ದೆಹಲಿ ನಿಜಾಮುದ್ದೀನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾಹಿತಿ ಮುಚ್ಚಿಟ್ಟರೆ ಕೇಸ್: ಎಸ್ಪಿ ಎಚ್ಚರಿಕೆ

 

ಕಲಬುರಗಿ,ಏ.2-ಕಳೆದ ತಿಂಗಳ ಮಾ.14 ರಿಂದ 17 ರವರೆಗೆ ದೆಹಲಿಯಲ್ಲಿ ನಡೆದ ನಿಜಾಮುದ್ದೀನ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಜಿಲ್ಲೆಗೆ ಹಿಂದಿರುಗಿದವರು ತಾವು ಕೈಗೊಂಡ ಪ್ರವಾಸದ ಕುರಿತು ಜಿಲ್ಲಾ ನಿಸ್ತುಂತು ಕೋಣೆ ಸಂಖ್ಯೆ 08472-263604 ಗೆ ತಪ್ಪದೆ ಮಾಹಿತಿ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಮನವಿ ಮಾಡಿದ್ದಾರೆ.

ಒಂದು ವೇಳೆ ಸದರಿ ಕಾರ್ಯಕ್ರಮದಲ್ಲಿ ಭಾಗಿಯಾಗಿಯೂ ಕೂಡ ಈ ವಿಷಯ ಮುಚ್ಚಿಟ್ಟು ಮಾಹಿತಿ ನೀಡದೇ ಇರುವ ಸಂದರ್ಭದಲ್ಲಿ ಪೊಲೀಸ್ ಕಾರ್ಯಾಚರಣೆ ವೇಳೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ತಿಳಿದುಬಂದಲ್ಲಿ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಇನ್ನು ಪ್ರವಾಸ, ಉದ್ಯೋಗ ಹಾಗೂ ಇತರೆ ಕಾರಣಗಳಿಗಾಗಿ ಹೊರದೇಶಕ್ಕೆ ಹೋಗಿ ಜಿಲ್ಲೆಗೆ ಆಗಮಿಸಿದವರು ಕೂಟ ತಮ್ಮ ಮಾಹಿತಿಯನ್ನು ತಪ್ಪದೇ ಜಿಲ್ಲಾ ನಿಸ್ತಂತು ಕೋಣೆ ದೂರವಾಣಿ ಸಂಖ್ಯೆ 08472-263604 ಮತ್ತು ಮೊಬೈಲ್ ಗೆ ಕರೆ ಮಾಡಿ ವಿವರವಾದ ಮಾಹಿತಿಯನ್ನು ಲಿಖಿತ/ಮೌಖಿಕವಾಗಿ ನೀಡಬೇಕು, ಒಂದು ವೇಳೆ ಈ ಮಾಹಿತಿ ಒದಗಿಸುವಲ್ಲಿ ವಿಫಲವಾದಲ್ಲಿ ಮತ್ತು ಜಿಲ್ಲಾ ಪೊಲೀಸರ ಕಾರ್ಯಾಚರಣೆ ವೇಳೆ ಸತ್ಯಾಸತ್ಯತೆ ತಿಳಿದುಬಂದಲ್ಲಿ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಅಲ್ಲದೆ ಇತ್ತೀಚೆಗೆ ಕೆಲ ಕಿಡಗೇಡಿಗಳು, ಸಮಾಜಘಾತಕ ಶಕ್ತಿಗಳು ಹಾಗೂ ಸಂಘ-ಸಂಸ್ಥೆಗಳು ಕೊರೊನಾ ಸೋಂಕು ಹರಡುವಿಕೆ ಕುರಿತು ಸಾಮಾಜಿಕ ಜಾಲತಾಣಗಳಾದ ವಾಟ್ಸ್ ಅಪ್, ಫೇಸ್ ಬುಕ್, ಟಿಕ್ ಟಾಕ್ ಇತ್ಯಾದಿಗಳ ಮೂಲಕ ಸುಳ್ಳು ಸುದ್ದಿ ಸೃಷ್ಠಿಸಿ ಹರಡಿಸುತ್ತಿರುವುದು ಗಮನಕ್ಕೆ ಬಂದಿದ್ದು, ಇನ್ನು ಮುಂದೆ ಇಂತಹ ಕೃತ್ಯವೆಸಗಿದವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.

Leave a Comment