ದುಶ್ಚಟಗಳನ್ನು ಸಂಪೂರ್ಣವಾಗಿ ತ್ಯಜಿಸಿ : ಡಾ.ಅಮೃತ

ತಿ.ನರಸೀಪುರ. ಜೂ.12- ಆರೋಗ್ಯಕ್ಕೆ ಹಾನಿಕಾರಕವಾಗುವ ದುಶ್ಚಟಗಳನ್ನು ಸಂಪೂರ್ಣವಾಗಿ ತ್ಯಜಿಸಿ, ಅನಾರೋಗ್ಯ ಸಂದರ್ಭದಲ್ಲಿ ಕಾಲ ಕಾಲಕ್ಕೆ ಸೂಕ್ತ ಚಿಕಿತ್ಸೆ ಪಡೆಯುವ ಮೂಲಕ ಗ್ರಾಮೀಣ ಜನರು ಆರೋಗ್ಯವಂತ ಜೀವನವನ್ನು ನಡೆಸಬೇಕು ಎಂದು ನಾರಾಯಣ ಹೃದಯಾಲಯ ವೈದ್ಯಾಧಿಕಾರಿ ಡಾ.ಅಮೃತ ಹೇಳಿದರು.
ತಾಲ್ಲೂಕಿನ ದೊಡ್ಡೇಬ್ಬಾಗಿಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಬೆಳಕು ಸೇವಾ ಸಂಸ್ಥೆ ಚಾರಿಟಬಲ್ ಟ್ರಸ್ಟ್, ಪ್ರೇರಣಾ ವಿವಿದೋದ್ದೇಶ ಸೇವಾ ಸಂಸ್ಥೆ, ಕೆ.ಆರ್.ಆಸ್ಪತ್ರೆ ಹಾಗೂ ನಾರಾಯಣ ಹೆಲ್ತ್ ಸಿ.ಎಸ್.ಆರ್ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಉಚಿತ ನೇತ್ರ ಹಾಗೂ ಸಾಮಾನ್ಯ ಆರೋಗ್ಯ ತಪಾಸಣಾ ಶಿಬಿರದಲ್ಲಿ ಧೂಮಪಾನದಿಂದ ಉಂಟಾಗುವ ಕ್ಯಾನ್ಸರ್ ಬಗ್ಗೆ ಪ್ರಾತ್ಯಕ್ಷಿಕೆ ನೀಡಿ ಮಾತನಾಡಿದರು.
ಬದುಕಿಗೆ ಅಪಾಯಕಾರಿಯಾಗಿರುವ ಧೂಮಪಾನದಂತಹ ಕೆಟ್ಟ ಚಟದಿಂದಲೇ ಕ್ಯಾನ್ಸರ್ ಖಾಯಿಲೆ ಬರುತ್ತದೆ. ಅನಾರೋಗ್ಯವಾಗುವ ಅರಿವಿದ್ದರೂ ಧೂಮಪಾನ ತ್ಯಜಿಸಲಾಗದೆ ನರಳುವುದನ್ನು ಸಾಮಾನ್ಯವಾಗಿ ನೋಡುತ್ತಿದ್ದೇವೆ. ಆದ್ದರಿಂದ ಬಹುತೇಕ ಅನಾರೋಗ್ಯ ಸಮಸ್ಯೆಗಳಿಗೆ ದುಶ್ಚಟಗಳ ದಾಸರಾಗಿ ತುತ್ತಾಗುತ್ತಿದ್ದೇವೆ. ಹವಮಾನ ವೈಪರಿತ್ಯದಿಂದಾಗಿ ಬರುವ ಆರೋಗ್ಯ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು ಎಂದು ಡಾ.ಅಮೃತ ಸಲಹೆ ನೀಡಿದರು.
ಪ್ರೇರಣಾ ವಿವಿದೋದ್ದೇಶ ಸೇವಾ ಸಂಸ್ಥೆಯ ಹೆಚ್.ಎಂ.ಮಧು ಮಾತನಾಡಿ, ಗ್ರಾಮೀಣ ಪ್ರದೇಶಗಳ ಜನರಿಗೆ ಆರೋಗ್ಯದ ನೆರವು ನೀಡಲು ನಿರಂತರವಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ನಡೆಸುತ್ತಿದ್ದೇವೆ. ಅಲ್ಲದೆ ಆರೋಗ್ಯದ ಜಾಗೃತಿಯನ್ನು ಮೂಡಿಸಿ, ರಕ್ತದಾನ ಶಿಬಿರಗಳನ್ನು ನಡೆಸಲಾಗುತ್ತಿದೆ. ನಮ್ಮ ಸೇವಾ ಕಾರ್ಯಕ್ಕೆ ವೈದ್ಯರು ಕೂಡ ಸಹಕಾರ ನೀಡಿ ನಮ್ಮ ಸೇವೆಗೆ ಬೆಂಬಲವಾಗಿದ್ದಾರೆ ಎಂದು ತಿಳಿಸಿದರು.
ಉಚಿತ ನೇತ್ರ ಹಾಗೂ ಸಾಮಾನ್ಯ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮೂರು ನೂರಕ್ಕೆ ಹೆಚ್ಚು ಜನರು ಆರೋಗ್ಯವನ್ನು ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆಯನ್ನು ಪಡೆದರು. ಗ್ರಾ.ಪಂ ಅಧ್ಯಕ್ಷೆ ಚೆನ್ನಮ್ಮ ಶಿಬಿರವನ್ನು ಉದ್ಘಾಟಿಸಿದರು. ಎಪಿಎಂಸಿ ಉಪಾಧ್ಯಕ್ಷ ಮಹದೇವಯ್ಯ, ಗ್ರಾ.ಪಂ ಸದಸ್ಯರಾದ ಪುಟ್ಟಸ್ವಾಮಿ, ಎಸ್‍ಡಿಎಂಸಿ ಅಧ್ಯಕ್ಷ ಶಂಕರಮೂರ್ತಿ, ವೈದ್ಯಾಧಿಕಾರಿಗಳಾದ ಡಾ.ಮಂಜೂಸ್, ಡಾ.ಶಿಲ್ಪಾ, ಡಾ.ಆಶಾ, ಡಾ.ಅನೂಷ, ಬೇಬಿ, ಶಾಂಭವಿ, ಮುಖಂಡ ಷಢಕ್ಷರಿ, ಬೆಳಕು ಸೇವಾ ಸಂಸ್ಥೆಯ ಶರತ್, ಮಧುಸೂದನ್, ಪ್ರೇರಣಾ ವಿವಿದೋದ್ದೇಶ ಸೇವಾ ಸಂಸ್ಥೆಯ ಸಿದ್ದು ಹೊಸಪುರ, ಮಹೇಶ, ದಕ್ಷಿಣಮೂರರ್ತಿ ಹಾಗೂ ಇನ್ನಿತರರು ಹಾಜರಿದ್ದರು.

Leave a Comment