ದುರ್ಗಮ್ಮ ದೇವಸ್ಥಾನ ಕಾಂಪೌಂಡ್ ರಾತ್ರೋರಾತ್ರಿ ಗೇಟ್ ಬಂದ್

ಬಳ್ಳಾರಿ, ಅ.12: ನಗರದ ಆರಾಧ್ಯ ದೇವತೆ ಶ್ರೀ ಕನಕ ದುರ್ಗಮ್ಮ ದೇವಸ್ಥಾನದ ಆವರಣಕ್ಕೆ ನಿರ್ಮಿಸುತ್ತಿರುವ ಕಾಂಪೌಂಡ್ ಗೆ ಪೂರ್ವ ದಿಕ್ಕಿನಲ್ಲಿ ಗೇಟ್ ಮಾಡಲು ಬಿಡಲಾಗಿತ್ತು. ಆದರೆ ಈಗ ರಾತ್ರೋರಾತ್ರಿ ಅದನ್ನು ಬಂದ್ ಮಾಡಿ ಗೋಡೆ ಕಟ್ಟಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇವಸ್ಥಾನ ಆವರಣದ ಒತ್ತುವರಿ ನಡೆಯುತ್ತಿದೆ. ಅದನ್ನು ನಿಲ್ಲಿಸಬೇಕು, ಮತ್ತು ರಾತ್ರಿ ವೇಳೆ ಇಲ್ಲಿ ನಿಲ್ಲಿಸುವ ವಾಹನಗಳಿಂದ ಅನೈತಿಕ ಚಟುವಟಿಕೆ ನಡೆಯುತ್ತಿದೆ ಇದಕ್ಕೆ ಕಡಿವಾಣ ಹಾಕಬೇಕು ಎಂದು ಜಿಲ್ಲಾಡಳಿತ ಧಾರ್ಮಿಕ ದತ್ತಿ ಇಲಾಖೆಯಿಂದ ಭೂಸೈನಾ ನಿಗಮಕ್ಕೇಳಿ ಕಾಂಪೌಂಡ್ ನಿರ್ಮಾಣಕ್ಕೆ ಮುಂದಾಗಿದೆ. ಈ ಮೊದಲು ಆರು ಅಡಿ ಗೋಡೆ ನಿರ್ಮಿಸಬೇಕೆಂಬ ಉದ್ದೇಶವಿತ್ತಂತೆ. ಆದರೆ ಒಳಗಡೆ ಎನೋ ನಡೆಯುತ್ತದೆಂದು ಹೊರಗೆ ಕಾಣದಾಗುತ್ತೆ. ಇದು ಮತ್ತಷ್ಟು ಅನೈತಿಕ ಚಟುವಟಿಕೆಗಳಿಗೆ ದಾರಿ ಮಾಡಿ ಕೊಡಬಹುದು, ಸಿಡಿಬಂಡಿ ಸಂದರ್ಭದಲ್ಲೂ ನೋಡುಗರಿಗೆ ಅಡ್ಡಿಯಾಗುತ್ತದೆಂಬ ಅಭಿಪ್ರಾಯದ ಮೇಲೆ ಈಗ ಎರಡು ಅಡಿ ಗೋಡೆ ಕಟ್ಟಿ ಉಳಿದ ಎತ್ತರಕ್ಕೆ ಗ್ರಿಲ್ ಅಳವಡಿಸಲು ನಿರ್ಧರಿಸಿದೆಯಂತೆ.

ಇನ್ನು ಕಾಂಪೌಂಡ್ ಒಳಗಿಂದ ಜನ ಹೊರಗಡೆ ಬರಲು ಒಳ ಹೋಗಲೆಂದು ದಕ್ಷಿಣ ಪೂರ್ವ ಮತ್ತು ಉತ್ತರಕ್ಕೆ ಗೇಟು ಅಳವಡಿಸಲು ಜಾಗ ಬಿಡಲಾಗಿತ್ತು. ಆದರೆ ಕೆಲ ದಿನಗಳ ಹಿಂದೆ ರಾತ್ರೋರಾತ್ರಿ ಪೂರ್ವ ಗೇಟಿನ ಸ್ಥಳದಲ್ಲಿ ಕಾಂಪೌಂಡ್ ನಿರ್ಮಿಸಲಾಗಿದೆ.

ಇದರಿಂದ ಅಂ‌ಡರ್ ಬ್ರಿಡ್ಜ್ ಕಡೆಯಿಂದ ಬರುವ ಭಕ್ತಾಧಿಗಳು ಸುತ್ತುವರಿದು ಹೋಗದೆ ನಿರ್ಮಿಸಿರುವ ಗೋಡೆ ನೆಗೆದು ಹೋಗುವ ದೃಶ್ಯ ಕಂಡು ಬರುತ್ತಿದೆ.

ಈ ಬಗ್ಗೆ ಭಕ್ತಾದಿಗಳಾದ ಗುಗ್ಗರಹಟ್ಟಿಯ ಮಹೇಶ್ವರಿ, ಬಂಡಿಮೋಟ್ ನ ನಾಗಪ್ಪ, ಮೊದಲಾದವರು ಮೊದಲು ಬೇಸಿತ್ತು. ಇದೆಲ್ಲಾ ಕಟ್ಟಿ ತೊಂದರೆ ಮಾಡಲಾಗಿದೆ. ಇಲ್ಲಿ ಮೊದಲು ಜಾಗ ಬಿಟ್ಟಿತ್ತು ಅದಕ್ಕೂ ಗೋಡೆ ಕಟ್ಟಿ ಹಾಳು ಮಾಡಿದ್ದಾರೆಂದು ಹಿಡಿ ಶಾಪ ಹಾಕಿದರು.

ಬಹುತೇಕ ದೇವಸ್ಥಾನಕ್ಕೆ ಬರುವ ಭಕ್ತರು ಗೋಡೆಗೆ ಕಲ್ಲುಗಳನ್ನು ಇಟ್ಟು ಆಕಡೆ ಈಕಡೆ ದಾಟುತ್ತಿದ್ದಾರೆ.

ಹೀಗೇಕೆ ಪೂರ್ವ ದಿಕ್ಕಿನ ಗೇಟ್ ಗೆ ಕಾಯ್ದಿರಿಸಿದ್ದ ಸ್ಥಳದಲ್ಲಿ ಗೋಡೆ ನಿರ್ಮಿಸಿದೆ ಎಂದು ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಮಹೇಶ್ ಅವರನ್ನು ಪ್ರಶ್ನಿಸಿದರೆ, ಹೌದು ಈ ಬಗ್ಗೆ ಅನೇಕ ಜನ ದೂರು ನೀಡಿದರೆ, ಕೂಡಲೇ ಅದನ್ನು ತೆರವುಗೊಳಿಸಿ ಭಕ್ತರಿಗೆ ಅನುಕೂಲ ಮಾಡಿಕೊಡುವುದಾಗಿ ಸಂಜೆವಾಣಿಗೆ ತಿಳಿಸಿದರು.

ಏನೇ ಅಭಿವೃದ್ಧಿ ಆಗಲಿ ಜನರಿಗೆ ಸಹಕಾರಿಯಾಗಿರಬೇಕೆ ಹೊರತು ಕಿರಿಕಿರಿಯನ್ನು ಉಂಟು ಮಾಡುವ ಉದ್ದೇಶ ಅಧಿಕಾರಿಗಳಿಗೇಕೆ. ಸಿಡಿಬಂಡಿ ನಡೆದಾಗ ಸೇರುವ ಸಾವಿರಾರು ಜನ ಅತ್ತಿಂದಿತ್ತಾ ಹೋಗಲು ಈ ಕಾಂಪೌಂಡ್ ಅಡಿಯಾಗುತ್ತೆ ಮುಂದೆ ಇದರಿಂದ ಇನ್ನೇನು ಸಮಸ್ಯೆ ಆಗುತ್ತೆ ಎಂಬುದು ಕಾದುನೋಡಬೇಕಿದೆ ಎಂದು ಹಲವರು ಹೇಳಿದ್ದಾರೆ.

Leave a Comment