ದೆಹಲಿ; ಮತ್ತೆ ದುಷ್ಕರ್ಮಿಗಳಿಂದ ಗುಂಡಿನ ದಾಳಿ; ಓರ್ವ ಆಪ್ ಕಾರ್ಯಕರ್ತನ ಸಾವು, ಮತ್ತೊಬ್ಬನಿಗೆ ಗಾಯ

ನವದೆಹಲಿ, ಫೆ 12- ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೆ ಗುಂಡಿನ ದಾಳಿ ನಡೆಸಿರುವ ಘಟನೆ ನಡೆದಿದೆ. ಆಮ್ ಆದ್ಮಿ ಪಕ್ಷದ ವಿಜೇತ ಶಾಸಕ ನರೇಶ್ ನರೇಶ್ ಯಾದವ್ ಅವರ ಬೆಂಗಾವಲು ಸಿಬ್ಬಂದಿಯ ಮೇಲೆ ಮಂಗಳವಾರ ಮಧ್ಯ ರಾತ್ರಿ ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.

ದಾಳಿಕೋರರು ಶಾಸಕನ ಬೆಂಗಾವಲು ಸಿಬ್ಬಂದಿಯ ಮೇಲೆ ನಾಲ್ಕು ಸುತ್ತು ಗುಂಡು ಹಾರಿಸಿದ್ದಾರೆ ಎಂದು ವರದಿಯಾಗಿದೆ. ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ನರೇಶ್ ಯಾದವ್ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.
ಗುಂಡಿನ ದಾಳಿಯಲ್ಲಿ ಒಬ್ಬ ಆಪ್ ಕಾರ್ಯಕರ್ತ ಸಾವನ್ನಪ್ಪಿದ್ದು, ಮತ್ತೊಬ್ಬ ವ್ಯಕ್ತಿ ಗಂಭೀರ ಗಾಯಗೊಂಡಿದ್ದಾನೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಆಪ್ ಶಾಸಕ ನರೇಶ್ ಯಾದವ್, ಇದು ಅತ್ಯಂತ ದುರದೃಷ್ಟಕರ ಘಟನೆ, ಈ ದಾಳಿ ಏಕೆ ನಡೆಸಲಾಗಿದೆ ಎಂಬುದು ತಮಗೆ ತಿಳಿಯುತ್ತಿಲ್ಲ. ನನ್ನ ಮೇಲೆ ನಾಲ್ಕು ಸುತ್ತು ಗುಂಡು ಹಾರಿಸಲಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಹಲ್ಲೆಕೋರನನ್ನು ಗುರುತಿಸಿ ಬಂಧಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ನರೇಶ್ ಯಾದವ್ ಮೆಹ್ರೌಲಿ ಕ್ಷೇತ್ರದಿಂದ ಶಾಸಕರಾಗಿ ಗೆಲುವು ಸಾಧಿಸಿದ್ದಾರೆ. ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಭರ್ಜರಿ ಜಯಗಳಿಸಿದೆ. ಈ ಹಿನ್ನಲೆಯಲ್ಲಿ ಎಎಪಿ ಶಾಸಕನ ಬೆಂಗಾವಲು ಸಿಬ್ಬಂದಿಯ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿರುವುದು ತೀವ್ರ ಚರ್ಚೆಯ ವಿಷಯವಾಗಿದೆ.

Leave a Comment