ದುಷ್ಕರ್ಮಿಗಳ ದ್ವೇಷದ ದಳ್ಳುರಿಗೆ ಗುಡಿಸಲು, ಬಣವೆ ಭಸ್ಮ

ಕೊರಟಗೆರೆ, ಜೂ. ೧೨- ದುಷ್ಕರ್ಮಿಗಳ ವೈಯಕ್ತಿಕ ದಳ್ಳುರಿಗೆ ರೈತನಿಗೆ ಸೇರಿದ ಹುಲ್ಲಿನ ಬಣವೆ ಮತ್ತು ಗುಡಿಸಲು ಸುಟ್ಟು ಭಸ್ಮವಾಗಿರುವ ಘಟನೆ ತಾಲ್ಲೂಕಿನಲ್ಲಿ ನಡೆದಿದೆ.

ತಾಲ್ಲೂಕಿನ ಕಸಬಾ ಹೋಬಳಿ ಹುಲಿಕುಂಟೆ ಗ್ರಾ.ಪಂ. ವ್ಯಾಪ್ತಿಯ ಗೌರಗಾನಹಳ್ಳಿ ಗ್ರಾಮದ ರೈತ ರಮೇಶ್ ಎಂಬುವರಿಗೆ ಸೇರಿದ ಗುಡಿಸಲಿಗೆ ಹೊಂದಿಕೊಂಡಿರುವ ಹುಲ್ಲಿನ ಬಣವೆಗೆ ಕಿಡಿಗೇಡಿಗಳು ಬೆಂಕಿ ಹಂಚಿದ ಪರಿಣಾಮ ರೈತನ ಕುಟುಂಬಕ್ಕೆ ಒಂದು ಲಕ್ಷಕ್ಕೂ ಅಧಿಕ ನಷ್ಟವಾಗಿದೆ ಎಂದು ತಿಳಿದು ಬಂದಿದೆ.

ಬೆಂಕಿಗೆ ಕೆನ್ನಾಲಿಗೆಗೆ ಸಿಲುಕಿದ 2 ಹಸುಗಳನ್ನು ರೈತ ತನ್ನ ಸಮಯ ಪ್ರಜ್ಞೆಯಿಂದ ಹೊರಗೆಳೆದು ಕಾಪಾಡಿಕೊಂಡಿದ್ದಾನೆ. ಸರ್ಕಾರಿ ಶಾಲೆಗೆ ಹೊಂದಿಕೊಂಡಿರುವ ಗುಡಿಸಲು ಧಗಧಗನೆ ಉರಿಯುತ್ತಿದ್ದ ಸಂದರ್ಭದಲ್ಲಿ ಗ್ರಾಮಸ್ಥರು ಬೆಂಕಿಯನ್ನು ನಂದಿಸಲು ಹರಸಾಹಪಟ್ಟರೂ ಪ್ರಯೋಜನವಾಗಿಲ್ಲ. ನಂತರ ಅಗ್ನಿಶಾಮಕ ದಳದವರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹಸುಗಳಿಗಾಗಿ ಸಂಗ್ರಹಿಸಿಟ್ಟಿದ್ದ ಸುಮಾರು 1 ಲಕ್ಷ ರೂ. ಮೌಲ್ಯದ ಮೇವು ಸಂಪೂರ್ಣ ಬೆಂಕಿಗಾಹುತಿಯಾಗಿದ್ದು, ಇದರಿಂದ ರೈತ ರಮೇಶ್‌ನಿಗೆ ನಷ್ಟ ಉಂಟಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Leave a Comment