ದೇವರಾಗಿದ್ದಾನೆ ಇಲ್ಲಿ ‘ಲಿಫ್ಟ್‌ಮ್ಯಾನ್

ಕನ್ನಡ ಚಿತ್ರರಂಗ ಕಂಡ ಅಪ್ರತಿಮ ಕಲಾವಿದರಾದ ಸುಂದರಾಜ್ ಅವರ ಚಿತ್ರ ಜೀವನದಲ್ಲಿ ಕೈಹಿಡಿದು ಮೇಲೆತ್ತುವ ‘ಲಿಫ್ಟ್‌ಮ್ಯಾನ್ ದೇವರಾಗಿದ್ದಾನೆ.
ಹೀಗೆಂದು ಅವರ ನಂಬಿಕೆ ‘ಲಿಫ್ಟ್‌ಮ್ಯಾನ್ ಅವರ ೨೦೦ನೇ ಚಿತ್ರವಾಗಿದ್ದು ಆಕಸ್ಮಿಕವಾದರೂ ಮಾಗಿದ ಕಲಾವಿದರಾಗಿ ದಾಖಲಿಸಿಕೊಳ್ಳಲು ಅಪರೂಪದ ಅಪೂರ್ವ ಅವಕಾಶ ಎನ್ನುತ್ತಾರೆ.

* ನಿಮಗೆ ‘ಲಿಫ್ಟ್‌ಮ್ಯಾನ್ ಸಿನೆಮಾ?
ಇಷ್ಟು ವರ್ಷಗಳ ಕಾಲ ನನ್ನೊಳಗೆ ಎಲ್ಲೋ ಕುಳಿತಿದ್ದ ಕಲಾವಿದ ‘ಲಿಫ್ಟ್‌ಮ್ಯಾನ್ ಸಿನೆಮಾ ಮೂಲಕ ಎದ್ದು ಮೇಲೆ ಬರ್‍ತಾನೆ. ಎಷ್ಟೋ ವರ್ಷಗಳಿಂದ ನನ್ಗೆ ಮುಖ್ಯ ಪಾತ್ರಗಳೇ ಸಿಕ್ಕಿರಲಿಲ್ಲ ಬಹುಶಃ ೮೦ರ ದಶಕದಲ್ಲಿ ಒಂದಾನೊಂದು ಕಾಲದಲ್ಲಿ, ಚಂದನದ ಗೊಂಬೆ, ತಪ್ಪಿದ ತಾಳ, ಬಂಗಾರದ ಜಿಂಕೆ, ಸಂಕ್ರಾಂತಿಯಂತಹ ಚಿತ್ರಗಳಾದ ನಂತರ, ಸುಮಾರು ೧೯೮೫ರ ನಂತರ ನಾಯಕ, ಖಳನಾಯಕನ ಪಾತ್ರಗಳೇ ಸಿಗದೆ ಬರೀ ನಾಮಕಾವಸ್ತೆ ಇರುವಂಥ ಪೋಷಕ ಪಾತ್ರಗಳಲ್ಲಿ ನಟಿಸುವಂತಾಗಿತ್ತು. ಆದ್ರೆ ‘ಲಿಫ್ಟ್‌ಮ್ಯಾನ್ನಲ್ಲಿ ಕೇಂದ್ರೀಯ ಪಾತ್ರವಿದೆ. ನನ್ನ ಸಿನೆಮಾ ವೃತ್ತಿ ಜೀವನದಲ್ಲಿ ಇಳಿಮುಖ ಆಗ್ಹೋಯ್ತು, ಪಿಕ್ಚರ್‌ನಲ್ಲಿ ನಟಿಸೋದೆ ಬಿಟ್ಬಿಟ್ಟಿದ್ದೆ, ಒಬ್ಬ ವ್ಯಕ್ತಿಗೋಸ್ಕರ ಮುಂದೇನಾಗುತ್ತೆ? ಏನು ಅನಾಹುತವಾಗುತ್ತೆ? ಅನ್ನೋದನ್ನು ಯೋಚಿಸದೆ ಕೆಲಸಮಾಡಿದ್ದೆ. ಅದೆಲ್ಲವನ್ನು ಕ್ರೂಢಿಕರಿಸಿ ನೋಡಿದಾಗ ಈ ಚಿತ್ರದಲ್ಲಿನ ಪಾತ್ರ ನನ್ನ ಮನಮುಟ್ಟಿತು. ಒಂದೂವರೆ ಗಂಟೆ ಚಿತ್ರವನ್ನು ಹೆಗಲಮೇಲೆ ಹೊತ್ತೊಯ್ಯುವ ಜವಾಬ್ದಾರಿ ನನ್ಗೆ ಸಿಕ್ತು. ಈಗಿನ ಸಿನೆಮಾ ಪೀಳಿಗೆ ನಿರ್ದೆಶಕ ಕಾರಂಜಿ ಶ್ರೀಧರ್ ಮತ್ತು ನಿರ್ಮಾಪಕ ರಾಮ್ ನಾಯಕ್ ಈ ಪಾತ್ರವನ್ನು ನನ್ಗೆ ಗಿಫ್ಟ್ ಆಗಿ ಕೊಟ್ಟಿದ್ದಾರೆ ಖಂಡಿತಾ ನಾನು ಅವ್ರಿಗೆ ಗಿಫ್ಟ್ ಆಗಿ ಪಾತ್ರ ಮಾಡಿಲ್ಲ.
* ಚಿತ್ರಬದುಕಿನ ೩೧ ವರ್ಷಗಳ ನಂತರ ‘ಲಿಫ್ಟ್‌ಮ್ಯಾನ್  ಸಿಗಬಹುದೆನ್ನುವ ನಿರೀಕ್ಷೆ ಇತ್ತಾ?
ಖಂಡಿತ ಇಲ್ಲ. ಕನಸಿರಲಿ ಯೋಚನೆಯನ್ನೂ ಮಾಡಿರಲಿಲ್ಲ. ನನ್ನ ವಯಸ್ಸಿನವರಿಗೆ ಇನ್ನು ಅವಕಾಶಗಳು ಮುಗೀತು ಅಂದ್ಕೋಡಿದ್ದೆ. ಅನಂತ್‌ನಾಗ್ ಅವ್ರು ಹೇಳಿದ್ದ ನಾಯಕನಾಗಿದ್ದವನಿಗೆ ವಯಸ್ಸಾದಾಗ ಪೋಷಕ ಪಾತ್ರ ಸಿಗುತ್ತೆ ಅದೇ ಮೊದಲೇ ಪೋಷಕನಾಗಿದ್ದವನಿಗೆ ಯಾವ ಪಾತ್ರ ಸಿಗುತ್ತೆ? ಎನ್ನುವ ಮಾತು ತುಂಬಾನೇ ಸರಿಯಲ್ವಾ? ಕನ್ನಡದಲ್ಲಿ ಮಾತ್ರವಲ್ಲ ಇದು ಎಲ್ಲಾ ಭಾಷೆಯ ಚಿತ್ರಂಗದಲ್ಲೂ ನಡೆಯುತ್ತೆ. ಪೋಷಕ ಪಾತ್ರದಲ್ಲಿ ನಟಿಸುತ್ತಿದ್ದವನಿಗೆ ‘ಲಿಫ್ಟ್ ಮ್ಯಾನ್ ಚಿತ್ರದಲ್ಲಿರುವಂಥ ಪ್ರಮುಖ ಪಾತ್ರ ಸಿಗೋದು ತುಂಬಾ ಕಷ್ಟ. ಈ ದೃಷ್ಟಿಯಿಂದ ಕನ್ನಡ ಚಿತ್ರೋದ್ಯಮದವ್ರು ನನ್ಗೆ ತುಂಬ ಪ್ರೀತಿ ಕೊಟ್ಬಿಟ್ರು.
*ಜನಕ್ಕೆ ‘ಲಿಫ್ಟ್‌ಮ್ಯಾನ್ ಚಿತ್ರ ಹೇಗೆ ಇಷ್ಟವಾಗುತ್ತೆ?
ಹೊಟೇಲ್ ಬಾಯ್, ಬಸ್ ಕಂಡಕ್ಟರ್, ಆಟೋ ರಿಕ್ಷಾ ಡ್ರೈವರ್ ಹೀಗೆ ಯಾರನ್ನು ನಾವು ಜನ ಸಾಮಾನ್ಯರು ಎನ್ನುತ್ತೇವೊ ಅವ್ರು ಸುಂದರ ಬದುಕಿನ ಕನಸು ಕಾಣುತ್ತಲೇ ಇರುತ್ತಾರೆ ಹೀಗಾಗಿ ಕಮರ್ಷಿಯಲ್ ಸಿನೆಮಾ ನೋಡಿ ಮನರಂಜನೆ ಪಡ್ಕೊಂಡು ಹೋಗ್ತಾರೆ. ಆದ್ರೆ ‘ಲಿಪ್ಟ್‌ಮ್ಯಾನ್ನಲ್ಲಿ ತಮ್ಮ ಜೀವನವನ್ನೇ ನೋಡ್ತಾರೆ.
* ಮಗಳು ಮೇಘನಾರಾಜ್ ಕನ್ನಡ ಚಿತ್ರರಂಗದಲ್ಲಿ  ಯಶಸ್ವಿಯಾಗಿರೋದು ಏನೆನಿಸ್ತಿದೆ?
ತುಂಬಾ ಸಂತೋಷವಿದೆ. ಯಶಸ್ಸೆನ್ನುವುದು ಬಿಸಿಲ್ಗುದುರೆ ಇದ್ದಹಾಗೆ ಮಾನಸಿಕ ಏರಿಳಿತಗಳಿಗೆ ಒಳಗಾಗದೆ ಪ್ರಾಮಾಣಿಕವಾಗಿ ನಮ್ಮ ಕೆಲಸ ನಾವ್ ಮಾಡ್ತಾ ಹೋಗಬೇಕೆನ್ನುವುದನ್ನು ಆರಂಭದಲ್ಲೇ ಅವ್ಳಿಗೆ ಹೇಳಿದ್ದೆ. ಅವ್ಳು ಮಾಡ್ತಿರುವ ಒಳ್ಳೆ ಸಿನೆಮಾಗಳು, ಕೆಲಸಗಳು ಮತ್ತು ಅಭಿನಯ ನೋಡಿದಾಗ ತುಂಬಾನೇ ಖುಷಿಯಗುತ್ತೆ. ಅಪ್ಪ-ಅಮ್ಮನಿಗೆ ಒಳ್ಳೆ ಹೆಸರು ತಂದಿದ್ದಾಳೆ.
* ಇಷ್ಟು ವರ್ಷಗಳ ಸಿನೆಮಾ ಪಯಣವನ್ನು ಹಿಂದಿರುಗಿ ನೋಡಿದಾಗ?
ತುಂಬಾನೇ ಏರಿಳಿತಗಳನ್ನು ನೋಡಿದ್ದೇನೆ, ಅವಮಾನಗಳನ್ನು ಸಹಿಸಿಕೊಂಡಿದ್ದೇನೆ, ಸಿಟ್ಟು ಬಂದು ಜಗಳವಾಡಿದ್ದೇನೆ, ತಪ್ಪು ಮಾಡಿದವರನ್ನು ಬೈದಿದ್ದೇನೆ. ‘ಲಿಫ್ಟ್‌ಮ್ಯಾನ್ ಚಿತ್ರದಲ್ಲಿ ಮಾಡಿದಾಗ ಮಾಗಿದ್ದೇನೆ.
* ನಿರ್ದೇಶಕ ಅಥವಾ ನಿರ್ಮಾಪಕನಾಗುವ ಆಸೆ ಇರ್‍ಲಿಲ್ವಾ?
ಇತ್ತು ಆದ್ರೆ ನನ್ಗೆ ಅವಕಾಶಗಳು ಬಂದಾಗ ಎಲ್ಲವನ್ನೂ ಬೇರೆಯವರಿಗೆ ಬಿಟ್ಕೊಟ್ಟಿದ್ದೇನೆ. ಉದಾಹರಣೆ ನಾಗಾಭಾರಣ ಅವರಂತಹವರಿಗೆ ಸಿನೆಮಾ ನಿರ್ದೇಶನ ಮಾಡುವುದಕ್ಕೇ ಒಬ್ಬ ನಿರ್ಮಾಪಕರನ್ನು ಹುಡುಕಿಕೊಟ್ಟೆ ಆದ್ರೆ ಆ ಸಿನೆಮಾದಲ್ಲಿ ನಟಿಸುವುದಕ್ಕೇ ಕಾರಣಾಂತರಗಳಿಂದ ನನ್ಗೇ ಆಗ್ಲಿಲ್ಲ. ನಾಟಕರಂಗದಲ್ಲಿ ಕೊಟ್ಟ ಮಾತು ಉಳಿಸಿಕೊಳ್ಳಬೇಕೆಂದು ಮೂರ್‍ನಾಲ್ಕು ಸಿನೆಮಾ ಬಿಟ್ಟಿದ್ದೆ ಆಗ ನನ್ನ ಜಾಗದಲ್ಲಿ ಚರಣ್ ರಾಜ್ ಬಂದು ತುಂಬಿಕೊಂಡ. ಸಿನೆಮಾದಲ್ಲಿ ನನ್ನ ವೃತ್ತಿಯೇ ನಿಂತಂತಾಯ್ತು ಹೀಗೆ ಎಲ್ಲಾ ಹೋಯ್ತು ಆದ್ರೆ ಮತ್ತೆ ಕಾಲಾವಿದನಾಗಿ ಸಾಭೀತು ಮಾಡಿಕೊಳ್ಳಲು ಈಗ ದೇವ್ರು ‘ಲಿಫ್ಟ್‌ಮ್ಯಾನ್ ಕೊಟ್ನಲ್ಲಾ…
* ಈಗಿನ ಕನ್ನಡ ಚಿತ್ರರಂಗ ಹೇಗನ್ನಿಸ್ತಿದೆ?
ಕನ್ನಡ ಚಿತ್ರರಂಗ ಆರಂಭವಾಗಿ ನಾನು ಮೂರನೇ ಪೀಳಿಗೆಯವನಾಗಿ ಬಂದವನು ಈಗ ಆರನೇ ಪೀಳಿಗೆ ಓಡ್ತಿದೆ. ಕನ್ನಡ ಚಿತ್ರರಂಗ ಸಂಮೃದ್ಧಿಯಾಗಿ ಬೆಳೆದಿದೆ ೩೦೦ ಚಿತ್ರಮಂದಿರಗಳಲ್ಲಿ ಸಿನೆಮಾಗಳ ಬಿಡುಗಡೆ ಮಾಡುವ ಅವಕಾಶ ಇದೆ. ಕೋಟಿಕೋಟಿ ವ್ಯವಹಾರ ನಡೀತಾ ಇದೆ, ತಾಂತ್ರಿಕವಾಗಿ ಉನ್ನತವಾಗಿದೆ ಎಲ್ಲನೂ ಆಗಿದೆ ಆದ್ರೆ ಒಳ್ಳೆ ಸಿನೆಮಾಗಳು ಬರ್‍ಬೇಕು. ನಾವೆಲ್ಲಾ ಒಂದೂವರೆ ಎರಡು ಲಕ್ಷದ ಬಜೆಟ್‌ನಲ್ಲಿ ಕಾಡು ಮತ್ತು ಚೋಮನದುಡಿಯಂತಹ ಚಿತ್ರಗಳನ್ನು ಮಾಡಿದ್ವಿ, ಆದ್ರೆ ಇವತ್ತಿಗೆ ಆ ಮೊತ್ತ ಪೋಷಕ ಕಲಾವಿದನ ಒಂದು ದಿನದ ಸಂಭಾವನೆಯಾಗಿದೆ.
_ ಕೆ.ಬಿ. ಪಂಕಜ

Leave a Comment