ದುಶ್ಚಟಗಳಿಗೆ ಬೈಕ್ ಕಳವು 7 ಮಂದಿ ಸೆರೆ

ಬೆಂಗಳೂರು, ಏ. ೧೬- ದುಶ್ಚಟಗಳಿಗಾಗಿ ಹ್ಯಾಂಡಲ್ ಲಾಕ್ ಮುರಿದು ಬೈಕ್‌ಗಳನ್ನು ಕಳವು ಮಾಡುತ್ತಿದ್ದ 7 ಮಂದಿ ಆರೋಪಿಗಳನ್ನು ಬಂಧಿಸಿರುವ ನಂದಿನಿ ಲೇಔಟ್ ಪೊಲೀಸರು, 10 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ತೋಟದ ಗುಡ್ಡದಹಳ್ಳಿಯ ಸಂತೋಷ್ ಅಲಿಯಾಸ್ ಬಾಟ್ಲು (22), ಶರತ್ ಅಲಿಯಾಸ್ ಥಾಮಸ್ (21), ನಾಗಸಂದ್ರದ ರೋಹಿತ್ ರೆಡ್ಡಿ (21), ಲಗ್ಗೆರೆಯ ಮುಬಾರಕ್ (21), ನಂದಿನಿ ಲೇಔಟ್‌ನ ಮೋಹನ್ ಸಿಂಗ್ ಅಲಿಯಾಸ್ ಚಪ್ಪರ್ ಮನು (19), ಚನ್ನರಾಯಪಟ್ಟಣದ ತಣ್ಣೀರುಹಳ್ಳದ ಚಂದನ್ (24), ಕೂಲಿನಗರದ ಸಂತೋಶ್ ಅಲಿಯಾಸ್ ಸಂತು (18) ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಿಂದ 2 ಲಕ್ಷ 51 ಸಾವಿರ ರೂ. ಮೌಲ್ಯದ 10 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು, ನಂದಿನಿ ಲೇಔಟ್‌ನ – 4, ಬಸವೇಶ್ವರನಗರ ತಲಾ 1 ಸೇರಿದಂತೆ, ಆರು ಪ್ರಕರಣಗಳನ್ನು ಪತ್ತೆಹಚ್ಚಿದ್ದು, ನಾಲ್ಕು ವಾಹನ ಮಾಲೀಕರು ಪತ್ತೆಯಾಗಬೇಕಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.
ಆರೋಪಿಗಳು ಎರಡು ಗ್ಯಾಂಗ್‌ಗಳನ್ನು ಮಾಡಿಕೊಂಡು ಮನೆಗಳ ಮುಂದೆ ಹಾಗೂ ವಾಹನ ನಿಲುಗಡೆ ಪ್ರದೇಶಗಳಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ಹ್ಯಾಂಡಲ್ ಲಾಕ್ ಮುರಿದು ಕಳವು ಮಾಡಿ, ಮಾರಾಟ ಮಾಡಿ ದುಶ್ಚಟಗಳಿಗೆ ಹಣ ವಿನಿಯೋಗಿಸುತ್ತಿದ್ದರು.
ಆರೋಪಿಗಳಲ್ಲಿ ಸಂತೋಷ್ ಅಲಿಯಾಸ್ ಬಾಟ್ಲು, ಸಂತೋಶ್ ಅಲಿಯಾಸ್ ಸಂತು, ಚಂದನ್ ಹಾಗೂ ಮುಬಾರಕ್ ಹಿಂದೆ ಕೂಡ ವಾಹನ ಕಳವು ಪ್ರಕರಣಗಳಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದ ನಂತರವೂ ವಾಹನ ಕಳವು ಕೃತ್ಯಗಳಲ್ಲಿ ಭಾಗಿಯಾಗಿದ್ದರು.
ಲಗ್ಗೆರೆಯ ಪ್ರೀತಿನಗರದಲ್ಲಿ ಮನೆಯ ಮುಂಭಾಗ ನಿಲ್ಲಿಸಿದ್ದ ಬೈಕ್ ಕಳುವಾಗಿದ್ದ ಪ್ರಕರಣ ದಾಖಲಿಸಿಕೊಂಡ ನಂದಿನಿ ಲೇಔಟ್‌ನ ಪೊಲೀಸ್ ಇನ್ಸ್‌ಪೆಕ್ಟರ್ ಲೋಹಿತ್, ಮತ್ತವರ ಸಿಬ್ಬಂದಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆಂದು ಅವರು ತಿಳಿಸಿದ್ದಾರೆ.

Leave a Comment