ದೇಗುಲದಲ್ಲಿ ಹುಂಡಿ ಕಳವು

ಮಧುಗಿರಿ, ಫೆ. ೮- ದುಷ್ಕರ್ಮಿಗಳು ಅಶ್ವತ್ಥಕಟ್ಟೆ ಮತ್ತು ಮಾರಮ್ಮದೇವಿ ದೇವಸ್ಥಾನದ ಹುಂಡಿಗಳನ್ನು ಹೊಡೆದು ಹಣವನ್ನು ದೋಚಿಕೊಂಡು ಪರಾರಿಯಾಗಿರುವ ಘಟನೆ ತಾಲ್ಲೂಕಿನ ಪುರವರ ಹೋಬಳಿ ವೀರನಾಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ವೀರನಾಗೇನಹಳ್ಳಿ ಗ್ರಾಮದ ಅಶ್ವತ್ಥಕಟ್ಟೆ ಮತ್ತು ಮಾರಮ್ಮದೇವಿ ದೇವಸ್ಥಾನಗಳಿಗೆ ನುಗ್ಗಿದ ಕಳ್ಳರು ಹುಂಡಿಗಳನ್ನು ಹೊಡೆದು ಹಣವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ದೇವಸ್ಥಾನಗಳ ಹುಂಡಿಗಳನ್ನು ಸುಮಾರು 5 ವರ್ಷಗಳಿಂದ ತೆರೆದಿರಲಿಲ್ಲ. ಜತೆಗೆ ಈಚೆಗೆ ಗ್ರಾಮದಲ್ಲಿ ನಡೆದ ದೊಡ್ಡ ಮಾರಮ್ಮನ ಜಾತ್ರಾ ಮಹೋತ್ಸವದಲ್ಲಿ ಹೆಚ್ಚಿನ ಕಾಣಿಕೆ ಸಂಗ್ರಹವಾಗಿತ್ತು. ಇದನ್ನು ಗಮನಿಸಿರುವ ಕಳ್ಳರು ಹುಂಡಿಯನ್ನು ತೆಗೆದುಕೊಂಡು ಹೋಗಿ ವೆಂಕಟರಾಮಪ್ಪ ಅವರ ಜಮೀನಿನ ಸೀಮೆಜಾಲಿಗಿಡದ ಮರೆಯಲ್ಲಿ ಹುಂಡಿಯನ್ನು ಹೊಡೆದು ಹಣವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ಗ್ರಾಮಸ್ಥರು ದೂರು ನೀಡಿದ್ದಾರೆ.

ಈ ಸಂಬಂಧ ಕೊಡಿಗೇನಹಳ್ಳಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Leave a Comment