‘ದೇಯಿ ಬೈದೆತಿ’ ಅಪಮಾನ ಪ್ರಕರಣ

ಬಂಧಿತನ ಜಾಮೀನು ಅರ್ಜಿ ತಿರಸ್ಕೃತ

ಪುತ್ತೂರು, ಅ.೧೨- ತುಳುನಾಡಿನ ವೀರಪುರುಷರಾದ ಕೋಟಿ ಚೆನ್ನಯರ ತಾಯಿ ದೇಯಿ ಬೈದೆತಿ ಮೂರ್ತಿಗೆ ಅವಮಾನ ಮಾಡಿದ ಆರೋಪದಲ್ಲಿ ಪೊಲೀಸರಿಂದ ಬಂಧಿಸಲ್ಪಟ್ಟು ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪುತ್ತೂರಿನ ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಿನ್ನೆ ತಿರಸ್ಕರಿಸಿದೆ.

ನ್ಯಾಯಾಂಗ ಬಂಧನದಲ್ಲಿರುವ ಆರೋಪಿ, ಪುತ್ತೂರು ತಾಲ್ಲೂಕಿನ ಈಶ್ವರಮಂಗಲ ನಿವಾಸಿ ಮಹಮ್ಮದ್ ಹನೀಫ್(೩೭) ವಕೀಲರೊಬ್ಬರ ಮೂಲಕ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಪುತ್ತೂರಿನ ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ರಾಮಚಂದ್ರ ಎಂ ಅವರು ಜಾಮೀನು ಅರ್ಜಿಯನ್ನು ತಿರಸ್ಕರಿಸಿ ಆದೇಶ ನೀಡಿದ್ದಾರೆ.

ಕೋಟಿ ಚೆನ್ನಯರ ಹುಟ್ಟೂರಾದ ಪುತ್ತೂರು ತಾಲೂಕಿನ ಪಡುಮಲೆ ವ್ಯಾಪ್ತಿಯಲ್ಲಿ ಬರುವ ಬಡಗನ್ನೂರು ಗ್ರಾಮದ ಮುಡ್ಪಿನಡ್ಕದಲ್ಲಿ ಅರಣ್ಯ ಇಲಾಖೆಯ ವತಿಯಿಂದ ದೇಯಿ ಬೈದೆತಿ ಹೆಸರಿನಲ್ಲಿ ಔಷಧಿ ವನ ನಿರ್ಮಾಣಗೊಂಡಿತ್ತು. ಆರೋಪಿಯು ಔಷಧಿ ವನದೊಳಗಿರುವ ದೇಯಿ ಬೈದೆತಿಯ ಕುಟೀರದಲ್ಲಿರುವ ದೇಯಿ ಬೈದೆತಿ ಮೂರ್ತಿಯ ಪಕ್ಕದಲ್ಲಿ ಕುಳಿತು ಮೂರ್ತಿಯ ಎದೆಯ ಭಾಗವನ್ನು ಮುಟ್ಟಿ ಅಶ್ಲೀಲ ಭಂಗಿಯ ಭಾವಚಿತ್ರ ತೆಗೆದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದ. ಈ ಘಟನೆಗೆ ಸಂಬಂಧಿಸಿ ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಕಾರ್ಯದರ್ಶಿ ಕೇಶವ ಪೂಜಾರಿ ಬೆದ್ರಾಳ ಅವರು ನೀಡಿದ ದೂರಿನಂತೆ ಸಂಪ್ಯ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದರು.

ಬಂಧಿತ ಆರೋಪಿಯನ್ನು ಪೊಲೀಸರು ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ವೇಳೆ ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು.

ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಹನೀಫ್ ಈ ಹಿಂದೆ ವಕೀಲರೊಬ್ಬರ ಮೂಲಕ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಪುತ್ತೂರಿನ ಹಿರಿಯ ವಿಭಾಗದ ಸಿವಿಲ್ ಹೆಚ್ಚುವರಿ ನ್ಯಾಯಾಲಯ ಆತನ ಜಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಯು ತನ್ನ ಪರ ವಕೀಲರೊಬ್ಬರ ಮೂಲಕ ಪುತ್ತೂರಿನ ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ. ಇದೀಗ ಈ ಜಾಮೀನು ಅರ್ಜಿಯೂ ತಿರಸ್ಕೃತಗೊಂಡಿದೆ.

Leave a Comment