ದೇವನಹಳ್ಳಿ ಪ್ರಕೃತಿ ರೆಸಾರ್ಟ್ ಗೆ ಕಾಂಗ್ರೆಸ್ ಶಾಸಕರು ಸ್ಥಳಾಂತರ

ಬೆಂಗಳೂರು , ಜು 16- ಕಳೆದ ನಾಲ್ಕು ದಿನಗಳಿಂದ ಯಶವಂತಪುರದ ತಾಜ್ ವೀವಂತ್ ಹೊಟೇಲಿನಲ್ಲಿ ವಾಸ್ತವ್ಯ ಹೂಡಿದ್ದ ಕಾಂಗ್ರೆಸ್ ಶಾಸಕರನ್ನು ದೇವನಹಳ್ಳಿಯ ಪ್ರಕೃತಿ ರೆಸಾರ್ಟ್ ಗೆ ಸ್ಥಳಾಂತರ ಮಾಡಲಾಗಿದೆ.
ನಗರದ ಮಧ್ಯಭಾಗದ ಜನನಿಬಿಡ ಯಶವಂತಪುರದ ತಾಜ್ ಹೋಟೇಲಿನಲ್ಲಿದ್ದ 35 ಕಾಂಗ್ರೆಸ್ ಶಾಸಕರ ಕೊಠಡಿಗಳನ್ನು ತೆರವುಗೊಳಿಸಿ ಪ್ರಕೃತಿ ರೆಸಾರ್ಟ್ ಗೆ ಬದಲಾಯಿಸಿಕೊಂಡಿದ್ದಾರೆ. ಶಾಸಕರಿಗೆ ಏಕಾಂತ ಹಾಗೂ ಭದ್ರತೆ ದೃಷ್ಟಿಯಿಂದ ಸ್ಥಳಾಂತರ ಮಾಡಲಾಗಿದೆ ಎನ್ನಲಾಗಿದೆ.
ಇಂದು ಬೆಳಗ್ಗೆ ತಾಜ್ ಹೋಟೆಲಿನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ನಾಯಕರ ಸಭೆಯಲ್ಲಿ ಗುರುವಾರ ವಿಶ್ವಾಸ ಮತ ಸಂದರ್ಭದಲ್ಲಿ ಕೈಗೊಳ್ಳಬೇಕಾದ ನಿರ್ಣಯಗಳು ಹಾಗೂ ಸುಪ್ರೀಂ ಕೋರ್ಟ್ ನ ತೀರ್ಪಿನ ಬಳಿಕ ಚರ್ಚೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ತೀರ್ಮಾನಿಸಲಾಗಿದೆ.ಅಲ್ಲಿಯವರೆಗೆ ಕಾಂಗ್ರೆಸ್ ಶಾಸಕರು ಒಗ್ಗಟ್ಟು ಪ್ರದರ್ಶಸಲು ಸಭೆಯಲ್ಲಿ ಎಲ್ಲಾ ಶಾಸಕರಿಗೆ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮನವಿ ಮಾಡಿದರು.
ಇಂದು ಬೆಳಗ್ಗೆ ತಾಜ್ ಹೊಟೇಲಿನಿಂದ ಸಚಿವ ಜಮೀರ್ ಅಹಮದ್ ಖಾನ್ ಅವರ ನ್ಯಾಷನಲ್ ಟ್ರಾವೆಲ್ಸ್ ನ ಎರಡು ಬಸ್ ಗಳಲ್ಲಿ ಶಾಸಕರನ್ನು ಕರೆದುಕೊಂಡು ದೇವನಹಳ್ಳಿಗೆ ತೆರಳಲಾಯಿತು. ಸ್ವತಃ ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ,ಉಪ ಮುಖ್ಯಮಂತ್ರಿ ಪರಮೇಶ್ವರ್ ಶಾಸಕರ ಜೊತೆ ಪ್ರಕೃತಿ ರೆಸಾರ್ಟ್ ಗೆ ಬಸ್ಸಿನಲ್ಲಿ ತೆರಳಿದರು.

ಗುರುವಾರ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸದನದಲ್ಲಿ ವಿಶ್ವಾಸಮತ ಯಾಚನೆ ಮಾಡುತ್ತಿರುವ ಹಿನ್ನಲೆಯಲ್ಲಿ ಮೂರು ದಿನಗಳು ಶಾಸಕರು ಪ್ರಕೃತಿ ರೆಸಾರ್ಟ್ ನಲ್ಲಿಯೇ ವಾಸ್ತವ್ಯ ಹೂಡಲಿದ್ದು,ಜುಲೈ 18ಕ್ಕೆ ವಿಧಾನ ಸಭಾ ಕಲಾಪಕ್ಕೆ ರೆಸಾರ್ಟ್ ನಿಂದಲೇ ಒಟ್ಟಾಗಿ ಬಸ್ಸಿನಲ್ಲಿ ತೆರಳಲಿದ್ದಾರೆ.
ಪ್ರಕೃತಿ ರೆಸಾರ್ಟ್ ನಲ್ಲಿ ಕಾಂಗ್ರೆಸ್ ಶಾಸಕರಿಗೆ ಮಧ್ಯಾಹ್ನ ಭೂರಿ ಭೋಜನದ ವ್ಯವಸ್ಥೆ ಮಾಡಲಾಗಿದ್ದು,
ನಾಟಿಕೋಳಿ ಸಾಂಬಾರ್, ಮುದ್ದೆಯ ಊಟ,ಉತ್ತರ ಕರ್ನಾಟಕದ ಊಟದ ವ್ಯವಸ್ಥೆ ಸಿದ್ದಪಡಿಸಿದ್ದಾರೆ ಎನ್ನಲಾಗಿದೆ.

Leave a Comment