ದೆಹಲಿ ಹಿಂಸಾಚಾರ ಅಮೆರಿಕ ಸಂಸದರ ಕಳವಳ

ವಾಷಿಂಗ್ಟನ್, ಫೆ. ೨೭- ಪೌರತ್ವ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ನಡೆದ ಹಿಂಸಾಚಾರದ ಬಗ್ಗೆ ಅಮೆರಿಕ ಜನಪ್ರತಿನಿಧಿಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ದೆಹಲಿಯಲ್ಲಿ ನಡೆದ ವ್ಯಾಪಕ ಹಿಂಸಾಚಾರದಲ್ಲಿ ೨೭ ಮಂದಿ ಬಲಿಯಾಗಿದ್ದರು. ಈ ಬಗ್ಗೆ ಟ್ವೀಟ್ ಮಾಡಿರುವ ರಿಪಬ್ಲಿಕನ್ ಪಕ್ಷದ ಜನಪ್ರತಿನಿಧಿ ಡಾನ್‌ಬೇಯರ್ ತೀವ್ರ ಆತಂಕ ವ್ಯಕ್ತಪಡಿಸಿದ್ದು, ಭಾರತದಲ್ಲಿ ಮುಸ್ಲಿಮರ ಮೇಲೆ ನಡೆಯುತ್ತಿರುವ ದಾಳಿಯನ್ನು ಖಂಡಿಸಿದ್ದಾರೆ.
ಇದೇ ವೇಳೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ವ್ಯವಹಾರಗಳ ಸಮಿತಿ ಅಧ್ಯಕ್ಷ ಎಲಿಯಾಟ್ ಏಂಜಲ್ ಭಾರತದಲ್ಲಿ ನಡೆದಿರುವ ಕೋಮು ಹಿಂಸಾಚಾರಕ್ಕೆ ೨೭ ಮಂದಿ ಬಲಿಯಾಗಿರುವುದು ಆತಂಕದ ವಿಷಯವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡುವುದು ಎಲ್ಲರ ಹಕ್ಕು, ಆದರೆ, ಅದು ಶಾಂತಿಯುತವಾಗಿರಬೇಕು. ಪೊಲೀಸರು ಎಲ್ಲರಿಗೂ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಅಮೆರಿಕ ಕಾಂಗ್ರೆಸ್‌ನ ಮಹಿಳಾ ನಾಯಕಿ ಪ್ರಮೀಳಾ ಜೈಪಾಲ್ ಭಾರತದಲ್ಲಿ ನಡೆಯುತ್ತಿರುವ ಧಾರ್ಮಿಕ ಅಸಹಿಷ್ಣುತೆ ಹೆಸರಿನಲ್ಲಿ ನಡೆಯುತ್ತಿರುವ ಹಿಂಸಾಚಾರ ಭಯಾನಕವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿವೇಚನಾರಹಿತ ಮತ್ತು ಹೊಡೆದಾಳುವುದನ್ನು ಸಹಿಸಲು ಆಗುವುದಿಲ್ಲ. ಈ ಘಟನೆಯನ್ನು ಇಡೀ ಜಗತ್ತು ಗಮನಿಸುತ್ತಿವೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ದೆಹಲಿ ಹಿಂಸಾಚಾರ ಹತ್ತಿಕ್ಕಲು ನೈತಿಕ ನಾಯಕತ್ವದ ವೈಫಲ್ಯವಾಗಿರುವುದು ದೊಡ್ಡ ದುರಂತ. ಭಾರತದಲ್ಲಿ ಮಾನವ ಹಕ್ಕುಗಳಿಗೆ ಬೆದರಿಕೆ ಉಂಟಾದಾಗ ಆ ಬಗ್ಗೆ ದನಿ ಎತ್ತಬೇಕಾಗಿದೆ ಎಂದು ಕಾಂಗ್ರೆಸ್‌ನ ಅಲಾನ್ ಲೊವೆಂತಾಲ್ ಪ್ರತಿಕ್ರಿಯಿಸಿದ್ದಾರೆ.

Leave a Comment