ದೆಹಲಿ ಹಿಂಸಾಚಾರ: ಲೆಫ್ಟಿನೆಂಟ್ ಗವರ್ನರ್, ಮುಖ್ಯಮಂತ್ರಿ ಜೊತೆ ಅಮಿತ್ ಶಾ ಸಭೆ

ನವದೆಹಲಿ, ಫೆ 25 – ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಪರ ಮತ್ತು ವಿರೋಧಿ ಪ್ರತಿಭಟನಾಕಾರರ ನಡುವೆ ಹಿಂಸಾತ್ಮಕ ಘರ್ಷಣೆಗಳು ನಡೆದ ಒಂದು ದಿನದ ನಂತರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ರಾಜಕೀಯ ಮುಖಂಡರೊಂದಿಗೆ ಸಭೆ ನಡೆಸಿದರು.

ದೆಹಲಿ ಪೊಲೀಸ್ ಆಯುಕ್ತ ಅಮುಲ್ಯ ಪಟ್ನಾಯಕ್, ಕಾಂಗ್ರೆಸ್ ಮುಖಂಡ ಸುಭಾಷ್ ಚೋಪ್ರಾ, ಬಿಜೆಪಿ ದೆಹಲಿ ಘಟಕದ ಅಧ್ಯಕ್ಷ ಮನೋಜ್ ತಿವಾರಿ ಮತ್ತು ಬಿಜೆಪಿ ಮುಖಂಡ ರಾಮ್‌ವೀರ್ ಬಿಧುರಿ ಅವರಲ್ಲದೆ, ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ, ಗುಪ್ತಚರ ಬ್ಯೂರೋ ನಿರ್ದೇಶಕ ಅರವಿಂದ್ ಕುಮಾರ್ ಸಭೆಯಲ್ಲಿ ಭಾಗವಹಿಸಿದ್ದರು.

ದೆಹಲಿಯ ಪ್ರಸ್ತುತ ಪರಿಸ್ಥಿತಿ ಕುರಿತು ಚರ್ಚಿಸಲು ಗೃಹ ಸಚಿವರು ಸಭೆ ಕರೆದಿದ್ದರು ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈಶಾನ್ಯ ದೆಹಲಿಯಲ್ಲಿ ಹಿಂಸಾಚಾರದ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಗೃಹ ಸಚಿವರು ರಾಷ್ಟ್ರೀಯ ರಾಜಧಾನಿಯಲ್ಲಿನ ಕಾನೂನು ಸುವ್ಯವಸ್ಥೆ ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ ಈ ಸಭೆ ಕರೆಯಲಾಗಿತ್ತು.

ಈ ಮಧ್ಯೆ, ಈಶಾನ್ಯ ದೆಹಲಿಯ ಮೌಜ್‌ಪುರ ಮತ್ತು ಬ್ರಹ್ಮಪುರಿ ಪ್ರದೇಶದಲ್ಲಿ ಮಂಗಳವಾರ ಬೆಳಿಗ್ಗೆ ಮತ್ತೆ ಕಲ್ಲು ತೂರಾಟದ ಘಟನೆಗಳು ವರದಿಯಾಗಿದ್ದು, ಸೋಮವಾರದ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ ಐದಕ್ಕೆ ಏರಿದೆ. ರಾಷ್ಟ್ರ ರಾಜಧಾನಿಯ ಜಾಫ್ರಾಬಾದ್ ಮತ್ತು ಮೌಜ್‌ಪುರದಲ್ಲಿ ಸೋಮವಾರ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಪ್ರತಿಭಟನೆ ವೇಳೆ ನಡೆದ ಘರ್ಷಣೆಗಳಲ್ಲಿ ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ಮೃತಪಟ್ಟಿದ್ದು, ಉಪ ಪೊಲೀಸ್ ಆಯುಕ್ತರು ಗಾಯಗೊಂಡಿದ್ದಾರೆ. ಸಿಎಎ ಪರ ಮತ್ತು ವಿರೋಧಿ ಪ್ರತಿಭಟನಾಕಾರರ ಉದ್ರಿಕ್ತ ಗುಂಪುಗಳು ಮನೆಗಳು, ಅಂಗಡಿಗಳು ಮತ್ತು ವಾಹನಗಳನ್ನು ಸುಟ್ಟುಹಾಕಿದ್ದಾರೆ. ಚಾಂದ್ ಬಾಗ್ ಮತ್ತು ಭಜನ್‌ಪುರದಲ್ಲಿ ಪರಸ್ಪರ ಕಲ್ಲು ತೂರಾಟ ನಡೆದಿದೆ.

Leave a Comment