋಟೆ, ಕೋಲಾರ, ಚನ್ನಪಟ್ಟಣ, ಶಿವಮೊಗ್ಗ ಕಡೆಯಿಂದ ಶಿಬಿರದಲ್ಲಿ ಭಾಗವಹಿಸಿದ ಒಟ್ಟು ೮೭೨ ಶಿಬಿರಾರ್ಥಿಗಳು ಶ್ರೀ ಕ್ಷೇತ್ರ ಧರ್ಮಸ್ಥಳದ ಮಹೋತ್ಸವದಲ್ಲಿ ಪಾನಮುಕ್ತರ ದೃಢ ಸಂಕಲ್ಪದ ಶತದಿನೋತ್ಸವ ಕಾರ್ಯಕ್ರಮದಲ್ಲಿ ಇದೇ ಅಕ್ಟೋಬರ್ ೧೦ ರಂದು ಭಾಗವಹಿಸಿ ದೇವರ ದರ್ಶನ ಪಡೆದು ಶತದಿನೋತ್ಸವ ಕಾರ್ಯಕ್ರಮದಲ್ಲಿ ಡಾ|ಡಿ.ವೀರೇಂದ್ರ ಹೆಗ್ಗಡೆಯವರ ಮಾಹಿತಿ ಪಡೆದರು. ಕಾರ್ಯಕ್ರಮದಲ್ಲಿ ಮಾತನಾಡಿದ ಹೆಗ್ಗಡೆಯವರು ‘ವ್ಯಸನಕ್ಕೆ ಜಾತಿಯಿಲ್ಲ. ಪಾನಮುಕ್ತರು ಭಾಗ್ಯವಂತರು, ನೇತ್ರಾವತಿ ಸ್ನಾನದಿಂದ ದೇಹ ಶುದ್ಧಿಗೊಂಡರೆ ದೇವರ ದರ್ಶನದಿಂದ ಅಂತರಂಗ ಶುದ್ಧಿಯಾಗುತ್ತದೆ. ಒಳ್ಳೆಯ ಬದುಕು, ಜೀವನ, ಕೆಲಸ, ಮನೆ, ಮಡದಿ, ಮಕ್ಕಳು, ಸಂಸ್ಕಾರ, ಸಂಸ್ಕೃತಿ… ಎಲ್ಲವೂ ಕುಡಿತವೆಂಬ ತಿಮಿಂಗಿಲ ನುಂಗಿದಂತೆ. ಸರ್ವಸ್ವ ಕಳೆದುಕೊಂಡ ನಿಮಗೆ ಭರವಸೆ ತುಂಬುವ ಕೆಲಸ ಮಾಡುವ ಪ್ರಯತ್ನವೇ ಇಂದಿನ ಕಾರ್ಯಕ್ರಮದ್ದಾಗಿದೆ. ಅಮಲಿನ ಭ್ರಮೆಯಲ್ಲಿ ಬರುವ ವಿಕಾರ, ವಿಕೃತಿ, ವಿಶೇಷ ಹುಚ್ಚು ಧೈರ್ಯ ನಮ್ಮನ್ನು ಕಾಪಾಡುವುದಿಲ್ಲ. ದೇವರು ನಮಗೆ ನೀಡಿದ ಇದೇ ಜೀವನದಲ್ಲಿ ಸುಖ ಅನುಭವಿಸಲು ದೇವರಿಂದ ಬಂದ ಕರೆಯೇ ಮದ್ಯವರ್ಜನ ಶಿಬಿರ ಆಗಿದೆ’ ಎಂದ ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆಯವರು ಅಭಿಪ್ರಾಯ ಪಟ್ಟರು. ಪಾನಮುಕ್ತರಿಗೆ ಬ್ಯಾಡ್ಜ್ ವಿತರಿಸಿ, ಪೋಟೋ ಕ್ಲಿಕ್ಕಿಸಿ ಸಂತಸ ಹಂಚಿಕೊಂಡರು. ಉತ್ತಮ ಸಾಧನೆಯೊಂದಿಗೆ ತಮ್ಮ ಹಾಗೆಯೇ ವ್ಯಸನಕ್ಕೆ ಭಾದಿತರಾಗಿರುವ ಕುಟುಂಬಗಳ ರಕ್ಷಣೆಯ ಕೆಲಸ ಆಗಬೇಕಾಗಿದೆ. ತಾವು ಉತ್ತಮರೆನಿಸಿಕೊಂಡು ಇತರ ೨೫ ಮಂದಿಯನ್ನು ಶಿಬಿರಕ್ಕೆ ಸೇರಿಸಿದರೆ ‘ಜಾಗೃತಿ ಮಿತ್ರ’ ೫೦ ಮಂದಿಯನ್ನು ಸೇರಿಸಿದರೆ ‘ಜಾಗೃತಿ ಅಣ್ಣ’ ಎನ್ನುವ ಬಿರುದು ನೀಡಿ ಗೌರವಿಸಲಾಗುವುದು ಎಂದು ಹೆಗ್ಗಡೆಯವರು ಪ್ರೇರೇಪಿಸಿದರು.

ಕಾರ್ಯಕ್ರಮದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರುಗಳು, ಮೇಲ್ವಿಚಾರಕರು, ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ್, ಶಿಬಿರಾಧಿಕಾರಿ ಮನೋಹರ್, ನಂದಕುಮಾರ್ ಉಪಸ್ಥಿತರಿದ್ದರು. ಪಾನಮುಕ್ತ ನವಜೀವನ ಸದಸ್ಯರಿಗೆ ವಿಶೇಷ ದೇವರ ದರ್ಶನ ವ್ಯವಸ್ಥೆ ಮಾಡಲಾಯಿತು.

Leave a Comment