ದೆಹಲಿ ಹಿಂಸಾಚಾರ; ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ, ಭದ್ರತೆ ಒದಗಿಸಿ-ಪೊಲೀಸರಿಗೆ ಹೈಕೋರ್ಟ್ ಸೂಚನೆ

ನವದೆಹಲಿ, ಫೆ 26 – ರಾಷ್ಟ್ರ ರಾಜಧಾನಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಹಿಂಸಾಚಾರ ಕುರಿತು ಅರ್ಜಿಯ ತುರ್ತು ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ಘಟನೆಯಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ಹಾಗೂ ಭದ್ರತೆ ಒದಗಿಸುವಂತೆ ಪೊಲೀಸರಿಗೆ ಸೂಚನೆ ನೀಡಿದೆ.
ಸಿಎಎ ಕುರಿತ ಪ್ರತಿಭಟನೆ ಕೋಮು ಹಿಂಸಾಚಾರವಾಗಿ ಪರಿವರ್ತನೆಗೊಂಡಿದ್ದು, ಮಂಗಳವಾರದವರೆಗೆ ಕನಿಷ್ಠ 13 ಜನರು ಮೃತಪಟ್ಟಿದ್ದಾರೆ. ಪ್ರತಿಭಟನಾಕಾರರು ಬೀದಿಗಿಳಿದು ಸಾರ್ವಜನಿಕ ಆಸ್ತಿಗಳಿಗೆ ಹಾನಿಯುಂಟು ಮಾಡಿದ್ದು, ಜನರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡುತ್ತಿದ್ದಾರಾದರೂ, ವಿಫಲರಾಗಿದ್ದಾರೆ.
ಘಟನೆಯಲ್ಲಿ ಗಾಯಗೊಂಡವರಿಗೆ ಸೂಕ್ತ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವಂತೆ ನಿರ್ದೇಶನ ಕೋರಿ ದೆಹಲಿ ಹೈಕೋರ್ಟ್ ಗೆ ಅರ್ಜಿಯೊಂದು ಸಲ್ಲಿಕೆಯಾಗಿತ್ತು. ದೆಹಲಿಯಲ್ಲಿ ಬುಗಿಲೆದ್ದಿದ್ದ ಹಿಂಸಾಚಾರದಲ್ಲಿ ನೂರಾರು ಜನರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸುಸಜ್ಜಿತ ಆಸ್ಪತ್ರೆಗಳಿಗೆ ಸಾಗಿಸಲು ಸಾಧ್ಯವಾಗುತ್ತಿಲ್ಲ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಮುರಳೀಧರ್ ನೇತೃತ್ವದ ವಿಭಾಗೀಯ ಪೀಠ, ಗಾಯಗೊಂಡ ಸಂತ್ರಸ್ತರಂದು ಸರ್ಕಾರಿ ಆಸ್ಪತ್ರೆಗಳಿಗೆ ಸುರಕ್ಷಿತವಾಗಿ ರವಾನಿಸುವಂತೆ ದೆಹಲಿ ಪೊಲೀಸರಿಗೆ ಸೂಚನೆ ನೀಡಿದೆ. ಈ ಹಂತದಲ್ಲಿ ಅವರ ಸುರಕ್ಷತೆ ಪ್ರಮುಖ ಆದ್ಯತೆಯಾಗಿರಬೇಕು ಎಂದು ನಿರ್ದೇಶಿಸಿರುವ ನ್ಯಾಯಪೀಠ, ಈ ಸಂಬಂಧ ಪ್ರಗತಿ ವರದಿಯನ್ನು ಸಲ್ಲಿಸುವಂತೆ ಆಸ್ಪತ್ರೆ ಮುಖ್ಯಾಧಿಕಾರಿಗಳಿಗೆ ಸೂಚಿಸಿದೆ.

Leave a Comment